ಫಾರಂ 7 ದುರ್ಬಳಕೆ ಮೂಲಕ ಮುಸ್ಲಿಂ ಮತದಾರರ ಹೆಸರು ಅಳಿಸಲು ಯತ್ನ ಆರೋಪ: ಮತ್ತೆ 10 ಮಂದಿಯ ವಿರುದ್ಧದ ತನಿಖೆಗೆ ತಡೆ

ಈ ಹಿಂದೆ ಎರಡು ಪ್ರಕರಣಗಳಲ್ಲಿ ನೀಡಿದ್ದ ತಡೆಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನೂ ಮುಂದೂಡಿದ ನ್ಯಾಯಾಲಯ; ಒಟ್ಟು ಐದು ಪ್ರಕರಣಗಳ ತನಿಖೆಗೆ ತಡೆ ನೀಡಿದ ಹೈಕೋರ್ಟ್‌.
SIR, Karnataka HC
SIR, Karnataka HC
Published on: 

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಫಾರಂ 7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಬಿಜೆಪಿಯ 10 ಮಂದಿ ಬೂತ್‌ಮಟ್ಟದ ಏಜೆಂಟ್‌ಗಳ ವಿರುದ್ಧದ ಪ್ರತ್ಯೇಕ ಮೂರು ಎಫ್‌ಐಆರ್‌ಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಇದರೊಂದಿಗೆ, ಈ ಹಿಂದೆ ಎರಡು ಎಫ್‌ಐಆರ್‌ಗಳ ತನಿಖೆಗೆ ತಡೆ ನೀಡಿದ್ದನ್ನು ಸೇರಿ ಒಟ್ಟು ಐದು ಪ್ರಕರಣಗಳ ಪೊಲೀಸ್ ತನಿಖೆಗೆ ತಡೆ ಬಿದ್ದಂತಾಗಿದೆ.

ಬೆಂಗಳೂರಿನ ಪ್ಯಾಲೇಸ್‌ ಗುಟ್ಟಹಳ್ಳಿಯ ಜಿ ಎಸ್ ವಸಂತಲಕ್ಷ್ಮಿ ಮತ್ತು ಯಶವಂತಪುರದ ದೀಪಕ್ ಸಿಂಗ್ ಆರ್ ಪ್ರಕರಣಗಳಲ್ಲಿ ಅಕ್ಟೋಬರ್ 9ರಂದು ನೀಡಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನೂ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠವು ಮುಂದೂಡಿದೆ.

Justice Anant Ramanath Hegde
Justice Anant Ramanath Hegde

ಇದೇ ವೇಳೆ, ಫಾರಂ 7 ಅರ್ಜಿಗಳಿಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ಅರ್ಜಿಗಳ ಸತ್ಯಾಸತ್ಯತೆ ಕುರಿತು ನಡೆಯಬೇಕಿರುವ ಶಾಸನಬದ್ಧ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ದೊಡ್ಡ ಪ್ರಮಾಣದಲ್ಲಿ ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ ಬೂತ್‌ ಏಜೆಂಟ್‌ಗಳು ದೂರು ನೀಡಿದ್ದಾರೆ. ಕೆಲವು ದೂರುಗಳಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಎಂಟು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ 778 ಮತದಾರರನ್ನು ಗುರಿಯಾಗಿಸಿಕೊಂಡು ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ಮತಗಟ್ಟೆ ಏಜೆಂಟ್‌ ಆರೋಪಿಸಿದ್ದಾರೆ.

ಜಯನಗರ ಠಾಣೆಯಲ್ಲಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರೇ ದೂರು ನೀಡಿದ್ದಾರೆ. ಇಲ್ಲಿ ಒಟ್ಟು 5,698 ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಪೈಕಿ 4,327 ಅರ್ಜಿಗಳು ಗುರಪ್ಪನಪಾಳ್ಯ ವಾರ್ಡ್‌ಗೆ ಸಂಬಂಧಿಸಿದ್ದವು ಎಂದು ಸೌಮ್ಯಾ ಆರೋಪಿಸಿದ್ದಾರೆ. ಯಶವಂತಪುರದಲ್ಲಿ 136, ಕೊಡಗಿನಲ್ಲಿ 64 ಮತದಾರರಿಗೆ ಸಂಬಂಧಿಸಿದ ಅರ್ಜಿಗಳು ಸೇರಿದಂತೆ ಮೈಸೂರು ವ್ಯಾಪ್ತಿಯಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ.

ಅರ್ಜಿಗಳಲ್ಲಿ ಸುಳ್ಳು ಮಾಹಿತಿ, ನಕಲಿ ಸಹಿ ಹಾಗೂ ಬೇರೆಯವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವ ಆರೋಪಗಳಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಬೇಕೆಂದು ದೂರುದಾರರು ಕೋರಿದ್ದಾರೆ.

Advocate General K Shashi Kiran Shetty
Advocate General K Shashi Kiran Shetty

ಬಿಜೆಪಿಯ ಬೂತ್‌ ಏಜೆಂಟ್‌ಗಳಾದ ವಸಂತ ಲಕ್ಷ್ಮಿ ಮತ್ತು ದೀಪಕ್‌ ಸಿಂಗ್‌ ಆರ್‌ ಅವರ ವಿರುದ್ಧದ ತನಿಖೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ವಾದಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮೌಲ್ಯಯುತವಾಗಿದ್ದು, ನಕಲಿ ಅಥವಾ ಸುಳ್ಳು ಫಾರಂ 7 ಅರ್ಜಿಗಳ ಸಲ್ಲಿಕೆಗೆ ಅವಕಾಶ ನೀಡಬಾರದು” ಎಂದು ವಾದಿಸಿದ್ದರು.

Senior Advocate Aruna Shyam
Senior Advocate Aruna Shyam

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ಹಿರಿಯ ವಕೀಲರಾದ ಎಂ ಅರುಣ ಶ್ಯಾಮ್‌ ಮತ್ತು ವಿವೇಕ್‌ ಸುಬ್ಬಾರೆಡ್ಡಿ ಅವರು “ಅರ್ಜಿದಾರರು ರಾಜಕೀಯ ಪಕ್ಷದ ಬೂತ್ ಮಟ್ಟದ ಏಜೆಂಟರು. ತಮ್ಮ ಪಕ್ಷಗಳ ಪರವಾಗಿ ಫಾರಂ 7 ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಹರಾಗಿದ್ದು, ಅವುಗಳ ಸತ್ಯಾಸತ್ಯತೆಯನ್ನು ಚುನಾವಣಾಧಿಕಾರಿಗಳು ನಿಗದಿತ ಶಾಸನಬದ್ಧ ಪ್ರಕ್ರಿಯೆಯಂತೆ ಪರಿಶೀಲಿಸಬೇಕು” ಎಂದು ವಾದಿಸಿದ್ದರು.

Vivek Reddy
Vivek Reddy

ಮತದಾರರ ನೋಂದಣಿ ನಿಯಮಗಳು, 1960ರ ನಿಯಮ 15ರಿಂದ 23ರವರೆಗೆ ಇರುವ ನಿಬಂಧನೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಅಳಿಸುವಿಕೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳ ಪರಿಶೀಲನೆ, ವಿಚಾರಣೆ, ಸಂಬಂಧಪಟ್ಟ ವ್ಯಕ್ತಿಗಳಿಗೆ ವಿಚಾರಣೆ ಅವಕಾಶ ಹಾಗೂ ಚುನಾವಣಾಧಿಕಾರಿಗಳ ನಿರ್ಧಾರ ಸೇರಿದಂತೆ ಸಮಗ್ರ ಪ್ರಕ್ರಿಯೆಯನ್ನು ರೂಪಿಸಲಾಗಿದೆ ಎಂದು ಹೇಳಿತು.

“ಮೇಲಿನ ನಿಬಂಧನೆಗಳನ್ನು ಗಮನಿಸಿದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಅಳಿಸುವಿಕೆಗೆ ಸಂಬಂಧಿಸಿದಂತೆ ಸಮಗ್ರ ಶಾಸನಬದ್ಧ ವ್ಯವಸ್ಥೆಯನ್ನು ರೂಪಿಸಿರುವುದು ಸ್ಪಷ್ಟವಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜೊತೆಗೆ, ಜನಪ್ರತಿನಿಧಿ ಕಾಯಿದೆ, 1950ರ ಸೆಕ್ಷನ್ 31 ಅನ್ನು ಉಲ್ಲೇಖಿಸಿದ ಪೀಠವು ಮತದಾರರ ಪಟ್ಟಿಯ ಸಿದ್ಧತೆ, ಪರಿಷ್ಕರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಸುಳ್ಳು ಲಿಖಿತ ಘೋಷಣೆ ನೀಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ ಎಂದು ತಿಳಿಸಿತು.

“ಫಾರಂ 7ರ ಅಡಿಯಲ್ಲಿ ಸಲ್ಲಿಸಲಾದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಸುಳ್ಳು ಮಾಹಿತಿ ನೀಡಿದಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲು 1960ರ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಸಹಿಗಳ ನಕಲು ಆರೋಪದ ಕುರಿತು, ಸಹಿಗಳಲ್ಲಿ ವ್ಯತ್ಯಾಸವಿರುವುದೊಂದೇ ಕಾರಣಕ್ಕೆ ಈ ಹಂತದಲ್ಲಿ ನಕಲಿ ಸಹಿ ಎಂದು ನಿರ್ಧರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಫಾರಂ 7 ಅರ್ಜಿಯಲ್ಲಿ ಹೆಸರಿಸಿರುವ ವ್ಯಕ್ತಿಯೇ ಸಹಿ ಮಾಡಿದ್ದಾರೆಯೇ ಎಂಬುದನ್ನು ಚುನಾವಣಾಧಿಕಾರಿ ಮೊದಲು ಪರಿಶೀಲಿಸಬೇಕು. ಸಹಿ ಮಾಡಿರುವುದನ್ನು ವ್ಯಕ್ತಿ ಒಪ್ಪಿಕೊಂಡರೂ ಸಹಿಗಳಲ್ಲಿ ವ್ಯತ್ಯಾಸವಿದ್ದರೆ ಅದಕ್ಕೆ ವಿವರಣೆ ಕೇಳಬಹುದು. ಆದರೆ, ತಾನು ಸಹಿ ಮಾಡಿಲ್ಲ ಎಂದು ವ್ಯಕ್ತಿ ನಿರಾಕರಿಸಿದರೆ ಹೆಚ್ಚಿನ ಪರಿಶೀಲನೆ ಅಗತ್ಯವಾಗಬಹುದು ಎಂದು ಪೀಠ ವಿವರಿಸಿತು.

ಅರ್ಜಿಗಳಿಗೆ ಹೆಸರಿಸಿರುವ ವ್ಯಕ್ತಿಗಳೇ ಸಹಿ ಮಾಡಿರುವುದು ದೃಢಪಟ್ಟಲ್ಲಿ, ಆಕ್ಷೇಪಣೆಗಳ ಅರ್ಹತೆಯನ್ನು ಪರಿಶೀಲಿಸಿ, ಹೆಸರು ಅಳಿಸಲು ಉದ್ದೇಶಿಸಿರುವ ಮತದಾರರಿಗೆ ವಿಚಾರಣೆಯ ಅವಕಾಶ ನೀಡಿ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

“ಚುನಾವಣಾಧಿಕಾರಿಯ ನಿರ್ಧಾರವು ಎಫ್‌ಐಆರ್ ರದ್ದುಪಡಿಸಲು ಸೂಕ್ತ ಪ್ರಕರಣವಿದೆಯೇ ಅಥವಾ ಯಾವುದೇ ಅಥವಾ ಎಲ್ಲ ಅಪರಾಧಗಳ ಕುರಿತು ತನಿಖೆಗೆ ನಿರ್ದೇಶಿಸಬೇಕೇ ಎಂಬುದನ್ನು ನಿರ್ಧರಿಸಲು ಅಗತ್ಯವಾದ ಆಧಾರಗಳನ್ನು ಒದಗಿಸಬಹುದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೀಗಾಗಿ, ಶಾಸನಬದ್ಧ ವಿಚಾರಣೆ ಪೂರ್ಣಗೊಳ್ಳುವ ಮೊದಲು ಪೊಲೀಸ್ ತನಿಖೆ ಮುಂದುವರಿಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ ಪೀಠವು ವಸಂತಲಕ್ಷ್ಮಿ ಮತ್ತು ದೀಪಕ್ ಸಿಂಗ್ ಪ್ರಕರಣಗಳಲ್ಲಿ ತನಿಖೆಗೆ ನೀಡಿದ್ದ ತಡೆಯನ್ನು ವಿಸ್ತರಿಸಿದೆ. ತಡೆ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸುವುದನ್ನೂ ಮುಂದೂಡಿತು.

ಅಲ್ಲದೇ, ಬಿಜೆಪಿಯ ಬಿಎಲ್‌ಎಗಳಾದ ಬೆಂಗಳೂರಿನ ಸಾರಕ್ಕಿಯ ರಾಮಕೃಷ್ಣ, ಜಯನಗರ ನಾಲ್ಕನೇ ಬ್ಲಾಕ್‌ನ ಯೋಗೇಶ್‌ ಡಿ ಆರ್‌, ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಕೊಡಲಿಪೇಟೆಯ ಯು ಎಚ್‌ ಲೋಕೇಶ್‌, ನಾಗರಾಜ್‌ ಎ ಸಿ, ಸವಿತಾ ಎನ್‌ ಮಳಲಿ, ಬಸವರಾಜು ಬಿ ಎನ್‌ ಮತ್ತು ಕನ್ನರಹಳ್ಳಿಯ ರಜನಿ ಹಾಗೂ ಮೈಸೂರಿನ ಎನ್‌ ಆರ್‌ ಮೊಹಲ್ಲಾದ ಹರೀಶ್‌ ಕುಮಾರ್‌ ಸಿ ಮತ್ತು ವೀರನಗೆರೆಯ ಎಂ ರಾಘವೇಂದ್ರ ವಿರುದ್ಧ ಕ್ರಮವಾಗಿ ಜಯನಗರ, ಕೊಡಗಿನ ಶನಿವಾರ ಸಂತೆ ಮತ್ತು ಮೈಸೂರಿನ ನರಸಿಂಹರಾಜ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಮೂರು ಎಫ್‌ಐಆರ್‌ಗಳಿಗೂ ನ್ಯಾಯಾಲಯ ತಡೆ ವಿಧಿಸಿದೆ.  

ದೂರುದಾರರಿಗೆ ತಡೆ ತೆರವು ಮಾಡುವಂತೆ ಕೋರುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿದೆ. ಚುನಾವಣಾ ಆಯೋಗದಿಂದ ಸಂಬಂಧಪಟ್ಟ ದಾಖಲೆಗಳನ್ನು ಪಡೆದ ನಂತರ ರಾಜ್ಯ ಸರ್ಕಾರವೂ ತಡೆ ಮಾರ್ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌, ದೂರುದಾರರ ಪರವಾಗಿ ವಕೀಲ ಶತಭಿಷ್‌ ಶಿವಣ್ಣ, ಭಾರತೀಯ ಚುನಾವಣಾ ಆಯೋಗದ ಪರವಾಗಿ ಎಸ್‌ ಆರ್‌ ದೊಡ್ಡವಾಡ ವಾದಿಸಿದ್ದರು.

Attachment
PDF
Vasantha Lakshmi G S v. State of Karnataka
Preview
Attachment
PDF
Deepak Singh R v. State of Karnataka
Preview
Attachment
PDF
Harish Kumar C & other v. State of Karnataka
Preview
Attachment
PDF
U H Lokesh & others v. State of Karnataka
Preview
Attachment
PDF
Ramakrishna & another v. State of Karnataka
Preview