ಮಾಸಿಕ ಜೀವನಾಂಶ ₹6 ಲಕ್ಷ ಕೋರಿದ ಪತ್ನಿ: ಖರ್ಚು ಮಾಡಬೇಕೆಂದರೆ ಆಕೆಯೇ ದುಡಿದು ಸಂಪಾದಿಸಲಿ ಎಂದು ಕಿಡಿಕಾರಿದ ಹೈಕೋರ್ಟ್‌

ದಾವೆದಾರರು ಇಲ್ಲಿ ಬಂದು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ ಎಂದ ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ.
Divorce
Divorce
Published on

ತನ್ನನ್ನು ತೊರೆದಿರುವ ಪತಿಯಿಂದ ಮಾಸಿಕ ₹6 ಲಕ್ಷ ಜೀವನಾಂಶ ಕೋರಿದ ಪತಿಯ ನಡೆಗೆ ಈಚೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಆಕೆ ಇಷ್ಟು ಹಣವನ್ನು ಖರ್ಚು ಮಾಡಬೇಕು ಎಂದು ಬಯಿಸಿದರೆ ತಾನೇ ದುಡಿದು ಸಂಪಾದಿಸಲಿ ಎಂದು ಕಿಡಿಕಾರಿದೆ.

ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Lalitha Kanneganti
Justice Lalitha Kanneganti

ನ್ಯಾಯಾಲಯದ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಅರ್ಜಿದಾರೆಗೆ ಎಚ್ಚರಿಸಿರುವ ನ್ಯಾಯಾಲಯವು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದುಕೊಳ್ಳುವವರಿಗೆ ಬಹುಸ್ಪಷ್ಟವಾದ ಸಂದೇಶವನ್ನು ಹಾಲಿ ಪ್ರಕರಣದ ಮೂಲಕ ಹೊರಡಿಸಲಾಗುವುದು ಎಂದು ಕಟುವಾಗಿ ಹೇಳಿದೆ.

“ಖರ್ಚಿಗೆ ಅರ್ಜಿದಾರೆಗೆ ₹6,16,300 ಬೇಕೆ? ಪ್ರತಿ ತಿಂಗಳಿಗೆ? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು? ಆಕೆಯ ಅಗತ್ಯವೇನು? ಪತಿ ₹10 ಕೋಟಿ ಸಂಪಾದಿಸಬಹುದು, ಹಾಗೆಂದು ನ್ಯಾಯಾಲಯವು ಆಕೆಗೆ ₹5 ಕೋಟಿ ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ, ಹಾಗಾದರೆ ಅವರು ಸಂಪಾದಿಸಲಿ” ಎಂದು ಪೀಠ ಹೇಳಿತು.

ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ ₹50,000 ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು ₹6 ಲಕ್ಷವಾಗುತ್ತಿದ್ದು, ಕನಿಷ್ಠ ₹5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಆದೇಶಿಸಿಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಪತ್ನಿಯ ಪರ ವಕೀಲ ಆಕರ್ಷ್‌ ಕನಾಡೆ ಅವರು “ಅರ್ಜಿದಾರೆಗೆ ಪೌಷ್ಠಿಕಾಂಶಯುಕ್ತ ಆಹಾರಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾಗಿದೆ. ಊಟಕ್ಕೆ ತಿಂಗಳಿಗೆ ₹40,000 ಬೇಕಿದೆ. ತನ್ನನ್ನು ತೊರೆದಿರುವ ಪತಿಯು ಪ್ರತಿದಿನ ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಈ ಶರ್ಟಿನ ಬೆಲೆ ₹10,000 ಇದೆ. ಆದರೆ ತಾನು ಹಳೆಯ ಬಟ್ಟೆ ಧರಿಸಬೇಕಿದೆ. ಬಟ್ಟೆಬರೆಗಾಗಿ ರೂ.50,000 ಹಾಗೂ ಸೌಂದರ್ಯವರ್ಧಕ ಔಷಧಿ ವೆಚ್ಚ ಮತ್ತು ಇತರೆ ವಸ್ತುಗಳ ಖರೀದಿಗೆ ₹60,000 ಬೇಕಿದೆ” ಎಂದರು.

ಇದನ್ನು ಆಲಿಸಿದ ನ್ಯಾ. ಕನ್ನೆಘಂಟಿ ಅವರು "ದಾವೆದಾರರು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ. ನಿಮ್ಮ ಕಕ್ಷಿದಾರರಿಗೆ ಅರ್ಥವಾಗುತ್ತಿಲ್ಲ. ಆದರೆ, ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡಬೇಕು. ಆಕೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡಲಾಗುತ್ತಿದೆ” ಎಂದರು.

ಮುಂದುವರಿದು, ಅರ್ಜಿದಾರೆಯು ಮಗುವಿನ ಖರ್ಚಿಗೆ ವೆಚ್ಚವಾಗುವುದನ್ನು ಏನೂ ಹೇಳಿಲ್ಲ. ಆದರೆ, ತಮ್ಮ ಮಾಸಿಕ ವೈಯಕ್ತಿಕ ಖರ್ಚಿಗೆ ₹6,16,300 ಬೇಕು ಎಂದು ಹೇಳಿದ್ದಾರೆ. ಆದರೆ, ಪತಿಯ ಪರ ವಕೀಲ ಆದಿನಾಥ್‌ ನರ್ದೆ ಅವರು ಆಕೆಯ ಬ್ಯಾಂಕ್‌ ದಾಖಲಾತಿಗಳ ಪ್ರಕಾರ ವಿವಿಧ ಕಡೆ ₹63 ಲಕ್ಷ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ಗಮನಿಸಿತು.

ಇದಕ್ಕೆ ಪತ್ನಿ ಪರ ವಕೀಲ ಆಕ್ಷೇಪಿಸಿದ್ದು, ಜೀವನಾಂಶ ಕೋರಿಕೆಯು ತನ್ನ ವಾಸ್ತವಿಕ ಖರ್ಚು ವೆಚ್ಚವಲ್ಲ, ಅದು ನಿರೀಕ್ಷಾತ್ಮಕ ವೆಚ್ಚವಾಗಿದೆ ಎಂದರು.

ಆಗ ಪೀಠವು ನಿರೀಕ್ಷಾತ್ಮಕ ವೆಚ್ಚಗಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಪತ್ನಿ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಇತರೆ ಹೊಣೆಗಾರಿಕೆ ವಿಚಾರ ಪ್ರಸ್ತಾಪಿಸಿಲ್ಲ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸಲು ಪತ್ನಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ” ಎಂದು ಆದೇಶಿಸಿತು.

ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com