ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಆದೇಶ ಪಾಲಿಸಲು ಸರ್ಕಾರ ವಿಫಲ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್‌

ನ್ಯಾಯಾಲಯದ ಆದೇಶಗಳ ಬಗ್ಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆಯೇ? ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳೇನು? ಎಂಬುದರ ಬಗ್ಗೆ ಉತ್ತರ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
Chief Justice N V Anjaria and Justice Krishna S. Dixit
Chief Justice N V Anjaria and Justice Krishna S. Dixit

ನ್ಯಾಯಾಲಯಗಳ ಆದೇಶವನ್ನು ಪಾಲಿಸಲು ರಾಜ್ಯ ಸರ್ಕಾರ ಮತ್ತು ಅದರ ಪ್ರಾಧಿಕಾರಗಳು ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ತಳೆದಿರುವುದಕ್ಕೆ ಕೆಂಡಾಮಂಡಲವಾಗಿರುವ ಕರ್ನಾಟಕ ಹೈಕೋರ್ಟ್‌ ಸೋಮವಾರ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿಕೊಂಡಿದೆ.

ನ್ಯಾಯಾಲಯಗಳ ಮೆಟ್ಟಿಲೇರುವುದು ಜನರ ಮೂಲಭೂತ ಹಕ್ಕಾಗಿದ್ದು, ಆದೇಶ ಪಾಲಿಸದಿರುವುದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳ ಆದೇಶ ಪಾಲಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ ಸಹಿಸಲಾಗದು. ನ್ಯಾಯಾಲಯದ ಆದೇಶ ಪಾಲನೆ ಮಾಡುವುದನ್ನು ವಿಳಂಬಿಸುವುದರಿಂದ ನ್ಯಾಯದಿಂದ ವಂಚಿಸಿದಂತಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಕಟುವಾಗಿ ನುಡಿದಿದೆ.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಬಿಬಿಎಂಪಿ, ಬಿಡಿಎ ಹಾಗೂ ಕೆಐಎಡಿಬಿ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳು/ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನ್ಯಾಯಾಂಗ ನಿಂದನೆ ಕಾಯಿದೆಯಡಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಗಳ ಆದೇಶ ಹಾಗೂ ನಿರ್ದೇಶನಗಳನ್ನು ಪ್ರಾಧಿಕಾರ/ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಇದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿರುವ ಹೈಕೋರ್ಟ್‌, ನ್ಯಾಯಾಂಗ ನಿಂದನೆ ಕಾಯಿದೆಯಡಿ ದಾಖಲಾಗಿರುವ ಹಲವು ಪ್ರಕರಣಗಳನ್ನು ಆದೇಶದಲ್ಲಿ ಉದಾಹರಿಸಿದೆ.

ಅಲ್ಲದೇ, ನ್ಯಾಯಾಂಗ ನಿಂದನೆ ಕಾಯಿದೆ ಅಡಿ ದಾಖಲಾದ ಪ್ರಕರಣಗಳಲ್ಲದೇ ಉಳಿದ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ನೀಡಿರುವ ಆದೇಶ/ನಿರ್ದೇಶನಗಳು ದೀರ್ಘಾವಧಿಯಿಂದ ಸಕಾರಣಗಳಿಲ್ಲದೆ ಪಾಲನೆಯಾಗದೆ ಉಳಿದಿವೆ. ನ್ಯಾಯಾಲಯಗಳ ಆದೇಶಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ವ್ಯವಸ್ಥೆ ವಿಫಲವಾಗಿದೆ. ನ್ಯಾಯಾಲಯಗಳು ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿವೆ. ಅವುಗಳ ಆದೇಶಗಳು ಸರ್ಕಾರದ ಅಧಿಕಾರಿಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ನಿರ್ಧರಿಸುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ ಎಂದು ಆದೇಶದಲ್ಲಿ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯಗಳ ಆದೇಶ ಜಾರಿಯಾಗಬೇಕಿರುವ ಕಾರಣ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿರುವ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕೃಷಿ, ಹಿಂದುಳಿದ ವರ್ಗಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳು ನೋಟಿಸ್‌ ಜಾರಿ ಮಾಡಿದೆ. ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದೇ ಇರುವುದರಲ್ಲಿ ಸರ್ಕಾರದ ಜೊತೆಗೆ ರಿಜಿಸಸ್ಟ್ರಾರ್‌ ಜನರಲ್‌ ಅವರು ಸರ್ಕಾರದ ಎಲ್ಲಾ ಇಲಾಖೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಸೂಚಿಸಿದೆ.

ಅರೆ-ಸರ್ಕಾರಿ ಪ್ರಾಧಿಕಾರಿಗಳು, ಶಾಸನಾತ್ಮಕ ಸಂಸ್ಥೆಗಳ ಅಥವಾ ನಗರ ಪಾಲಿಕೆಗಳು ಸಹ ನ್ಯಾಯಾಲಯಗಳ ಆದೇಶಗಳ ಪಾಲನೆಯಾಗದೇ ಇರುವುದಕ್ಕೆ ಸರ್ಕಾರದ ಜೊತೆಗೆ ಸಮಾನ ಜವಾಬ್ದಾರಿ ಹೊಂದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠವು ಬಿಬಿಎಂಪಿ, ಬಿಡಿಎ ಹಾಗೂ ಕೆಐಎಡಿಬಿಗೆ ನೋಟಿಸ್‌ ಜಾರಿ ಮಾಡಿದೆ. ಇತರೆ ಸರ್ಕಾರಿ ಸಂಸ್ಥೆಗಳನ್ನು ಪ್ರತಿವಾದಿ ಮಾಡಲು ಸೂಚಿಸಿದೆ.

ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಸರ್ಕಾರ, ಪ್ರಾಧಿಕಾರಗಳು ಯಾವ ಕಾರ್ಯವಿಧಾನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು? ಆದೇಶ ಪಾಲನೆ ವಿಚಾರಗಳನ್ನು ನಿರ್ವಹಿಸಲು ವಿಶೇಷ ಶಾಖೆ, ಸಕ್ಷಮ ಅಧಿಕಾರಿಗಳನ್ನು ನೇಮಿಸಲಾಗಿದೆಯೇ? ಯಾವುದಾದರೂ ವ್ಯವಸ್ಥೆ ರೂಪಿಸಲಾಗಿದೆಯೇ? ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಲು, ಅದನ್ನು ಮೇಲ್ವಿಚಾರಣೆ ನಡೆಸಲು ಯಾವ್ಯಾವ ಕ್ರಮ ಕೈಗೊಳ್ಳಲಾಗಿದೆ? ನ್ಯಾಯಾಲಯದ ಆದೇಶಗಳ ಬಗ್ಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ  ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆಯೇ? ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳೇನು? ಎಂಬುದರ ಬಗ್ಗೆ ಸರ್ಕಾರ ಮತ್ತು ಅರೆ-ಸರ್ಕಾರಿ ಸಂಸ್ಥೆಗಳು ಉತ್ತರ ಸಲ್ಲಿಸಬೇಕು ಎಂದು ನಿರ್ದೇಶಿಸಿರುವ ಪೀಠವು ಅರ್ಜಿ ವಿಚಾರಣೆಯನ್ನು ‌ಜೂನ್‌ 5ಕ್ಕೆ ಮುಂದೂಡಿದೆ.

Attachment
PDF
Karnataka High Court order dated April 8, 2024.pdf
Preview

Related Stories

No stories found.
Kannada Bar & Bench
kannada.barandbench.com