ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಳಸದ ಅಥವಾ ನಿರ್ಬಂಧಿಸಲಾಗಿದ್ದ ಬಿಲ್ಡಿಂಗ್‌ಗಳಿಗೆ ಆಸ್ತಿ ತೆರಿಗೆ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.
ಅರ್ಜಿಯ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ದುರುದ್ದೇಶಪೂರಿತ ಕ್ರಮಕೈಗೊಂಡರೆ ಪರಿಹಾರ ಕೋರಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಕದ ತಟ್ಟಬಹುದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ನಗರದಲ್ಲಿ ಶಾಪಿಂಗ್ ಮಾಲ್ ಹೊಂದಿರುವ ಜಿ ಟಿ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಕಡ್ಡಾಯವಾಗಿ ಲಾಕ್‌ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಬಳಕೆಯಾಗದ ಆಸ್ತಿ ಮತ್ತು ಬಿಲ್ಡಿಂಗ್ ಮೇಲೆ ತೆರಿಗೆ ವಿಧಿಸಲಾಗದು ಎಂದು ಅರ್ಜಿದಾರರು ವಾದಿಸಿದ್ದರು.
2019-20, 2020-21 ಮತ್ತು 2021-22ರಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಹಲವು ದಿನಗಳ ಕಾಲ ಶಾಪಿಂಗ್ ಮಾಲ್ ಅನ್ನು ನಿರ್ಬಂಧಿಸಲಾಗಿತ್ತು. ಸಿನಿಮಾ ಥಿಯೇಟರ್ ಮತ್ತು ಫುಡ್ ಕೋರ್ಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಜನರ ಸಂಖ್ಯೆ ನಿಂತು ಹೋಗಿತ್ತು ಎಂದು ಅರ್ಜಿದಾರರು ವಾದಿಸಿದ್ದಾರೆ. “ಲಾಕ್‌ಡೌನ್ ಸಂದರ್ಭದಲ್ಲಿ ನಿರ್ದಿಷ್ಟ ಬಿಲ್ಡಿಂಗ್‌ನಿಂದ ಯಾವುದೇ ಆದಾಯ ಇಲ್ಲದಿದ್ದರು ಆಸ್ತಿಗೆ ನಗರಪಾಲಿಕೆ ತೆರಿಗೆ ವಿಧಿಸುವುದು ಆಸ್ತಿ ವಶಪಡಿಸಿಕೊಳ್ಳುವ ರೀತಿಯಲ್ಲಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಲಾಕ್‌ಡೌನ್‌ನಿಂದ ಶಾಪಿಂಗ್ ಮಾಲ್ ನಿರ್ಬಂಧವಾಗಿದ್ದರೂ ಆಡಳಿತವು ಸಾಕಷ್ಟು ಶುಲ್ಕ ಮತ್ತು ವೆಚ್ಚಗಳನ್ನು ಪಾವತಿಸಿದೆ. ಖಾಲಿ ಬಿಲ್ಡಿಂಗ್‌ಗಳಿಗೆ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಕರ ವಿಧಿಸುವುದು ಸ್ವತ್ತುಗಳ ಬಂಡವಾಳದ ಮೌಲ್ಯದ ಮೇಲೆ ಕರ ವಿಧಿಸುವ ಸಂಸತ್ತಿನ ಅಧಿಕಾರವನ್ನು ಅತಿಕ್ರಮಿಸಿದಂತಾಗುತ್ತಾದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಬಿಲ್ಡಿಂಗ್ ಮತ್ತು ಆಸ್ತಿಗಳ ಮೇಲೆ ತೆರಿಗೆ ವಿಧಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಮತ್ತು ನಿರಂಕುಶ ಕ್ರಮ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ. ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಲಾಗಿದೆ.