
ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನ ಮಾಡದ್ದಕ್ಕೆ ಪಿವಿಆರ್ ಸಿನಿಮಾಸ್‌ಗೆ ₹1 ಲಕ್ಷ ದಂಡ ವಿಧಿಸಿ ನಿರ್ದೇಶಿಸಿದ್ದ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ.
“ಗ್ರಾಹಕರ ಆಯೋಗವು ಪ್ರಕರಣದಲ್ಲಿ ಮೂಲ ದೂರದಾರರ ಮನವಿ ಸ್ವೀಕರಿಸಿ ಚಲನಚಿತ್ರ ಪ್ರದರ್ಶನವನ್ನು ಹೇಗೆ ನಡೆಸಬೇಕು ಎಂದು ಚರ್ಚಿಸಿದೆ. ಚಿತ್ರದ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ಚಿತ್ರಮಂದಿರಗಳಿಗೆ ನಿರ್ದೇಶಿಸಿದೆ. ಅಂದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಮಾದರಿಯಲ್ಲಿ ಗ್ರಾಹಕನ ದೂರಿನ ವಿಚಾರಣೆ ನಡೆಸಿ ಆದೇಶ ಮಾಡಿದೆ. ಇದು ನ್ಯಾಯಸಮ್ಮತವಾಗಿಲ್ಲ ಹಾಗೂ ಆಯೋಗವು ತನ್ನ ವ್ಯಾಪ್ತಿ ಮೀರಿ ಪ್ರಕರಣದಲ್ಲಿ ಎಲ್ಲಾ ನಿರ್ದೇಶನ ಹೊರಡಿಸಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಆದ್ದರಿಂದ, ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಆದೇಶಿಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ಸಿನಿಮಾ 15-20 ನಿಮಿಷ ತಡವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜಾಹೀರಾತು ತೋರಿಸುವುದು ಅಗತ್ಯವೇ ಇಲ್ಲವೇ ಎಂಬುದನ್ನು ನಾವು ನಿರ್ಧರಿಸಬೇಕು ಎಂದು ಆಯೋಗ ಹೇಳುತ್ತದೆ. ಜನರಿಗೆ ಸಮಯವೇ ಇಲ್ಲವಾಗಿದೆ. ನೀವೇಕೆ ಸಮಯ ವ್ಯರ್ಥ ಮಾಡುತ್ತೀರಿ… ಎಂದು ಆದೇಶದಲ್ಲಿ ಹೇಳಲಾಗಿದೆ. ಇದನ್ನು ಆಧರಿಸಿ ದುರುಳರು ಸಮಸ್ಯೆ ಸೃಷ್ಟಿಸಲಾರಂಭಿಸಿದ್ದಾರೆ. ಯಾವುದೇ ಪ್ರಕ್ರಿಯೆ ಪಾಲಿಸದೇ ದುರುಳರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ” ಎಂದರು.
ಬೆಂಗಳೂರಿನ ಅಭಿಷೇಕ್ 2023ರ ಡಿಸೆಂಬರ್ 26ರಂದು ಸಂಜೆ 4.05ಕ್ಕೆ ಬೆಂಗಳೂರಿನ ಪಿವಿಆರ್-ಐನಾಕ್ಸ್‌ನಲ್ಲಿ "ಶ್ಯಾಮ್ ಬಹದ್ದೂರ್" ಚಿತ್ರವನ್ನು ವೀಕ್ಷಿಸಲು ಮೂರು ಟಿಕೆಟ್ ಖರೀದಿಸಿ, ₹825 ರೂಪಾಯಿ ಪಾವತಿಸಿದ್ದರು. ಸಿನಿಮಾ 4.05ಕ್ಕೆ ಆರಂಭವಾಗಬೇಕಾದ ಜಾಹೀರಾತುಗಳ ಪ್ರದರ್ಶನದಿಂದ 25 ನಿಮಿಷಗಳ ಕಾಲ ಸಿನಿಮಾ ಪ್ರದರ್ಶನ ತಡವಾಗಿತ್ತು.
ಇದರಿಂದ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಟಿಕೆಟ್‌ನಲ್ಲಿ ನಮೂದಿಸಿದಂತೆ ಚಿತ್ರವು ಸಂಜೆ 4.05ಕ್ಕೆ ಆರಂಭವಾಗಿ, 6.30ಕ್ಕೆ ಸಿನಿಮಾ ಮುಗಿಯಬೇಕಿತ್ತು. ಆದರೆ, 4.28ರವರೆಗೆ ಸರಣಿ ಜಾಹೀರಾತು ಪ್ರದರ್ಶನ ಮಾಡಿದ್ದರಿಂದ ಸಿನಿಮಾ ಪ್ರದರ್ಶನ ಆರಂಭವು 25 ನಿಮಿಷ ತಡವಾಯಿತು. ಇದರಿಂದ ನಾನು ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ ಹಾಗೂ ನನಗೆ ಮಾನಸಿಕ ಯಾತನೆ ಉಂಟಾಯಿತು ಎಂದು ಆಕ್ಷೇಪಿಸಿದ್ದರು.
ದೂರನ್ನು ಪುರಸ್ಕರಿಸಿದ್ದ ಗ್ರಾಹಕರ ಆಯೋಗವು, ಜಾಹೀರಾತು ಪ್ರದರ್ಶನ ಮಾಡಿ ಸಮಯ ಪೋಲು ಮಾಡಿ ಮಾನಸಿಕ ಯಾತನೆ ನೀಡಿದಕ್ಕೆ ದೂರುದಾರ ಅಭಿಷೇಕ್‌ಗೆ ₹20 ಸಾವಿರ ರೂಪಾಯಿ ಮತ್ತು ವ್ಯಾಜ್ಯ ಖರ್ಚಿಗಾಗಿ ₹8 ಸಾವಿರ ರೂಪಾಯಿ ನೀಡಬೇಕು ಎಂದು ಪಿವಿಆರ್ ಆಡಳಿತ ಮಂಡಳಿಗೆ ಆದೇಶಿಸಿತ್ತು. ಅಲ್ಲದೆ, ₹1 ಲಕ್ಷ ದಂಡ ವಿಧಿಸಿ ಅದನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸಲು ಸೂಚಿಸಿತ್ತು.