ಅಪಾಯಕಾರಿಯಾದ 23 ಶ್ವಾನ ತಳಿ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಹೈಕೋರ್ಟ್‌ ತಡೆ

ಯಾವ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದರ ಸಂಬಂಧದ ದಾಖಲೆಯನ್ನು ಉಪ ಸಾಲಿಸಿಟರ್‌ ಜನರಲ್‌ ಅವರು ಸಲ್ಲಿಸುವವರೆಗೆ ಸುತ್ತೋಲೆಗೆ ಕರ್ನಾಟಕದಲ್ಲಿ ತಡೆಯಾಜ್ಞೆ ಇರಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
Rottweiler and Karnataka High Court
Rottweiler and Karnataka High Court
Published on

ಮನುಷ್ಯನ ಜೀವಕ್ಕೆ ಎರವಾಗಬಹುದಾದ 23 ಭೀಷಣ ಶ್ವಾನ ತಳಿಗಳ ಸಾಕುವಿಕೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಈಚೆಗೆ ಹೊರಡಿಸಿದ್ದ ಸುತ್ತೋಲೆಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ತಜ್ಞರು ಸಂಬಂಧಿತ ಯಾರನ್ನು ಸಂಪರ್ಕಿಸಿಲ್ಲ ಎಂದು ಆಕ್ಷೇಪಿಸಿ ವೃತ್ತಿಪರ ಶ್ವಾನ ಹ್ಯಾಂಡ್ಲರ್‌ ಮತ್ತು ರಾಟ್‌ವೈಲರ್‌ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ತಡೆಯಾಜ್ಞೆಯು ಕರ್ನಾಟಕಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಯಾವ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದರ ಸಂಬಂಧದ ದಾಖಲೆಯನ್ನು ಉಪ ಸಾಲಿಸಿಟರ್‌ ಜನರಲ್‌ ಅವರು ಸಲ್ಲಿಸುವವರೆಗೆ ಸುತ್ತೋಲೆಗೆ ಕರ್ನಾಟಕದಲ್ಲಿ ತಡೆಯಾಜ್ಞೆ ಇರಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಇಂಥ ಶ್ವಾನಗಳನ್ನು ಬೆಳೆಸಿರುವವರು ಅವುಗಳ ಸಂತಾನಶಕ್ತಿ ಹರಣ ಮಾಡುವ ಮೂಲಕ ಆ ತಳಿಗಳ ಅಭಿವೃದ್ಧಿಗೆ ತಡೆಯೊಡ್ಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ ಎಂದು ನ್ಯಾಯಾಲಯ ದಾಖಲಿಸಿದೆ. “ಈ ಶ್ವಾನಗಳು ಅಪಾಯಕಾರಿ ಮತ್ತು ಮನುಷ್ಯನ ಬದುಕಿಗೆ ಎರವಾಗಲಿವೆ ಎಂದು ಸಮಿತಿಯೂ ಮನಗಂಡಿರುವಂತಿದೆ. ಇಡೀ ದೇಶಕ್ಕೆ ಸುತ್ತೋಲೆಯು ಅನ್ವಯಸಲಿದ್ದು, ಈ ತಳಿಯ ಶ್ವಾನಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ” ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ ೫ಕ್ಕೆ ಮುಂದೂಡಿದೆ.

ಮಾನವ ಬದುಕಿಗೆ ಅಪಾಯಕಾರಿಯಾಗಿರುವ ಈ ಶ್ವಾನಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಪಾಯಕಾರಿಯಾಗಿರುವ ಶ್ವಾನ ತಳಿಗಳ ಇಟ್ಟುಕೊಳ್ಳುವುದಕ್ಕೆ ಪರವಾನಗಿ ನೀಡಬಾರದು ಎಂಬ ಬೇಡಿಕೆಯ ಕುರಿತು ತುರ್ತಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತ್ತು.

ಪಿಟ್‌ಬುಲ್‌ ಟೆರಿಯರ್‌, ಟೋಸ ಇನು, ಅಮೆರಿಕನ್‌ ಸ್ಟಾಫೋರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರಸಿಲೈರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ಡಾಗ್‌, ಬೋರ್‌ಬೋಯಲ್‌, ಕಂಗಲ್‌, ಸೆಂಟ್ರಲ್‌ ಏಷ್ಯನ್‌ ಶೆಫರ್ಡ್‌ ಡಾಗ್‌, ಕಾಕಸಿಯನ್‌ ಸ್ಟೆಫರ್ಡ್‌ ಡಾಗ್‌, ಸೌತ್‌ ರಷ್ಯನ್‌ ಶೆಫರ್ಡ್‌ ಡಾಗ್‌, ಟೋರ್ನಜಕ್‌, ಸರ್ಪ್ಲಾನಿನಕ್‌, ಜಪಾನೀಸ್‌ ಟೋಸಾ, ಜಪಾನೀಸ್‌ ಅಕಿತಾ, ಮಸ್ಟಿಫ್ಸ್‌, ರಾಟ್‌ವೈಲರ್‌, ಟೆರಿರಯರ್ಸ್‌, ರೋಡೆಸಿಯನ್‌ ರಿಡ್ಜ್‌ಬ್ಯಾಕ್‌, ವೂಲ್ಫ್‌ ಡಾಗ್ಸ್‌, ಕೆನರಿಯೋ ಅಕ್ಬಾಷ್‌ ಡಾಗ್‌, ಮಾಸ್ಕೋ ಗಾರ್ಡ್‌ ಡಾಗ್‌, ಕೇನ್‌ ಕೊರ್ಸೊ, ಬ್ಯಾನ್‌ ಡಾಗ್‌ ತಳಿಯ ಶ್ವಾನಗಳು ಅಪಾಯಕಾರಿ ಎಂದು ತಜ್ಞರ ಸಮಿತಿ ಹೇಳಿತ್ತು.

ಅರ್ಜಿದಾರರ ಪರವಾಗಿ ವಕೀಲ ಸ್ವರೂಪ್‌ ಆನಂದ್‌ ಆರ್‌ ಅವರು ವಾದಿಸಿದರು.

Kannada Bar & Bench
kannada.barandbench.com