ಕೊಡವರಿಗೆ ಶಸ್ತ್ರಾಸ್ತ್ರ ಹೊಂದಲು ಪರವಾನಗಿಯಿಂದ ವಿನಾಯಿತಿ ನೀಡಿರುವುದನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌

“ಅವರಿಗೆ ಹತ್ತು ವರ್ಷಗಳ ಅವಧಿಗೆ ವಿನಾಯಿತಿಯನ್ನು ಸೂಕ್ತವಾಗಿಯೇ ನೀಡಲಾಗಿದೆ. ಅನಿಯಮತಿ ಅವಧಿಯವರೆಗೆ ವಿನಾಯಿತಿ ನೀಡಲಾಗಿದೆ ಎಂದೇನೂ ಅಲ್ಲ” ಎಂದು ನ್ಯಾಯಾಲಯ ಹೇಳಿತು.
Karnataka High Court, Kodavas
Karnataka High Court, Kodavas

ಶಸ್ತ್ರಾಸ್ತ್ರಗಳನ್ನು ಒಯ್ಯಲು ಹಾಗೂ ಹೊಂದಲು ಶಸ್ತ್ರಾಸ್ತ್ರ ಕಾಯಿದೆ, 1959ರ ಅಡಿ ಕೊಡವರಿಗೆ ನೀಡಲಾಗಿರುವ ವಿನಾಯಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ [ಕ್ಯಾಪ್ಟನ್‌ ಚೇತನ್‌ ವೈ ಕೆ (ನಿವೃತ್ತರು) ವರ್ಸಸ್‌ ಕೇಂದ್ರ ಸರ್ಕಾರ].

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಹಾಗೂ ನ್ಯಾ. ಎಸ್‌ ಎಸ್‌ ಮಗದುಮ್‌ ಅವರಿದ್ದ ಪೀಠವು ಈ ಕುರಿತಾದ ಆದೇಶವನ್ನು ನೀಡಿದೆ. “ಕೊಡವ ಸಮುದಾಯವು, ಯೋಧ ಸಮುದಾಯವಾಗಿದ್ದು ವಿನಾಯಿತಿಯ ಸವಲತ್ತನ್ನು ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಅನುಭವಿಸುತ್ತಿದೆ, ಅದೇ ರೀತಿ ಜಮ್ಮಾ ಹಿಡವಳಿದಾರರು ಸಹ ಸ್ವಾತಂತ್ರ್ಯಪೂರ್ವದಿಂದಲೂ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಹತ್ತು ವರ್ಷಗಳ ಅವಧಿಗೆ ಈ ವಿನಾಯಿತಿಯನ್ನು ಸೂಕ್ತ ರೀತಿಯಲ್ಲಿ ನೀಡಲಾಗಿದೆ. ಅನಿಯಮಿತ ಕಾಲದವರೆಗೇನೂ ವಿನಾಯಿತಿಯನ್ನು ನೀಡಲಾಗಿಲ್ಲ. ನೀಡಲಾಗಿರುವ ವಿನಾಯಿತಿಯು ಸಹ ಕೆಲವೊಂದು ನಿಬಂಧನೆ, ಷರತ್ತುಗೊಳಪಟ್ಟಿದೆ. ಹೀಗಾಗಿ, ಅಧಿಸೂಚನೆಯ ಸಾಂವಿಧಾನಿಕ ಸಿಂದುತ್ವವನ್ನು ಎತ್ತಿಹಿಡಿಯಲಾಗಿದೆ,” ಎಂದು ಪೀಠವು ಆದೇಶಿಸಿತು.

ಸಂವಿಧಾನದ 14ನೇ ವಿಧಿ ಅನ್ವಯ ಈ ವಿನಾಯಿತಿಯು ಅನುಮತಿಸುವಂತದ್ದಾಗಿದೆ. ಪ್ರಸ್ತುತ ಪ್ರಕರಣದಲ್ಲಿ, ಅಧಿಕೃತ ದಾಖಲೆಗಳು ಕೊಡವ ಜನಾಂಗವನ್ನು ಯೋಧ ಜನಾಂಗವೆಂದು 1890ಕ್ಕೂ ಮುಂಚಿನಿಂದ ಗುರುತಿಸಿರುವುದು ಕಂಡುಬರುತ್ತದೆ. ಅಂದಿನಿಂದಲೂ ಅವರು ಈ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು, ಶಸ್ತ್ರಾಸ್ತ್ರ ಕಾಯಿದೆಯ ಉದ್ದೇಶ ಮತ್ತು ಕಾರಣಗಳನ್ನು ನಾವು ಪರಿಗಣಿಸಿದ್ದು, ಅವರ ಪೂರ್ವಾಪರಗಳು ಅವರು ಶಸ್ತ್ರ ಹೊಂದುವುದಕ್ಕೆ ಅಡ್ಡಿಯಾಗದ ಪಕ್ಷದಲ್ಲಿ ಶಸ್ತ್ರಗಳನ್ನು ಸ್ವಯಂ ರಕ್ಷಣೆಗಾಗಿ ಹೊಂದಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಬೀಳುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಪ್ರಕರಣದ ಅಂತಿಮ ತೀರ್ಪನ್ನು ನ್ಯಾಯಾಲಯವು ಹಿಂದಿನ ವಿಚಾರಣೆ ವೇಳೆ ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜುಲೈನಲ್ಲಿ ನೋಟಿಸ್‌ ನೀಡಿತ್ತು.

ಕೊಡಗು ಜಿಲ್ಲೆಯ ಕೊಡವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ಶಸ್ತ್ರಾಸ್ತ್ರ ಕಾಯಿದೆ 1959ರ ಅನ್ವಯ ಶಸ್ತ್ರಾಸ್ತ್ರ ಹೊಂದಲು ಕೇಂದ್ರ ಸರ್ಕಾರವು ನೀಡಿರುವ ವಿನಾಯಿತಿಯನ್ನು ಪ್ರಶ್ನಿಸಿ ಸೇನೆಯ ನಿವೃತ್ತ ಕ್ಯಾಪ್ಟನ್‌ ಚೇತನ್‌ ವೈ ಕೆ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಪಿಸ್ತೂಲ್‌, ರಿವಾಲ್ವರ್, ಡಬಲ್‌ ಬ್ಯಾರಲ್‌ ಶಾಟ್‌ಗನ್‌ಗಳನ್ನು ಹೊಂದಲು ಕೊಡವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ಪರವಾನಗಿ ರಹಿತ ವಿನಾಯಿತಿ ನೀಡಿರುವ ಕ್ರಮವು ಬ್ರಿಟಿಷ್ ಕಾಲದ ಕಾನೂನಿನ ಮುಂದುವರಿಕೆಯಾಗಿದೆ ಎಂದು ಅವರು ಆಕ್ಷೇಪಿಸಿದ್ದರು. ಕೇಂದ್ರವು ಈ ವಿನಾಯಿತಿಯನ್ನು 2029ರವರೆಗೆ ನೀಡಿತ್ತು.

ಆದರೆ, ಇಂತಹ ವಿನಾಯಿತಿಯು ಜಾತಿ, ಜನಾಂಗಗಳು ಹಾಗೂ ಪೂರ್ವಜನರ ಭೂ ಹಿಡುವಳಿಯ ಆಧಾರದಲ್ಲಿ ಭೇದವನ್ನು ಸೃಷ್ಟಿಸುವುದರಿಂದ ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅದರೆ, ಅರ್ಜಿದಾರರ ವಾದವನ್ನು ತೀವ್ರವಾಗಿ ವಿರೋಧಿಸಿದ್ದ ಕೇಂದ್ರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಂ ಬಿ ನರಗುಂದ್‌ ಅವರು ಅರ್ಜಿಯು ನಿರ್ವಹಣೆಗೆ ಯೋಗ್ಯವಲ್ಲ ಎಂದಿದ್ದರು. ಅರ್ಜಿದಾರರ ಯಾವುದೇ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿಲ್ಲ ಅಲ್ಲದೆ, ಅರ್ಜಿದಾರರು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ 41ಅನ್ನು ಸಹ ಪ್ರಶ್ನಿಸುತ್ತಿಲ್ಲ. ಹಾಗಾಗಿ, ಅರ್ಜಿಯು ಪುರಸ್ಕಾರಕ್ಕೆ ಅರ್ಹವಲ್ಲ ಎಂದಿದ್ದರು.

ಮುಂದುವರೆದು ನರಗುಂದ್ ಅವರು, ಕೊಡವರು ವಿಶಿಷ್ಟ ಸಮುದಾಯವಾಗಿದ್ದು, ಅವರಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ನೀಡಲಾಗಿರುವ ವಿನಾಯಿತಿಯ ಹಿಂದಿನ ಕಾರಣಗಳನ್ನು ವಾದದ ವೇಳೆ ವಿವರಿಸಿದ್ದರು. “ಕೊಡವರಲ್ಲಿ ವರ್ಗಗಳಿಲ್ಲ. ಈ ಒಂದು ಬುಡಕಟ್ಟಿನಲ್ಲಿ ಜಾತಿ ಪದ್ಧತಿಯೂ ಇಲ್ಲ. ಕೊಡವರು ಕಾವೇರಿ ಮಾತೆಯನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಆರಾಧಿಸುತ್ತಾರೆ. ಅವರು ಒಂದು ಪೂಜಾ ಆಚಾರಣೆಯನ್ನು ಮಾಡುತ್ತಾರೆ. ಅವರೊಳಗೆ ಪುರೋಹಿತ ವರ್ಗವೂ ಕೂಡ ಇಲ್ಲ,” ಎಂದು ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com