ದಾರಿತಪ್ಪಿಸುವ ಜಾಹೀರಾತು ಪ್ರಕರಣ: ದಿವ್ಯಾ ಫಾರ್ಮಸಿ, ಆಚಾರ್ಯ ಬಾಲಕೃಷ್ಣ ವಿರುದ್ಧದ ತನಿಖೆಗೆ ತಡೆ

ಪ್ರಕರಣದ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ತಡೆಯಾಜ್ಞೆ ಮಾಡಿ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣ: ದಿವ್ಯಾ ಫಾರ್ಮಸಿ, ಆಚಾರ್ಯ ಬಾಲಕೃಷ್ಣ ವಿರುದ್ಧದ ತನಿಖೆಗೆ ತಡೆ
Published on

ಪತಂಜಲಿ ಆಯುರ್ವೇದಕ್ಕೆ ಸೇರಿದ ದಿವ್ಯಾ ಫಾರ್ಮಸಿ ಮತ್ತು ಅದರ ಸಹ ಸಂಸ್ಥಾಪಕ ಹಾಗೂ ಪ್ರವರ್ತಕ ಆಚಾರ್ಯ ಬಾಲಕೃಷ್ಣ ವಿರುದ್ಧ ದಾಖಲಾಗಿರುವ ದಾರಿತಪ್ಪಿಸುವ ಜಾಹೀರಾತು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಆನಂತರ ನ್ಯಾಯಾಂಗ ಪ್ರಕ್ರಿಯೆ ರದ್ದತಿ ಕೋರಿ ಮೆಸರ್ಸ್‌ ದಿವ್ಯಾ ಫಾರ್ಮಸಿ ಮತ್ತು ಆಚಾರ್ಯ ಬಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರ ಕಂಪನಿ ಮತ್ತು ಬಾಲಕೃಷ್ಣ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪ್ರಕರಣವು ಔಷಧ ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಗೆ ಸಂಬಂಧಿಸಿರುವುದರಿಂದ ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರಿನ ಅನ್ವಯ ಸಂಜ್ಞೇ ಪರಿಗಣಿಸಬಾರದಿತ್ತು. ಇಂಥ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದಿವ್ಯಾ ಫಾರ್ಮಸಿಯು ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗೆ ಸಂಬಂಧಿಸಿದಂತೆ ಮಾರಾಟ ಮಾಡಿರುವ ಎರಡು ಔಷಧಿಗಳಿಗೆ ಖಾಸಗಿ ದೂರು ಸಂಬಂಧಿಸಿದೆ. ಈ ಔಷಧಗಳಿಗೆ ವಿವರಣೆ ನೀಡಿರುವುದಕ್ಕೆ ದೂರುದಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥ ವಿವರಣೆಯು ಆಕ್ಷೇಪಾರ್ಹವಾದ ಜಾಹೀರಾತಿಗೆ ಸಮನಾಗುತ್ತದೆಯೇ” ಎಂದು ಪ್ರಶ್ನಿಸಿದರು. ಮುಂದುವರಿದು, “ನಮ್ಮಲ್ಲಿ ಪರವಾನಗಿ ಇಲ್ಲ ಎಂಬುದು ಪ್ರಕರಣವಲ್ಲ” ಎಂದರು.

ಇದನ್ನು ಆಲಿಸಿದ ಪೀಠವು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿ, ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ದಿವ್ಯಾ ಫಾರ್ಮಸಿ ಮತ್ತು ಬಾಲಕೃಷ್ಣ ವಿರುದ್ಧ ʼಔಷಧಿ ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹವಾದ ಜಾಹೀರಾತುಗಳು) ಕಾಯಿದೆʼ ಸೆಕ್ಷನ್‌ 4 ಮತ್ತು 7ರ ದೂರು ದಾಖಲಿಸಲಾಗಿತ್ತು. ಸಮನ್ಸ್‌ ನೀಡಿದ ಹೊರತಾಗಿಯೂ ವಿಚಾರಣೆಗೆ ಅವರು ಹಾಜರಾಗದಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಜಾಮೀನುರಹಿತ ವಾರೆಂಟ್‌ ಜಾರಿಗೊಳಿಸಿದ್ದರು.

ಆರೋಪಿಗಳು ಹರಿದ್ವಾರದಲ್ಲಿ ನೆಲೆಸಿರುವುದರಿಂದ ವಿಚಾರಣೆಗೆ ಹಾಜರಾಗುವುದು ಕಷ್ಟವಾಗಿತ್ತು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರಿಂದ ಜಾಮೀನುರಹಿತ ವಾರೆಂಟ್‌ ಅನ್ನು ವಿಚಾರಣಾಧೀನ ನ್ಯಾಯಾಲಯವು ರದ್ದುಪಡಿಸಿತ್ತು.

Kannada Bar & Bench
kannada.barandbench.com