ದ್ವೇಷ ಭಾಷಣ: ಕ್ರಿಮಿನಲ್ ಪ್ರಕರಣ ರದ್ದು ಕೋರಿದ ಅರ್ಜಿಗಳ ವಿಚಾರಣೆ ಅ.28ಕ್ಕೆ ನಿಗದಿಪಡಿಸಿದ ಹೈಕೋರ್ಟ್

“ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿರುವುದನ್ನು ನೋಡಿದರೆ ಸಾಕು; ಭಾಷಣ ಮಾಡುವವರ ನಾಲಗೆ ಮತ್ತು ಮಿದುಳಿನ ಸಂಪರ್ಕ ಕಡಿದು ಹೋಗುತ್ತದೆ” ಎಂದು ಕಿಡಿಕಾರಿದ ಹೈಕೋರ್ಟ್‌.
Hate speech, India
Hate speech, India
Published on

ದ್ವೇಷ ಭಾಷಣದ ಮೂಲಕ ಗಲಭೆ ಸೃಷ್ಟಿಗೆ ಪ್ರಚೋದಿಸಿದ ಹಾಗೂ ಯಾವುದೇ ವರ್ಗದ ನಾಗರಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ರದ್ದತಿಗೆ ಕೋರಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಅಕ್ಟೋಬರ್ 28ಕ್ಕೆ  ನಿಗದಿಪಡಿಸಿದೆ.

ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ನಿಗದಿಯಾಗಿದ್ದವು.

ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಒಂದೊಂದಾಗಿ ವಿಚಾರಣೆ ನಡೆಸುವ ಬದಲು ಒಂದು ದಿನ ಎಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಲಾಗುವುದು. ಅದಕ್ಕಾಗಿ ಅಕ್ಟೋಬರ್ 28ರಂದು ವಿಚಾರಣೆ ನಿಗದಿಪಡಿಸಲಾಗುವುದು. ಅಷ್ಟರೊಳಗೆ ಅರ್ಜಿದಾರರ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸಿ, ತಮ್ಮ ವಾದಾಂಶಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆಗೆ ಕೋರಬಾರದು ಎಂದು ತಿಳಿಸಿದರು.

ಅರ್ಜಿಗಳ ಕುರಿತಂತೆ ಅಕ್ಟೋಬರ್ 28ರಂದು ಮೆರಿಟ್‌ ಆಧಾರದ ಮೇಲೆ ಕಾನೂನಾತ್ಮಕವಾಗಿ ಆದೇಶ ಮಾಡಲಾಗುವುದು. ಆ ಆದೇಶವು ಪರ ಅಥವಾ ವಿರೋಧವಾಗಿ ಇರಬಹುದು. ಪರ ಆದೇಶ ಪಡೆದವರು ನಂತರ, ಮತ್ತೆ ದ್ವೇಷ ಭಾಷಣ ಕೃತ್ಯದಲ್ಲಿ ಪಾಲ್ಗೊಂಡರೆ ಸಹಿಸುವುದಿಲ್ಲ. ಅವರ ವಿರುದ್ಧ ಕಠಿಣ ಆದೇಶ ಹೊರಡಿಸಲಾಗುವುದು ಎಂದೂ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ಇದೇ ವೇಳೆ, ದ್ವೇಷ ಭಾಷಣ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೋಡಿ.. ದ್ವೇಷ ಭಾಷಣ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಆದರೆ, ಏನು ಮಾಡುವುದು, ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿರುವುದನ್ನು ನೋಡಿದರೆ ಸಾಕು; ಭಾಷಣ ಮಾಡುವವರ ನಾಲಗೆ ಮತ್ತು ಮಿದುಳಿನ ಸಂಪರ್ಕ ಕಡಿದು ಹೋಗುತ್ತದೆ. ತನ್ನನ್ನು ತಾನು ಗೌರವಿಸಿಕೊಳ್ಳುವ ಯಾವುದೇ ವ್ಯಕ್ತಿಯೂ ಮತ್ತೊಬ್ಬರ ಭಾವನೆ-ಗೌರವಕ್ಕೆ ಧಕ್ಕೆಯಾಗುವಂತೆ ಮಾತನಾಡುವ  ಧೈರ್ಯ ಮಾಡುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದು, ನಂತರ ನಾನು ಆ ರೀತಿ ಮಾತನಾಡಿಲ್ಲ. ನನ್ನ ಹೇಳಿಕೆಗಳನ್ನು ಮಾಧ್ಯಮದವರು ತಿರುಚಿದ್ದಾರೆ ಎಂದು ಹೇಳುತ್ತ ಪ್ರಕರಣ ರದ್ದು ಕೋರಿ ಕೋರ್ಟ್‌ಗೆ ಬರುತ್ತಾರೆ. ಮಾಧ್ಯಮದವರು ಸರಿಯಾಗಿಯೇ ವರದಿ ಮಾಡಿರುತ್ತಾರೆ ಎಂದು ಮೌಖಿಕವಾಗಿ ನುಡಿದರು.

Kannada Bar & Bench
kannada.barandbench.com