ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ ಎಂದು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಅರ್ಜಿದಾರ ತೇಜಸ್ವಿ ಸೂರ್ಯ ಸಂಸದರಾಗಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಪೊಲೀಸರು ಸ್ಪಷ್ಟನೆ ನೀಡಿದ ಬಳಿಕ ಟ್ವೀಟ್ ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಬಿಎನ್‌ಎಸ್ ಸೆಕ್ಷನ್ 353 (2) ಅಡಿ ಅಪರಾಧವಾಗುವುದಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗಿದೆ. ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು ಮಧ್ಯಂತರ ಆದೇಶ ಮಾಡುವುದಕ್ಕೆ ವಿರೋಧಿಸಿದ್ದು, ಅದರಲ್ಲಿ ಬದಲಾವಣೆ ಮಾಡುವಂತೆ ಕೋರಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ. ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ” ಎಂದು ಮಧ್ಯಂತರ ಆದೇಶ ಮಾಡಿದೆ.
ಇದಕ್ಕೂ ಮುನ್ನ, ಬೆಳ್ಳಿಯಪ್ಪ ಅವರು ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್ ಓದಿ “ಇದು ಭಾವನೆಗೆ ಧಕ್ಕೆ ಉಂಟು ಮಾಡುವುದಿಲ್ಲವೇ? ಇದು ಸಮುದಾಯಗಳ ನಡುವೆ ದ್ವೇಷ ಹರಡುವ ಕೃತ್ಯವಲ್ಲವೇ?” ಎಂದರು.
ಆಗ ಪೀಠವು “ನಿನ್ನೆ ಬೇರೊಂದು ಪ್ರಕರಣದ ವಿಚಾರಣೆ (ಮಾಜಿ ಸಿಎಂ ಬಸವರಾಜ ಬೊಮ್ಮಾಯಿ) ವೇಳೆ ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿದ್ದೇನೆ” ಎಂದರು.
ಆಗ ಎಸ್‌ಪಿಪಿ ಅವರು “ಇಲ್ಲಿ ಪ್ರತಿಕ್ರಿಯೆ ಇದೆ ಎಂದು ನಾವು ಭಾವಿಸಲಾಗದು. ಪ್ರತಿಕ್ರಿಯೆ ಎಲ್ಲಿದೆ” ಎಂದರು.
ತೇಜಸ್ವಿ ಸೂರ್ಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಪ್ರತಿಕ್ರಿಯೆ ಇದೆ. ಅವರು (ಸರ್ಕಾರ) ನೋಟಿಸ್ ನೀಡಲಾರಂಭಿಸಿದರು” ಎಂದರು.
ಆಗ ಎಸ್‌ಪಿಪಿ ಅವರು “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಹಲವು ದಾರಿಗಳಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ರೀತಿಯ ಪ್ರತಿಕ್ರಿಯೆಗೆ ಅನುಮತಿಸಬಾರದು” ಎಂದರು.
ಆಗ ಶ್ಯಾಮ್ ಅವರು “ವೆಬ್ ಪೋರ್ಟ್‌ಲ್ ವರದಿ ಆಧರಿಸಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಸಾವನ್ನಪ್ಪಿದ ರೈತನ ತಂದೆಯ ಸಂದರ್ಶನ ಸುದ್ದಿಯಾಗಿದೆ. ಈಗ ಟ್ವೀಟ್ ಡಿಲೀಟ್ ಮಾಡಲಾಗಿದೆ” ಎಂದರು.
ಇದಕ್ಕೆ ಎಸ್‌ಪಿಪಿ ಅವರು “ಪ್ರಕರಣಕ್ಕೆ ತಡೆ ನೀಡುವ ತುರ್ತು ಏನೂ ಇಲ್ಲ. ಮನಸ್ಸಿಗೆ ತೋಚಿದ್ದನ್ನು ಹೇಳಲಾಗದು. ಸಂವಿಧಾನದ 19ನೇ ವಿಧಿಯಡಿ ಕೆಲವು ನಿರ್ಬಂಧಗಳಿವೆ” ಎಂದರು. ಆಗ ಪೀಠವು “ಇದು ಸರ್ಕಾರದ ನೀತಿಯ ಟೀಕೆಯಷ್ಟೆ ಆಗಲು ಸಾಧ್ಯ” ಎಂದಿತು.
ಆಗ ಎಸ್‌ಪಿಪಿ ಅವರು “ನಿರ್ದಿಷ್ಟ ಸಮುದಾಯದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳುವುದು ದ್ವೇಷಕ್ಕೆ ಪ್ರಚೋದನೆ ನೀಡುವುದಾಗಿದೆ” ಎಂದರು. ಇದಕ್ಕೆ ಆಕ್ಷೇಪಿಸಿದ ಅರುಣ್ ಶ್ಯಾಮ್ ಅವರು “ಹೇಗೆ ಟೀಕಿಸಬೇಕು ಎಂದು ನೀವು (ಸರ್ಕಾರ) ಹೇಳಲಾಗದು” ಎಂದರು.
ಎಸ್‌ಪಿಪಿ ಅವರು “ಪ್ರಕರಣಕ್ಕೆ ತಡೆ ನೀಡುವುದು ಬೇಡ. ನಾವು ಯಾವುದೇ ಕ್ರಮಕೈಗೊಳ್ಳುವುದಿಲ್ಲ” ಎಂದರು. ಇದಕ್ಕೆ ಅರುಣ್ ಶ್ಯಾಮ್ ಅವರು “ಇದು ಯಾರೋ ಒಬ್ಬರು ದೂರು ನೀಡಿರುವುದಲ್ಲ. ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣ” ಎಂದರು.
ಆಗ ಪೀಠವು “ಸಂತ್ರಸ್ತ ವ್ಯಕ್ತಿಯ ತಂದೆಯು ಸಂದರ್ಶನದಲ್ಲಿ ಹೇಳಿರುವುದ ಬಗ್ಗೆ ಏನು ಹೇಳುತ್ತೀರಿ? ಸಂದರ್ಶನ ಆಧರಿಸಿ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ವಿಸ್ತರಿಸಿದ್ದಾರೆ” ಎಂದರು. ಇದಕ್ಕೆ ಎಸ್‌ಪಿಪಿ ಅವರು “ತೇಜಸ್ವಿ ಸೂರ್ಯ ಮಧ್ಯಂತರ ತಡೆಗೆ ಏನು ಆಧಾರ ನೀಡಿದ್ದಾರೆ ಎಂದು ನೋಡಿ. ತಮ್ಮನ್ನು ಅನಗತ್ಯವಾಗಿ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಹೇಳಿದ್ದಾರೆ” ಎಂದರು.
ಆಗ ಪೀಠವು “ಬೇರೆ ಪ್ರಕರಣ ಬಂದಾಗಲು ಇದೇ ವಿರೋಧವನ್ನು (ಸರ್ಕಾರದಿಂದ) ನಿರೀಕ್ಷಿಸಲಾಗುವುದು” ಎಂದಿತು. ಇದಕ್ಕೆ ಎಸ್‌ಪಿಪಿ ಅವರು “ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ಬಾಕಿ ಉಳಿದರೆ ಆಕಾಶ ಕಳಚಿ ಬೀಳುವುದಿಲ್ಲ. ಮಧ್ಯಂತರ ತಡೆ ನೀಡಬಾರದು” ಎಂದು ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಸಮ್ಮತಿಸದ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿತು.
ವಿಚಾರಣೆಯ ಒಂದು ಹಂತದಲ್ಲಿ ಎಸ್‌ಪಿಪಿ ಅವರು ರೈತನ ಆತ್ಮಹತ್ಯೆಯು ಎರಡು ವರ್ಷದ ಹಿಂದೆ ಘಟಿಸಿರುವುದು ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆಗ ಪೊಲೀಸರು ಮೃತ ರೈತನ ತಂದೆಯ ಹೇಳಿಕೆಯನ್ನು ದಾಖಲಿಸಿರುತ್ತಾರೆ. ವಿಷಯವನ್ನು ಈಗ ತಿರುಚಲಾಗಿದೆ ಎಂದು ವಾದಿಸಿದರು.
ಪ್ರಕರಣದ ಹಿನ್ನೆಲೆ: ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮಗಳ ಇ-ಪೇಪರ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಇದನ್ನು ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯರನ್ನು ಮೊದಲ ಆರೋಪಿಯನ್ನಾಗಿಸಿ, ಕನ್ನಡ ದುನಿಯಾ ಮಾಧ್ಯಮ ಮತ್ತು ಕನ್ನಡ ನ್ಯೂಸ್ ಸಂಪದಾಕರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳನ್ನಾಗಿಸಿ ಹಾವೇರಿಯ ಸೆನ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353 (2) ಅಡಿ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಎಫ್‌ಐಆರ್ ದಾಖಲಿಸಲಾಗಿದೆ.