ಅಕ್ರಮ ಸಂಬಂಧದಲ್ಲಿದ್ದುಕೊಂಡು ಪತ್ನಿಯು ಜೀವನಾಂಶ ಕೋರಲಾಗದು: ಕರ್ನಾಟಕ ಹೈಕೋರ್ಟ್‌

ತಾನು ಕಾನೂನಾತ್ಮಕವಾಗಿ ವಿವಾಹವಾಗಿರುವುದರಿಂದ ಜೀವನಾಂಶ ಪಡೆಯಲು ಅರ್ಹ ಎಂಬ ಪತ್ನಿಯ ವಾದವನ್ನು ಆಕೆಯ ವ್ಯಭಿಚಾರದ ನಡತೆಯ ಹಿನ್ನೆಲೆಯಲ್ಲಿ ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.
Matrimonial Dispute
Matrimonial Dispute
Published on

ಪತ್ನಿಯು ಇನ್ನೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರೆ ಜೀವನಾಂಶ ಕೋರಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ಸೆಕ್ಷನ್‌ 12ರ ಅಡಿ ಮಹಿಳೆ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಲಭ್ಯವಿರುವ ಸಾಕ್ಷಿಗಳ ಪ್ರಕಾರ ಅರ್ಜಿದಾರ ಪತ್ನಿಯು ತನ್ನ ಪತಿಗೆ ಪ್ರಾಮಾಣಿಕವಾಗಿರಲಿಲ್ಲ. ಮತ್ತೊಬ್ಬ ವ್ಯಕ್ತಿಯ ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ನೆಲೆಸಿದ್ದಳು ಎಂದು ನ್ಯಾಯಾಲಯ ಹೇಳಿದೆ.

“ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಅವರ ಜೊತೆ ನೆಲೆಸಿರುವಾಗ ಆಕೆ ಜೀವನಾಂಶ ಕೋರುವ ಸಂದರ್ಭ ನಿರ್ಮಾಣವಾಗದು. ತಾನು ಕಾನೂನಾತ್ಮಕವಾಗಿ ಪತಿಯನ್ನು ವಿವಾಹವಾಗಿದ್ದೇನೆ ಎಂಬ ವಾದವನ್ನು ಒಪ್ಪಲಾಗದು. ಏಕೆಂದರೆ ಆಕೆ ಪ್ರಾಮಾಣಿಕವಾಗಿರಲಿಲ್ಲ ಮತ್ತು ವ್ಯಭಿಚಾರದ ಜೀವನ ನಡೆಸುತ್ತಿದ್ದಳು” ಎಂದು ಆದೇಶದಲ್ಲಿ ಹೇಳಲಾಗಿದೆ.

ಪತಿಯೂ ಸಂಬಂಧಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ಪತ್ನಿ ಜೀವನಾಂಶ ಕೋರುತ್ತಿರುವುದರಿಂದ ಆಕೆ ತಾನು ಪ್ರಾಮಾಣಿಕಳು ಎಂಬುದನ್ನು ಸಾಬೀತುಪಡಿಸಬೇಕು. ಆಕೆ ಪ್ರಾಮಾಣಿಕಳಲ್ಲ ಎಂದ ಮೇಲೆ ಆಕೆಯು ತನ್ನ ಪತಿಯತ್ತ ಬೆರಳು ಮಾಡಲಾಗದು” ಎಂದು ನ್ಯಾಯಾಲಯ ಹೇಳಿದೆ.

ಈ ಹಿಂದೆ ಅರ್ಜಿದಾರ ಪತ್ನಿಯು ಡಿವಿ ಕಾಯಿದೆಯ ಅಡಿ ರಕ್ಷಣೆ ಮತ್ತು ವಸತಿ ಹಾಗೂ ಹಣಕಾಸಿನ ನೆರವು ನೀಡುವ ಆದೇಶ ಕೋರಿದ್ದರು. ಇದನ್ನು ಮನ್ನಿಸಿದ್ದ ಮ್ಯಾಜಿಸ್ಟ್ರೇಟ್‌ ₹1,500 ನಿರ್ವಹಣಾ ವೆಚ್ಚ, ₹1,000 ವಸತಿ ಬಾಡಿಗೆ ಮತ್ತು ₹5,000 ಪರಿಹಾರಕ್ಕೆ ನ್ಯಾಯಾಲಯ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೆಚ್ಚುವರಿ ಸತ್ರ ನ್ಯಾಯಾಲಯವು ಪುರಸ್ಕರಿಸಿತ್ತು. ವ್ಯಭಿಚಾರವೂ ಕ್ರೌರ್ಯ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯವು ಮದುವೆಯನ್ನು ರದ್ದುಪಡಿಸಿತ್ತು ಎಂದು ಪತಿಯ ಪರ ವಕೀಲರು ವಾದಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಪತ್ನಿಯು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮ್ಯಾಜಿಸ್ಟ್ರೇಟ್‌ ಯಾಂತ್ರಿಕವಾಗಿ ಜೀವನಾಂಶ ಮತ್ತು ಪರಿಹಾರ ನಿಗದಿಪಡಿಸಿದ್ದಾರೆ ಎಂದು ಹೇಳಿದೆ. ಅರ್ಜಿದಾರ ಪತ್ನಿಯು ವ್ಯಭಿಚಾರದ ಜೀವನ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಸತ್ರ ನ್ಯಾಯಾಲಯವು ಅರ್ಜಿ ತಿರಸ್ಕರಿಸಿರುವುದು ಸರಿಯಾಗಿದೆ ಎಂದು ಹೇಳಿದೆ.

Kannada Bar & Bench
kannada.barandbench.com