ಸೇನಾ ನರ್ಸಿಂಗ್ ಸೇವೆಗಳಲ್ಲಿ ಮಹಿಳೆಯರಿಗೆ ಶೇ.100 ಮೀಸಲಾತಿ ನಿಬಂಧನೆ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

ಹುದ್ದೆಗಳ ನೇಮಕಾತಿಯಲ್ಲಿ ಈ ರೀತಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲು ಕಲ್ಪಿಸುವುದು ಸಂವಿಧಾನದ 14, 16 (2) ಹಾಗೂ 21ನೇ ವಿಧಿ ಉಲ್ಲಂಘಿಸಿದಂತಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
Military Nursing Services, Karnataka High Court
Military Nursing Services, Karnataka High Court

ಭಾರತೀಯ ಸೇನೆಯಲ್ಲಿ (ರಕ್ಷಣಾ ಇಲಾಖೆ) ನರ್ಸಿಂಗ್ ಹುದ್ದೆಗಳನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಕಲ್ಪಿಸಿದ್ದ ‘ಭಾರತೀಯ ಸೇನಾ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ-1943ರ ಸೆಕ್ಷನ್ 6ಅನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಶುಶ್ರೂಷಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ರಕ್ಷಣಾ ಇಲಾಖೆ 2010ರ ಫೆಬ್ರವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮಹಿಳೆಯಾಗಿದ್ದರೆ ಎಂಬುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲ ಸಂಜಯ್ ಎಂ.ಪೀರಾಪುರ, ಉಪನ್ಯಾಸಕರಾಗಿದ್ದ ಶಿವಪ್ಪ ಮರನಬಸರಿ ಮತ್ತು ಕರ್ನಾಟಕ ಶುಶ್ರೂಷಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ನೇತೃತ್ವದ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

ಸಂವಿಧಾನದ ಅಡಿಯಲ್ಲಿ ಮಹಿಳೆಯನ್ನು ಪ್ರತ್ಯೇಕ ವರ್ಗ ಎಂದು ಪರಿಗಣಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಈ ಆಶಯ ಈಡೇರಿಸಬೇಕು ಎಂದು ಇತರರನ್ನು ಹೊರಗಿರಿಸಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು ಎನ್ನುವ ತರ್ಕ ಅದರ ಹಿಂದಿಲ್ಲ. ಸಂವಿಧಾನದ 15 (3) ನೇ ವಿಧಿ (ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವ ಅವಕಾಶ) ಅಡಿಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಹುದ್ದೆಗಳ ನೇಮಕಾತಿಯಲ್ಲಿ ಈ ರೀತಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲು ಕಲ್ಪಿಸುವುದು ಸಂವಿಧಾನದ 14 (ಸಮಾನತೆ), 16 (2) (ಲಿಂಗ ತಾರತಮ್ಯ ತಡೆ) ಹಾಗೂ 21ನೇ ವಿಧಿ (ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ ಎಂದು ಪೀಠ ಹೇಳಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1943ರಲ್ಲಿ ಬ್ರಿಟಿಷರು ಈ ವಿವಾದಿತ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಇದರಿಂದ ಆ ನಿಯಮವನ್ನು ಸಂವಿಧಾನದ 33ನೇ ವಿಧಿಯ ಪ್ರಕಾರ ಸಂಸತ್ತು ಜಾರಿಗೆ ತಂದಿರುವ ಕಾನೂನು ಆಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಸೇನೆಗೆ ಸೇರಲು ಹಿಂಜರಿಯುತ್ತಿದ್ದರು. ಆದ ಕಾರಣ ಮಹಿಳೆಯನ್ನು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, 1943ರಲ್ಲಿ ಇದ್ದಂತಹ ಪರಿಸ್ಥಿತಿ ಪ್ರಸ್ತುತ ಇಲ್ಲ. ಈ ಸುಗ್ರೀವಾಜ್ಞೆ ಜಾರಿಯಾಗಿ ಎಂಟು ದಶಕಗಳು ಕಳೆದಿವೆ. ಆದರೂ ಇಂದಿಗೂ ಮೀಸಲಾತಿ ಒದಗಿಸುವ ಉದ್ದೇಶಗಳು ಏನು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ ಕಾರಣ ಈ ಮೀಸಲು ಸೌಲಭ್ಯ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಮೀಸಲಾತಿಯ ಪರಿಕಲ್ಪನೆಯು ವಂಚಿತರಿಗೆ ಸೌಲಭ್ಯವನ್ನು ಕಲ್ಪಿಸುವುದಾಗಿದೆ. ಅದು ಬಿಟ್ಟು ಇತರರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿಸುವುದಲ್ಲ. ಸಕಾರಣಗಳಿಲ್ಲದೆ ಶೇ.100ರಷ್ಟು ಮಹಿಳೆಯರಿಗೆ ಮಾತ್ರ ಅವಕಾಶ ನೀಡಿದಲ್ಲಿ ಮೀಸಲಾತಿ ಕಲ್ಪನೆ ಅಂತ್ಯಗೊಳಿಸಿದಂತಾಗುತ್ತದೆ. ಜೊತೆಗೆ, ಮೀಸಲು ಸೌಲಭ್ಯದಿಂದ ಪುರುಷರನ್ನು ಪ್ರತ್ಯೇಕಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು 81 ವರ್ಷಗಳ ಹಳೆಯ ನಿಯಮವನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಪಡಿಸಿದೆ.

ಈ ಮಧ್ಯೆ, ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ 2010ರ ಅಧಿಸೂಚನೆಯಲ್ಲಿ ತಿಳಿಸಿದ್ದ ನರ್ಸಿಂಗ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮತ್ತೊಂದೆಡೆ ನರ್ಸಿಂಗ್‌ ಹುದ್ದೆಗೆ ನೇಮಕಾತಿಗೆ ನಿಗದಪಡಿಸಿದ ವಯೋಮಿತಿಯನ್ನು ಅರ್ಜಿದಾರರು ಮೀರಿದ್ದಾರೆ. ಅದರಂತೆ ಅರ್ಜಿದಾರರನ್ನು ಸೇನೆಯ ಶುಶ್ರೂಷಕರನ್ನಾಗಿ ನೇಮಕ ಮಾಡುವಂತೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ. ಆದರೆ, ಮೊದಲನೆ ಹಾಗೂ ಎರಡನೇ ಅರ್ಜಿದಾರರು ಭವಿಷ್ಯದಲ್ಲಿ ಸುಗ್ರೀವಾಜ್ಞೆ-1943ರ ಅಡಿಯಲ್ಲಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ, ಈ ಅರ್ಜಿ ವಿಚಾರಣೆ ಹಂತದಲ್ಲಿ ಅರ್ಜಿದಾರರು ಕಳೆದಿರುವ ಸಮಯವನ್ನು ಹೊರತುಪಡಿಸಿ ಅವರ ವಯಸ್ಸನ್ನು ಲೆಕ್ಕಾಚಾರ ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಶುಶ್ರೂಷಕಿಯರ ನೇಮಕ ಸಂಬಂಧ ರಕ್ಷಣಾ ಇಲಾಖೆ (ಸೇನೆ) 2010ರ ಫೆಬ್ರವರಿ 13 ಮತ್ತು 19ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ಅಭ್ಯರ್ಥಿಗಳು ಮಹಿಳೆಯಾಗಿದ್ದು, ನಿಗದಿತ ಅರ್ಹತೆ ಹೊಂದಿದ್ದರೆ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಭಾರತೀಯ ಸೇನಾ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ -1943ರ ಸೆಕ್ಷನ್ 6 ರಲ್ಲಿದ್ದ ಬಳಸಿರುವ ‘ಮಹಿಳೆ' ಎಂಬ ಪದವನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com