ಟ್ವಿಟರ್‌ಗೆ ವಿಧಿಸಿದ್ದ ₹50 ಲಕ್ಷ ದಂಡದ ಆದೇಶಕ್ಕೆ ತಡೆ; ₹25 ಲಕ್ಷ ಠೇವಣಿ ಇರಿಸಲು ಹೈಕೋರ್ಟ್‌ ಸೂಚನೆ

ಎಕ್ಸ್‌ ಕಾರ್ಪ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆ ವಿಧಿಸಿದೆ.
Karnataka High Court, X
Karnataka High Court, X

ಕೇಂದ್ರ ಸರ್ಕಾರವು 2021 ಮತ್ತು 2022ರ ಅವಧಿಯಲ್ಲಿ ಆಯ್ದ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲು ಸೂಚಿಸಿ ಮಾಡಿದ್ದ ಆದೇಶಗಳನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಆರೋಪದ ಮೇಲೆ ಟ್ವಿಟರ್‌ಗೆ (ಈಗ ಎಕ್ಸ್‌ ಕಾರ್ಪ್‌) ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ವಿಧಿಸಿದ್ದ ₹50 ಲಕ್ಷ ದಂಡದ ಆದೇಶಕ್ಕೆ ಗುರುವಾರ ವಿಭಾಗೀಯ ಪೀಠವು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆ ವಿಧಿಸಿದೆ.

ಎಕ್ಸ್‌ ಕಾರ್ಪ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಒಂದು ವಾರದಲ್ಲಿ ಮೇಲ್ಮನವಿದಾರರು ₹25 ಲಕ್ಷ ರೂಪಾಯಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಆದೇಶಕ್ಕೆ ಒಳಪಟ್ಟು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿತು.

“ಮೇಲ್ಮನವಿದಾರ ಟ್ವಿಟರ್‌ಗೆ‌ ದಂಡದ ಮೊತ್ತದ ಪೈಕಿ ₹25 ಲಕ್ಷವನ್ನು ಠೇವಣಿ ಇಡುವಂತೆ ಆದೇಶ ಮಾಡಿರುವುದನ್ನು ಟ್ವಿಟರ್‌ ಪರವಾಗಿ ನ್ಯಾಯವಿದೆ ಎಂದು ಅರ್ಥೈಸಬಾರದು ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ. ದಂಡದ ಮೊತ್ತದ ಪೈಕಿ ನಿರ್ದಿಷ್ಟ ಪಾಲನ್ನು ಠೇವಣಿ ಇಡುತ್ತೇವೆ ಎಂದು ತಮ್ಮ ಪ್ರಾಮಾಣಿಕತೆಯನ್ನು ತೋರಿಸಲು ಮೇಲ್ಮನವಿದಾರರು ಹೇಳಿಕೆ ನೀಡಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

Also Read
ಖಾತೆ ನಿರ್ಬಂಧ ಪ್ರಕರಣ: ಟ್ವಿಟರ್‌ಗೆ ₹50 ಲಕ್ಷ ದಂಡ ವಿಧಿಸಿ, ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ್ದು ಮಧ್ಯಂತರ ತಡೆಯಾಜ್ಞೆ ತೆರವು ಮಾಡಲು ಬಯಸಿದಲ್ಲಿ ಅದಕ್ಕೂ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ವಿಚಾರಣೆಯನ್ನು ಆಗಸ್ಟ್‌ 30ಕ್ಕೆ ಮುಂದೂಡಿದೆ.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ ಅವರು “ನಂಬಿಕೆ ಸಾಬೀತುಪಡಿಸುವ ನಿಟ್ಟಿನಲ್ಲಿ ದಂಡದ ನಿರ್ದಿಷ್ಟ ಭಾಗವನ್ನು ಪಾವತಿಸಲು ಸಿದ್ಧವಾಗಿದ್ದೇವೆ” ಎಂದು ತಿಳಿಸಿದರು.

Also Read
ವೈಯಕ್ತಿಕ ಖಾತೆ ನಿರ್ಬಂಧ: ಟ್ವಿಟರ್‌ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಎಕ್ಸ್‌ ಕಾರ್ಪ್‌

ನ್ಯಾಯಾಲಯದ ಆದೇಶ ದಾಖಲಿಸಿದ ಅಂತ್ಯದಲ್ಲಿ ₹25 ಲಕ್ಷವನ್ನು ಒಂದು ವಾರದಲ್ಲಿ ಪಾವತಿಸಬೇಕು ಎಂಬುದಕ್ಕೆ ಹೆಚ್ಚಿನ ಕಾಲಾವಕಾಶ ಕೋರಿದರು. ಇದಕ್ಕೆ ಪೀಠವು “ದೈತ್ಯ ಕಂಪೆನಿಯಾದ ನಿಮಗೆ ಇದು ದೊಡ್ಡ ಮೊತ್ತವೇನಲ್ಲ. ಎಕ್ಸ್‌ ಕಾರ್ಪ್‌ ಒಂದು ವಾರಕ್ಕೆ ಹಲವು ಕೋಟಿ ವ್ಯವಹಾರ ನಡೆಸುತ್ತಿದೆ. ಈ ಹಣವನ್ನು ಒಂದೇ ದಿನದಲ್ಲಿ ಪಾವತಿಸಬಹುದು. ಒಂದು ವಾರ ಕಾಲಾವಕಾಶ ಸಾಕು” ಎಂದು ಮೌಖಿಕವಾಗಿ ಹೇಳಿತು. ಕೇಂದ್ರ ಸರ್ಕಾರದ ವಕೀಲ ಎಂ ಎನ್‌ ಕುಮಾರ್‌ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಆಗಸ್ಟ್‌ 14ರ ಒಳಗೆ ₹50 ಲಕ್ಷ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದ್ದಲ್ಲಿ ಪ್ರತಿದಿನ ಹೆಚ್ಚುವರಿಯಾಗಿ ₹5,000 ಪಾವತಿಸಬೇಕು ಎಂದು ಏಕಸದಸ್ಯ ಪೀಠವು ಎಕ್ಸ್‌ ಕಾರ್ಪ್‌ಗೆ ಆದೇಶ ಮಾಡಿತ್ತು.

Kannada Bar & Bench
kannada.barandbench.com