ಬಿಡಿಎ ವಸತಿ ಯೋಜನೆಗಳಿಗೆ ರೇರಾ ಕಾಯಿದೆ ಅನ್ವಯಕ್ಕೆ ಹೈಕೋರ್ಟ್‌ ತಡೆ

ಬಿಡಿಎಗೆ ರೇರಾ ಕಾಯಿದೆಯನ್ನು ಅನ್ವಯಿಸುವ ಕ್ರಮದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ. ಹೀಗಾಗಿ, ರೇರಾ ಕಾಯಿದೆಯ ಕಾರ್ಯಾಚರಣೆ ಮತ್ತು ಅನ್ವಯವನ್ನು ಬಿಡಿಎಗೆ ಮುಂದುವರಿಸಬಾರದು ಎಂದು ಆದೇಶಿಸಿರುವ ಹೈಕೋರ್ಟ್.
Bangalore Development Authority
Bangalore Development Authority
Published on

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಯಲ್ಲಿ 2016ಕ್ಕೂ ಮೊದಲು ರೂಪುಗೊಂಡಿರುವ ವಸತಿ ವಿನ್ಯಾಸಗಳು ಮತ್ತು ಯೋಜನೆಗಳಿಗೆ; ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ–2016 (ರೇರಾ) ಅನ್ನು ಅನ್ವಯಿಸಿ ಕಾರ್ಯಾಚರಣೆ ನಡೆಸುವುದಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಬಿಡಿಎಗೆ ರೇರಾ ಕಾಯಿದೆ ಅನ್ವಯಿಸಿ, ರೇರಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬಿಡಿಎ ವಕೀಲರಾದ ಬಿ ವಚನ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj
Justice Suraj Govindraj

“ರೇರಾ ಕಾಯಿದೆಯು ಬಿಡಿಎದ ಯಾವ ರೀತಿಯ ಹಂಚಿಕೆಗಳಿಗೆ ಅನ್ವಯಿಸುತ್ತದೆ ಮತ್ತು ಯಾವ ರೀತಿಯ ಹಂಚಿಕೆಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ನಿರ್ಧರಿಸುವ ಅವಶ್ಯಕತೆ ಇದೆ. ಹೀಗಾಗಿ, ಬಿಡಿಎಗೆ ರೇರಾ ಕಾಯಿದೆಯನ್ನು ಅನ್ವಯಿಸುವ ಕ್ರಮದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ. ಹೀಗಾಗಿ, ರೇರಾ ಕಾಯಿದೆಯ ಕಾರ್ಯಾಚರಣೆ ಮತ್ತು ಅನ್ವಯವನ್ನು ಬಿಡಿಎಗೆ ಮುಂದುವರಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ. ಅಂತೆಯೇ, ರೇರಾ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ಪೀಠವು ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.

ಬಿಡಿಎ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ ಶೆಟ್ಟಿ ಅವರು “ಬಿಡಿಎ ಎಂಬುದು ಒಂದು ಸ್ವತಂತ್ರ ಮತ್ತು ಶಾಸನಬದ್ಧ ಸಂಸ್ಥೆಯಾಗಿದ್ದು, ಬಿಡಿಎ–1976ರ ಕಾಯಿದೆ ಅಡಿ ಕಾರ್ಯ ನಿರ್ವಹಿಸುತ್ತಿದೆ. ಇದು ಬೆಂಗಳೂರು ನಗರದ ಅಭಿವೃದ್ಧಿಗೆ ಯೋಜನೆ ರೂಪಿಸುವ ಜವಾಬ್ದಾರಿಗಳನ್ನು ಕಾಲಕಾಲಕ್ಕೆ ನಿಭಾಯಿಸುತ್ತದೆ. ಆದರೆ, ನಿವಾಸಿಗಳ ಲೇಔಟ್‌ ಅಥವಾ ಯೋಜನೆಗಳಿಗೆ ಅನ್ವಯವಾಗುವಂತೆ ರೂಪಿಸಲಾಗಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ (ರೇರಾ) ಕಾಯಿದೆ–2016 ಅನ್ನು ಬಿಡಿಎಗೂ ಅನ್ವಯಿಸಲು ಅವಕಾಶ ನೀಡುವುದು ತರವಲ್ಲ. ಈ ಮೂಲಕ ಬಿಡಿಎ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣ ಹೊಂದುವ ಅಥವಾ ಮೇಲ್ವಿಚಾರಣೆ ನಡೆಸುವ ಪ್ರಯತ್ನ ಬಿಡಿಎಗೆ ಅನಪೇಕ್ಷಿತ ಹಾನಿ ಉಂಟು ಮಾಡುತ್ತದೆ” ಎಂದರು.

“ಸರ್ಕಾರ ರೈತರಿಂದ ಭೂಸ್ವಾಧೀನಕ್ಕೆ ಪಡೆದು ನಂತರ ಅದನ್ನು ಬಿಡಿಎಗೆ ನೀಡುತ್ತದೆ. ಬಿಡಿಎ ಅಂತಹ ಜಮೀನುಗಳಲ್ಲಿ ಯೋಜನಾಬದ್ಧ ವಸತಿ ನಿವೇಶನಗಳನ್ನು ರೂಪಿಸಿ ಹಂಚಿಕೆ ಮಾಡುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರ ರೈತರಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯುವಾಗ ರೈತರು ತಮ್ಮ ಹಕ್ಕುಗಳನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗುತ್ತಾರೆ ಅಥವಾ ಪರಿಹಾರ ಸಾಲದು ಎಂಬ ಆಕ್ಷೇಪ ಎತ್ತುತ್ತಾರೆ. ಹೀಗಾಗಿ, ಸರ್ಕಾರ ಎಷ್ಟು ಪ್ರಮಾಣದ ಜಮೀನನ್ನು ಕಾನೂನುಬದ್ಧವಾಗಿ ವಶಪಡಿಸಿಕೊಂಡಿರುತ್ತದೆಯೋ ಅಷ್ಟೇ ಜಮೀನಿನಲ್ಲಿ ಬಿಡಿಎ ಹಂತಹಂತವಾಗಿ ನಿವೇಶನ ರೂಪಿಸಿ ಅರ್ಹರಿಗೆ ಹಂಚುತ್ತಾ ಹೋಗುತ್ತದೆ. ಹೀಗಾಗಿ, ಯೋಜಿತ ನಿವೇಶನಗಳು ಒಮ್ಮೆಗೇ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಉಂಟಾಗುವ ಎಲ್ಲ ತಕರಾರುಗಳಿಗೆ ರೇರಾ ಕಾಯಿದೆಯನ್ನು ಅನ್ವಯಗೊಳಿಸುತ್ತಾ ಹೋಗುವುದು ಸಮರ್ಥನೀಯವಲ್ಲ” ಎಂದರು.

“ಬಿಡಿಎಗೆ ಬರೀ ನಗರ ಯೋಜನೆ ಮಾತ್ರವಲ್ಲ ಅದಕ್ಕೆ ಪೂರಕವಾದ ನಗರದ ಅಭಿವೃದ್ಧಿ ಬಗ್ಗೆಯೂ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ಆದ್ದರಿಂದ, ರೇರಾದ ‘ಪ್ರಮೋಟರ್’ (ಪ್ರವರ್ತಕ ಅಥವಾ ಅಭಿವೃದ್ಧಿ ಮಾಡಿ ಮುಂದಕ್ಕೆ ಬೆಳೆಸಿಕೊಂಡು ಹೋಗುವವರು) ಎಂಬ ವ್ಯಾಖ್ಯಾನವು ರೇರಾ ಕಾಯಿದೆಯ ಸೆಕ್ಷನ್‌ 2ರ (ಝಡ್‌ಕೆ) ಅಡಿಯಲ್ಲಿ ಬಿಡಿಎ ಒಳಪಡಬಾರದು” ಎಂದು ಪೀಠಕ್ಕೆ ವಿವರಿಸಿದರು.

“ಒಂದು ಸೂಚಿತ ನಿವೇಶನದ ಅಭಿವೃದ್ಧಿಗೆ ಸಂಗ್ರಹಿಸಲಾದ ಹಣವನ್ನು ಅದೇ ಯೋಜನೆಗೆ ಮಾತ್ರವೇ ಉಪಯೋಗಿಸಬೇಕು ಎಂಬ ರೇರಾ ನಿಯಮ ಪಾಲನೆ ಯಥೋಚಿತವಲ್ಲ. ಯಾಕೆಂದರೆ, ನಿವೇಶನ ರೂಪಿಸುವುದರ ಹೊರತಾಗಿ ನಗರದ ಅಭಿವೃದ್ಧಿಗೆ ಅನುವಾಗುವಂತಹ ಫ್ಲೈ ಓವರ್, ಅಂಡರ್‌ಪಾಸ್‌... ಹೀಗೆ ಹತ್ತಾರು ಬಹುಮುಖಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅದು ಹೆಣಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಂಗ್ರಹಿತ ನಿವೇಶನಗಳ ಹಣವನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಅನ್ವಯಿಸುವುದೇ ಆದಲ್ಲಿ ರೇರಾ ಕಾಯಿದೆಯನ್ನು ಜಾರಿಗೆ ತಂದ 2016ಕ್ಕೂ ಮೊದಲಿನ ವಸತಿ ನಿವೇಶನ ಯೋಜನೆಗಳಿಗೆ ಅನ್ವಯಗೊಳಿಸದೆ ನಂತರ ರೂಪುಗೊಂಡ ಯೋಜನೆಗಳಿಗೆ ಅನ್ವಯಿಸುವುಂತೆ ಆದೇಶಿಸಬೇಕು” ಎಂದು ಮನವಿ ಮಾಡಿದ್ದರು.

Kannada Bar & Bench
kannada.barandbench.com