

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಲು ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಆದೇಶ ಮರುಪರಿಶೀಲಿಸಲು ನಿರಾಕರಿಸಿದೆ.
ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶದ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೆಲವು ಮಾರ್ಪಾಡು ಮಾಡಿ ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ಏಕಸದಸ್ಯ ಪೀಠ ಮರುಪರಿಶೀಲನಾ ಅರ್ಜಿ ಇತ್ಯರ್ಥಪಡಿಸಿದೆ.
“ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ 10.04.2026ರಂದು ಕರಡು ಅಧಿಸೂಚನೆ ಪ್ರಕಟಿಸಿದೆ. ಇನ್ನೂ, ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕಾನೂನಿನ ಅನ್ವಯ ನಿಯಮಗಳು ಜಾರಿಯಲ್ಲಿ ಇರದೇ ಇರುವುದರಿಂದ ದಾಖಲೆಯಲ್ಲಿ ಯಾವುದೇ ಲೋಪ ಕಾಣದೇ ಇರುವುದರಿಂದ ಹಿಂದಿನ ಆದೇಶದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“28.10.2025ರಂದು ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಅದರ ಅನ್ವಯ ಪರೀಕ್ಷೆ ನಡೆಸಬೇಕು. ಏಪ್ರಿಲ್ 2ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ ರಾಜ್ಯ ಸರ್ಕಾರವು ಕರಡು ನಿಯಮಗಳನ್ನು ಪ್ರಕಟಿಸಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
“ಕರಡು ನಿಯಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇನ್ನಷ್ಟೇ ಕ್ರಮಕೈಗೊಳ್ಳಬೇಕಿದ್ದು, ಭವಿಷ್ಯದಲ್ಲಿ ಈ ಸಂಬಂಧ ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಕ್ರಮಕೈಗೊಳ್ಳಬಹುದಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡುವುದಿಲ್ಲ” ಎಂದೂ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಕಳೆದ ವರ್ಷ 1.5 ಲಕ್ಷ-1.75 ಲಕ್ಷ ವಿದ್ಯಾರ್ಥಿಗಳು ಮೂರನೇ ವಿಷಯದಲ್ಲಿ ನಪಾಸಾಗಿದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟದಲ್ಲಿ ದ್ವಿಭಾಷಾ ನೀತಿಯಿಲ್ಲ. ಇಲ್ಲಿ ತ್ರಿಭಾಷಾ ನೀತಿಯಿದೆ. ಗ್ರೇಡ್ ನೀಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದರು.
“15-16ನೇ ವಯಸ್ಸಿನಲ್ಲಿ ನಪಾಸಾದರೆ ಮಕ್ಕಳಿಗೆ ಸಾಕಷ್ಟು ಒತ್ತಡವಾಗುತ್ತದೆ. ಗ್ರಾಮೀಣ ಪ್ರದೇಶದ ಶೇ.80ರಷ್ಟು ವಿದ್ಯಾರ್ಥಿಗಳು ಹಿಂದಿಯಲ್ಲಿ ನಪಾಸಾಗುತ್ತಿದ್ದಾರೆ” ಎಂದರು.
ಈ ಹಂತದಲ್ಲಿ ಪೀಠವು “ನಿಮ್ಮ ಉದ್ದೇಶ ಎಲ್ಲರನ್ನೂ ಪಾಸು ಮಾಡುವುದಾಗಿದೆಯೇ? ನಾವು ಓದುವಾಗಲು ಅದೇ ಒತ್ತಡವಿತ್ತು. ತಮಿಳು, ಉರ್ದು, ತೆಲುಗು ಮೊದಲ ಭಾಷೆಯಾಗಿರುವ ಕಡೆ ಕಡೆ ಕನ್ನಡ ಮೂರನೇ ಭಾಷೆಯಾಗಿದೆ. ಹಿಂದಿ ಬೋಧಿಸಲು ಒಳ್ಳೆಯ ಶಿಕ್ಷಕರನ್ನು ನೇಮಿಸಿ” ಎಂದಿತು.
ಇದಕ್ಕೆ ಅಡ್ವೊಕೇಟ್ ಜನರಲ್ “ಒಳ್ಳೆಯ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ” ಎಂದರು.
ಪ್ರತಿವಾದಿಗಳ ಪರ ವಕೀಲರು “ಮೂರನೇ ವಿಷಯದಲ್ಲಿ ವಿದ್ಯಾರ್ಥಿಯು ಅತಿ ಹೆಚ್ಚು ಅಂಕಗಳಿಸಿದರೆ ಅಂಥವರ ಹಿತಾಸಕ್ತಿಗೆ ಧಕ್ಕೆಯಾಗಲಿದೆ” ಎಂದರು.