

ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ಗೆ ಸೇರಿದ ವೇದ ವಿಜ್ಞಾನ ಮಹಾ ವಿದ್ಯಾ ಪೀಠ ಟ್ರಸ್ಟ್ (ವಿವಿಎಂವಿಪಿಟಿ) ವಿರುದ್ಧದ ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆ ನೀಡಿದೆ.
ಟ್ರಸ್ಟ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಟ್ರಸ್ಟ್ ಭೂ ಒತ್ತುವರಿ ಮಾಡಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸುವುದಕ್ಕೂ ಮುನ್ನ ಸಕ್ಷಮ ಪ್ರಾಧಿಕಾರವು ಕಡ್ಡಾಯ ನಿಯಮದ ಪ್ರಕಾರ ಜಂಟಿ ಸಮೀಕ್ಷೆ ನಡೆಸಿಲ್ಲ ಎಂದು ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ಏಕಸದಸ್ಯ ಪೀಠ ಹೇಳಿದೆ.
“ಯಾವುದೇ ವ್ಯಕ್ತಿ ವಿರುದ್ಧ ಯಾವುದೇ ಆರೋಪ ಮಾಡುವುದಕ್ಕೂ ಮುನ್ನ ಇಲ್ಲಿ ಅರ್ಜಿದಾರರಾಗಿರುವ ಅವರನ್ನು ಒಳಗೊಂಡಂತೆ ಜಂಟಿ ಸಮೀಕ್ಷೆ ನಡೆಸಿ, ಆನಂತರ ಸಕ್ಷಮ ಪ್ರಾಧಿಕಾರವು ನಿರ್ಧಾರ ಕೈಗೊಳ್ಳಬೇಕು” ಎಂದು ಹೇಳಲಾಗಿದೆ.
ವಿವಿಎಂವಿಪಿಟಿ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳುವುದಕ್ಕೂ ಮುನ್ನ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಅಡಿ ನಿಯಮ ಪಾಲಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಅದರ ಪಾಲನೆಯಾಗಿಲ್ಲ. ಹೀಗಾಗಿ, ಜುಲೈ 17ರ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
“ಆಕ್ಷೇಪಾರ್ಹ ಆದೇಶದಿಂದ ತಿಳಿಯುವುದೇನೆಂದರೆ ನಿಯಮವನ್ನು ಸಂಬಂಧಿತ ಪ್ರಾಧಿಕಾರ ಪಾಲಿಸಿಲ್ಲ. ಹೀಗಾಗಿ, 17.07.2026ರ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ಜುಲೈ 31ರ ಆದೇಶಲ್ಲಿ ಪೀಠ ವಿವರಿಸಿದೆ.
1981ರಲ್ಲಿ ವಿವಿಎಂವಿಪಿಟಿಯನ್ನು ಶ್ರೀ ಶ್ರೀ ರವಿಶಂಕರ್ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಅಡಿ ಸ್ಥಾಪಿಸಲಾಗಿದ್ದು, ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ಅದರ ಸಂಬಂಧಿತ ಸಂಸ್ಥೆಗಳು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದರ ಸಂಬಂಧಿತ ತನಿಖೆಗೆಗಾಗಿ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು.
2025ರ ಅಕ್ಟೋಬರ್‌ನಲ್ಲಿ ಭೂ ದಾಖಲೆ ಸಹಾಯಕ ನಿರ್ದೇಶಕರ ಸಮೀಕ್ಷೆಯ ಪ್ರಕಾರ 290 ಎಕರೆ ಗೋಮಾಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ವಾದಿಸಿದೆ. ಟ್ರಸ್ಟ್ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸುವುದಕ್ಕೂ ಮುನ್ನ ನಿಯಮಗಳನ್ನು ಪಾಲಿಸಿಲ್ಲ ಎಂದು ವಿವಿಎಂಪಿವಿಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ್ದು, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಲಾಗಿದೆ. ವಿವಿಎಂಪಿವಿಟಿ ಪರವಾಗಿ ಹಿರಿಯ ವಕೀಲ ಶ್ರೀರಂಗ ಮತ್ತು ವಕೀಲೆ ಸುಮನಾ ನಾಗಾನಂದ್ ವಾದಿಸಿದರು.