ಅಂಚೆ ಮತ ಮರುಎಣಿಕೆ ಕೋರಿ ಸೌಮ್ಯ ರೆಡ್ಡಿ ಸಲ್ಲಿಸಿದ್ದ ಅರ್ಜಿ: ಶಾಸಕ ರಾಮಮೂರ್ತಿಗೆ ಸಮನ್ಸ್ ನೀಡಲು ಹೈಕೋರ್ಟ್ ಆದೇಶ

ಅಂಚೆ ಮತಗಳನ್ನು ಮರುಎಣಿಕೆ ಮಾಡಬೇಕು ಎನ್ನುವ ಸೌಮ್ಯ ರೆಡ್ಡಿ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಶಾಸಕ ರಾಮಮೂರ್ತಿ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆ. 7ರಂದು ನಡೆಯಲಿದೆ.
Karnataka High Court
Karnataka High Court
Published on

ಜಯನಗರ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕೋರಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸಿ ಕೆ ರಾಮಮೂರ್ತಿ ಅವರಿಗೆ  ಸಮನ್ಸ್‌ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಒಟ್ಟು 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸಬೇಕು ಎಂದು  ಸೌಮ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಆಲಿಸಿದ ನ್ಯಾ. ಎಸ್‌ ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

“ಕಳೆದ ಮೇ 13ರಂದು ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆದಿತ್ತು. ಈ ಸಂದರ್ಭದಲ್ಲಿ ಒಟ್ಟು 827 ಅಂಚೆ ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 198 ಮತಗಳನ್ನು ತಿರಸ್ಕರಿಸಲಾಗಿತ್ತು. ಅವುಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ 164 ಮತ್ತು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ 415 ಮತಗಳು ದೊರೆತಿದ್ದವು. ಮತ ಎಣಿಕೆಯ ಕೊನೆಯ ಹದಿನಾರನೇ ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ 57297 ಮತಗಳನ್ನು ಹಾಗೂ ಕಾಂಗ್ರೆಸ್‌ ಅಭ್ಯರ್ಥಿ 57591 ಮತಗಳನ್ನು ಪಡೆದಿದ್ದರು” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಕಾಂಗ್ರೆಸ್‌ ಅಭ್ಯರ್ಥಿ ಇವಿಎಂ ಎಣಿಕೆ ವೇಳೆ 294 ಮತಗಳಿಂದ ಮುನ್ನಡೆ ಸಾಧಿಸಿದ್ದರೂ ಚುನಾವಣಾ ವೀಕ್ಷಕರು ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆಗೆ ಸೂಚಿಸಿದ್ದರು. ಅದರಂತೆ ಹಲವು ಸುತ್ತುಗಳಲ್ಲಿ ಅಂಚೆ ಮತಗಳ ಮರುಪರಿಶೀಲನೆ ನಡೆದು ಫಲಿತಾಂಶ ಏರುಪೇರಾಯಿತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು. ಆದರೆ ಅಂಚೆ ಮತಗಳ ಪ್ರತಿ ಸುತ್ತಿನ ವಿಡಿಯೋ ಚಿತ್ರೀಕರಣದ ದಾಖಲೆಗಳನ್ನು ಪರಿಶೀಲಿಸಬೇಕು. ಎಲ್ಲಾ 827 ಮತಗಳ ಮರು ಎಣಿಕೆಗೆ ಆದೇಶ ನೀಡಬೇಕು. ಅಸಿಂಧುವಾಗಿರುವ ಮತಗಳನ್ನು ಪಡೆದು ಚುನಾಯಿತರಾದ ಬಿಜೆಪಿ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು. ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವನ್ನು ಘೋಷಿಸಬೇಕು” ಎಂದು ಅರ್ಜಿದಾರರು ಕೋರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಶಾಸಕ ರಾಮಮೂರ್ತಿ ಅವರಿಗೆ ಸ್ಥಳೀಯ ತಹಶೀಲ್ದಾರ್‌ ಅಥವಾ ವಿಧಾನಸಭೆ ಸಚಿವಾಲಯದಿಂದ ಸಮನ್ಸ್‌ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆ. 7ರಂದು ನಡೆಯಲಿದೆ.

Kannada Bar & Bench
kannada.barandbench.com