ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಲು ಪೊಲೀಸರಲ್ಲಿ ಜಾಗೃತಿ ಮೂಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಬದಲಾಗಿ ಹೊಸದಾಗಿ ಜಾರಿಗೊಂಡಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿ ಪ್ರಕರಣ ದಾಖಲಿಸಲು ಪೊಲೀಸರಲ್ಲಿ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಜುಲೈ 1ರಂದು ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ಗೀತಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರ್ದೇಶಿಸಿದೆ.
ಅತಿಕ್ರಮ ಪ್ರವೇಶ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ಗೀತಾ ಮತ್ತು ಸಹ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 447 ಮತ್ತು 504 ಅಡಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ವಿರುದ್ದ ಹಿಂದೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅರ್ಜಿದಾರೆ ದೂರಿದ್ದರು.
ಐಪಿಸಿಗೆ ಬದಲಾಗಿ ಬಿಎನ್‌ಎಸ್ ಜಾರಿಗೆ ಬಂದ ಜುಲೈ 1ರಂದು ಎಫ್‌ಐಆರ್ ದಾಖಲಿಸಲಾಗಿದೆ. ಅದಾಗ್ಯೂ, ಪೊಲೀಸರು ಬಿಎನ್‌ಎಸ್‌ಗೆ ಬದಲಾಗಿ ಐಪಿಸಿ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಎಫ್‌ಐಆರ್ ಆಧರಿಸಿ ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸದಂತೆ ನ್ಯಾಯಾಲಯವು ಪೊಲೀಸರ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ. ಅಲ್ಲದೇ, ಇನ್ನು ಮುಂದೆ ಬಿಎನ್‌ಎಸ್ ಅಡಿ ಮಾತ್ರ ಅಪರಾಧ ಪ್ರಕರಣ ದಾಖಲಿಸಲು ಪೊಲೀಸರಲ್ಲಿ ರಾಜ್ಯ ಸರ್ಕಾರ ಜಾಗೃತಿ ಮೂಡಿಸಬೇಕು ಎಂದು ಆದೇಶಿಸಿದೆ.