ಸಂಪೂರ್ಣ ಅಂಧತ್ವ ಹೊಂದಿದ ಮಹಿಳೆಯನ್ನು ಶಿಕ್ಷಕಿ ಹುದ್ದೆಗೆ ಪರಿಗಣಿಸಲು ನಿರ್ದೇಶಿಸಿದ ಹೈಕೋರ್ಟ್‌

ಸಾಮಾನ್ಯ ಶಿಕ್ಷಕರು ಮಾಡುವ ಕೆಲಸವನ್ನು ಸಂಪೂರ್ಣ ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳು ಮಾಡಲು ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿದ ಹೈಕೋರ್ಟ್.
Justice Krishna Dixit & Justice C M Joshi
Justice Krishna Dixit & Justice C M Joshi
Published on

“ಸಾಮಾನ್ಯ ಶಿಕ್ಷಕರು ಮಾಡುವ ಕೆಲಸವನ್ನು ಸಂಪೂರ್ಣ ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳು ನಿರ್ವಹಣೆ ಮಾಡಲು ಸಾಧ್ಯವಿಲ್ಲ” ಎಂಬ ರಾಜ್ಯ ಸರ್ಕಾರದ ವಾದವನ್ನು ಈಚೆಗೆ ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌, ಪ್ರಕರಣವೊಂದರಲ್ಲಿ ‘ಆಯ್ಕೆಪಟ್ಟಿಯ ಅನುಸಾರ ಪರಿಶಿಷ್ಟ ಜಾತಿಯ ದೃಷ್ಟಿದೋಷವುಳ್ಳ ಮಹಿಳೆಯನ್ನು ಶಿಕ್ಷಕರ ಹುದ್ದೆಗೆ ಪರಿಗಣಿಸಿʼ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಸಂಪೂರ್ಣ (ಶೇ 100ರಷ್ಟು) ದೃಷ್ಟಿದೋಷ ಹೊಂದಿರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಂಡಿತವಳ್ಳಿಯ ಎಚ್ ಎನ್ ಲತಾ ಅವರಿಗೆ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಇಲಾಖೆಯು, ಶಿಕ್ಷಕರ ಹುದ್ದೆ ಪಡೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಡಿಮೆ ದೃಷ್ಟಿ ಹೊಂದಿದವರ ಜೊತೆಗೆ ಸಂಪೂರ್ಣ ಅಂಧತ್ವಕ್ಕೆ ಗುರಿಯಾದವರಿಗೂ ಅವಕಾಶ ನೀಡಬೇಕಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂಗವಿಕಲರ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪಾಲುದಾರಿಕೆಯ ಸಂಪೂರ್ಣ ಅವಕಾಶ ಕಾಯಿದೆ–1995 ಹಾಗೂ ಅಂಗವಿಕಲರ ಕಾಯಿದೆ–2016 ಅನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಪೀಠ ಸ್ಪಷ್ಟಪಡಿಸಿದೆ.

“ಹುದ್ದೆಗಳನ್ನು ಕಡಿಮೆ ದೃಷ್ಟಿದೋಷ ಉಳ್ಳವರಿಗೆ ಮಾತ್ರವೇ ಮೀಸಲಿಟ್ಟಿದ್ದು, ಸಂಪೂರ್ಣ ಅಂಧತ್ವ ಹೊಂದಿರುವವರಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ಒಪ್ಪಲಾಗದು. ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ ಅಂಧರ ಉದಾಹರಣೆಗಳು ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿವೆ. ಅಂತಹವರಲ್ಲಿ ಗ್ರೀಕ್‌ ಕವಿ ಹೋಮರ್, ಇಂಗ್ಲಿಷ್‌ ಕವಿ ಜಾನ್‌ ಮಿಲ್ಟನ್‌, ವಕೀಲೆ ಮತ್ತು ಲೇಖಕಿಯಾದ ಅಮೆರಿಕದ ಹೆಲೆನ್ ಕೆಲ್ಲರ್ ಮತ್ತು ಫ್ರೆಂಚ್‌ ಶಿಕ್ಷಕ ಲೂಯಿ ಬ್ರೈಲ್... ಇದಕ್ಕೆ ಉದಾಹರಣೆ” ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

Kannada Bar & Bench
kannada.barandbench.com