ನಾಳೆ ಶೇ.2 ಸಿನಿಮಾ ಟಿಕೆಟ್‌ ಸೆಸ್‌ ತಡೆ ಕೋರಿರುವ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯಿದೆ, ಅದರಡಿ ಸಿನಿಮಾ ಟಿಕೆಟ್‌ಗೆ ಸೆಸ್‌ ವಿಧಿಸಲು ಅನುವು ಮಾಡಿಕೊಟ್ಟು ರೂಪಿಸಿರುವ ನಿಯಮಗಳನ್ನು ಪ್ರಶ್ನಿಸಲಾಗಿದೆ.
Karnataka High Court and movie theatre
Karnataka High Court and movie theatre
Published on: 

ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್ ದರದ ಮೇಲೆ ಶೇ. 2ರಷ್ಟು ಸೆಸ್ (ಉಪಕರ) ಸಂಗ್ರಹಿಸುವುದುನ್ನು ಕಡ್ಡಾಯಗೊಳಿಸುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯಿದೆ 2024ರ ಸಾಂವಿಧಾನಿಕ ಸಿಂಧುತ್ವವನನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿಲಾಗಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್‌ ಐನಾಕ್ಸ್‌, ಇದರ ಷೇರುದಾರ ಪ್ರತೀಕ್‌ ಚೌಹಾಣ್‌, ವಿನಾಯಕ ಚಿತ್ರಮಂದಿರ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿನಾಯಕ ಚಿತ್ರಮಂದಿರ ಪ್ರತಿನಿಧಿಸಿದ್ದ ವಕೀಲ ಕೆ ವಿ ಧನಂಜಯ್‌ ಅವರು “ಕಾಯಿದೆಯಲ್ಲಿ ಉಪಕರ ವಿಧಿಸಲು ಅವಕಾಶವಿಲ್ಲ. ಈ ಹಣವನ್ನು ನಾಟಕ, ನೃತ್ಯ, ಯಕ್ಷಗಾನ ಕಲಾವಿದರ ಏಳಿಗೆಗೆ ಬಳಸಬೇಕು ಎಂದು ಸರ್ಕಾರ ಹೇಳುತ್ತದೆ. ಕಾಯಿದೆ ಅಡಿ ವಿಧಿಸುವ ಶುಲ್ಕವು ತೆರಿಗೆ ಆಗುತ್ತದೆಯೇ ವಿನಾ ಉಪಕರವಾಗಲ್ಲ. ಎರಡು ವರ್ಷ ಕಾಯಿದೆಯನ್ನು ಶೈತ್ಯಾಗಾರದಲ್ಲಿಟ್ಟಿದ್ದ ಸರ್ಕಾರವು ಈಗ ಏಕಾಏಕಿ ಜಾರಿಗೊಳಿಸಿ, ಸೆಸ್‌ ಪಾವತಿಸುವಂತೆ ಸೂಚಿಸಿದೆ. ಕಾಯಿದೆಯಲ್ಲಿ ಮೌಲ್ಯಮಾಪನ ವ್ಯವಸ್ಥೆಯೇ ಇಲ್ಲ” ಎಂದರು.

ಎಂಎಐ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ನಾವು ಇಡೀ ಕಾಯಿದೆಯನ್ನು ಪ್ರಶ್ನಿಸಿದ್ದೇವೆ. ಸೆಸ್‌ ಅನ್ನು ನಾಟಕ, ನೃತ್ಯ ಮತ್ತಿತರ ಅಕಾಡೆಮಿಗಳ ಜೊತೆ ಗುರುತಿಸಿಕೊಂಡಿರುವ ಕಲ್ಯಾಣ ಬಳಸಲಾಗುವುದು ಎಂದು ಸರ್ಕಾರಕ್ಕೆ ಹೇಳುತ್ತಿದೆ. ಹೀಗೆ ಮಾಡಲಾಗದು” ಎಂದರು.

ಈ ಹಂತದಲ್ಲಿ ಪೀಠವು ಸರ್ಕಾರವನ್ನು ಕುರಿತು “ಕಾಯಿದೆಯೇ ಇನ್ನೂ ಜಾರಿಗೊಂಡಿಲ್ಲ. ಹೀಗಿರುವಾಗ ನೋಟಿಸ್‌ ಜಾರಿಗೊಳಿಸುವ ಅಧಿಕಾರ ಸರ್ಕಾರಕ್ಕೆ ಎಲ್ಲಿದೆ?” ಎಂದು ಪ್ರಶ್ನಿಸಿತು.

ಅಡ್ವೊಕೇಟ್‌ ಜನರಲ್‌ ಅವರಿಗೆ ತಿಳಿಸುವಂತೆ ಸೂಚಿಸಿ, ಅರ್ಜಿದಾರರ ಮಧ್ಯಂತರ ಕೋರಿಕೆ ಪರಿಗಣಿಸಲಾಗುವುದು ಎಂದ ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಸೆಪ್ಟೆಂಬರ್‌ 30ರಿಂದ ತಿದ್ದುಪಡಿಯಾಗಿರುವ ಕಾಯಿದೆಯು ಅಸ್ತಿತ್ವಕ್ಕೆ ಬರಲಿದೆ. ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯಿದೆ, ಅದರಡಿ ಸಿನಿಮಾ ಟಿಕೆಟ್‌ಗೆ ಸೆಸ್‌ ವಿಧಿಸಲು ಅನುವು ಮಾಡಿಕೊಟ್ಟು ರೂಪಿಸಿರುವ ನಿಯಮಗಳನ್ನು ಪ್ರಶ್ನಿಸಲಾಗಿದೆ.

Kannada Bar & Bench
kannada.barandbench.com