ಕರ್ನಾಟಕ ಹೈಕೋರ್ಟ್‌ಗೆ ಅ.11ರಿಂದ 16ರವರೆಗೆ ದಸರಾ ರಜೆ; ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿರುವ ರಜಾ ಕಾಲೀನ ಪೀಠಗಳು

ಬೆಂಗಳೂರಿನ ಪ್ರಧಾನ ಪೀಠದ ಒಂಭತ್ತನೇ ಕೋರ್ಟ್‌ ಹಾಲ್‌ನಲ್ಲಿ ಮಂಗಳವಾರ ನ್ಯಾಯಮೂರ್ತಿಗಳಾದ ಕೆ ಎಸ್‌ ಮುದ್ಗಲ್‌ ಮತ್ತು ಎಂ ಜಿ ಎಸ್‌ ಕಮಲ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಗಳ ವಿಚಾರಣೆ ನಡೆಸಲಿದೆ.
Karnataka High Court
Karnataka High Court

ದಸರಾ ಹಿನ್ನೆಲೆಯಲ್ಲಿ ಇದೇ 11ರಿಂದ 16ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜಾ ಘೋಷಣೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್‌ ಕಾಯಿದೆ 1961ರ ಸೆಕ್ಷನ್‌ 12ರ ಅನ್ವಯ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು ಅಕ್ಟೋಬರ್‌ 12ರಂದು (ಮಂಗಳವಾರ) ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪ್ರಧಾನ, ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ಕೆಳಗೆ ಸೂಚಿಸಲಾದ ನ್ಯಾಯಮೂರ್ತಿಗಳನ್ನು ರಜಾಕಾಲೀನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದ ಒಂಭತ್ತನೇ ಕೋರ್ಟ್‌ ಹಾಲ್‌ನಲ್ಲಿ ನ್ಯಾಯಮೂರ್ತಿಗಳಾದ ಕೆ ಎಸ್‌ ಮುದ್ಗಲ್‌ ಮತ್ತು ಎಂ ಜಿ ಎಸ್‌ ಕಮಲ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎನ್‌ ಎಸ್‌ ಸಂಜಯ್‌ ಗೌಡ ಮತ್ತು ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಕ್ರಮವಾಗಿ ಹತ್ತು ಮತ್ತು ಹನ್ನೊಂದನೇ ಹಾಲ್‌ನಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಚಿನ್‌ ಶಂಕರ್‌ ಮಗದುಮ್‌ ಮತ್ತು ಪಿ ಎನ್‌ ದೇಸಾಯಿ ನೇತೃತ್ವದ ವಿಭಾಗೀಯ ಪೀಠವು ಎರಡನೇ ಕೊಠಡಿಯಲ್ಲಿ ವಿಚಾರಣೆ ನಡೆಸಲಿದೆ. ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್‌ ಎಸ್‌ ಕಿಣಗಿ ಮತ್ತು ಆರ್‌ ನಟರಾಜ್‌ ನೇತೃತ್ವದ ವಿಭಾಗೀಯವು ಪ್ರಕರಣಗಳ ವಿಚಾರಣೆ ನಡೆಸಲಿದೆ.

ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಏಕಸದಸ್ಯ ಪೀಠದ ಪ್ರಕರಣಗಳನ್ನು ಅದೇ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ನಡೆಸಲಿದ್ದಾರೆ. ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳು ಮತ್ತು ತಾತ್ಕಾಲಿಕ ಪ್ರತಿಭಂದಕಾದೇಶಗಳಿಗೆ ಮಾತ್ರ ವಿಚಾರಣೆ ಸೀಮಿತವಾಗಿರಲಿದೆ. ಮೇಲ್ಮನವಿ, ಹೊಸ ಮನವಿ ಸಲ್ಲಿಕೆ ಸೇರಿದಂತೆ ಇತರೆ ಪ್ರಕರಣಗಳನ್ನು ಕೈಗೆತ್ತುಕೊಳ್ಳಲಾಗುವುದಿಲ್ಲ ಎಂದು ತಿಳಿಸಲಾಗಿದೆ.

Also Read
ವಾರ ಮುಂಚಿತವಾಗಿ ಬೇಸಿಗೆ ರಜಾ ಕಾಲ ಆರಂಭಿಸಲು ಸುಪ್ರೀಂಗೆ ಮನವಿ; 60 ಹಾಸಿಗೆಗಳ ಕೋವಿಡ್‌ ಆಸ್ಪತ್ರೆಗೆ ಚಿಂತನೆ

ಮಂಗಳವಾರ ಪ್ರಕರಣಗಳ ವಿಚಾರಣೆ ನಿಗದಿಯಾಗಿರುವುದರಿಂದ ಸೋಮವಾರ ಬೆಳಿಗ್ಗೆ 10.30ರಿಂದ 12.30ರ ಒಳಗೆ ಮನವಿ ಸಲ್ಲಿಸಬಹುದಾಗಿದೆ. ನಿರ್ದಿಷ್ಟ ಪ್ರಕರಣಗಳನ್ನು ಸಂಬಂಧಿತ ಪೀಠಗಳಿಗೆ ಹಂಚಿಕೆ ಮಾಡಲಾಗಿದೆ.

ರಜಾ ಕಾಲದಲ್ಲಿ ಸೋಮವಾರ ಮತ್ತು ಬುಧವಾರ ಬೆಳಿಗ್ಗೆ 10ರಿಂದ 12.30ರವರೆಗೆ ನಿರ್ದಿಷ್ಟ ಕೌಂಟರ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ವಕಾಲತ್ತು, ಶುಲ್ಕ ಮತ್ತು ಮೊಮೊಗಳನ್ನು ಸ್ವೀಕರಿಸಲಾಗುವುದು. ರಜಾ ಕಾಲದ ಪೀಠವು ವಿಚಾರಣೆ ನಡೆಸುವ ದಿನ ದಾಖಲೆಗಳನ್ನು ಬೆಳಿಗ್ಗೆ 10ರಿಂದ 1 ಗಂಟೆಗೆ ಮತ್ತು ಮಧ್ಯಾಹ್ನ 2ರಿಂದ 4ರ ವರೆಗೆ ಸ್ವೀಕರಿಸಲಾಗುವುದು. ಅಕ್ಟೋಬರ್‌ 7ರಿಂದ 16ರ ವರೆಗೆ ಪ್ರಕರಣಗಳನ್ನು ಪಟ್ಟಿ ಮಾಡುವುದಕ್ಕೆ ಸಂಬಂಧಿಸಿದಂತೆ ಮೊಮೊಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಿಕ ರಿಜಿಸ್ಟ್ರಾರ್‌ ಕೆ ಎಸ್‌ ಭರತ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Attachment
PDF
dasaraVacationNotfn-2021.pdf
Preview

Related Stories

No stories found.
Kannada Bar & Bench
kannada.barandbench.com