ಕರ್ನಾಟಕ ಹೈಕೋರ್ಟ್‌ಗೆ ಏಪ್ರಿಲ್ 25ರಿಂದ ಮೇ 21ರವರೆಗೆ ಬೇಸಿಗೆ ರಜೆ ಇರಲಿದೆ. ಹೀಗಾಗಿ, ತುರ್ತು ಪ್ರಕರಣಗಳ ವಿಚಾರಣೆಗಾಗಿ ರಜಾ ಕಾಲದ ಅವಧಿಯಲ್ಲಿ ಏಳು ದಿನಗಳು ವಿಭಾಗೀಯ ಮತ್ತು ಏಕಸದಸ್ಯ ಪೀಠಗಳು ಕರ್ತವ್ಯ ನಿರ್ವಹಿಸಲಿವೆ ಎಂದು ನ್ಯಾಯಿಕ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಅಥವಾ ಮೇಲ್ಮನವಿಯ ಮೇಲೆ ಪ್ರಕರಣದ ತುರ್ತಿನ ಬಗ್ಗೆ ಮೊದಲನೇ ಪ್ಯಾರಾದಲ್ಲಿ ವಕೀಲರು ಉಲ್ಲೇಖಿಸಬೇಕು. ಹೀಗೆ ಮಾಡದಿದ್ದಲ್ಲಿ ಅವುಗಳನ್ನು ರಜಾಕಾಲೀನ ಪೀಠದ ಮುಂದೆ ವಿಚಾರಣೆಗೆ ನಿಗದಿಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಜಾ ಕಾಲದ ಅವಧಿಯಲ್ಲಿ ಪ್ರಧಾನ ಪೀಠವಾದ ಬೆಂಗಳೂರಿನಲ್ಲಿ ಹೈಬ್ರಿಡ್ ವಿಧಾನದಲ್ಲಿ ರಜಾಕಾಲೀನ ಪೀಠಗಳು ಪ್ರಕರಣಗಳ ವಿಚಾರಣೆ ನಡೆಸಲಿವೆ. ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ಬದಲಿಗೆ ವರ್ಚುವಲ್ ವಿಧಾನದಲ್ಲಿ ಮಾತ್ರ ಪ್ರಧಾನ ಪೀಠವಾದ ಬೆಂಗಳೂರಿನಿಂದ ವಿಚಾರಣೆ ನಡೆಸಲಾಗುತ್ತದೆ.
ರಜಾಕಾಲೀನ ಪೀಠಗಳಲ್ಲಿ ತುರ್ತು ಮಧ್ಯಂತರ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಹೊರತುಪಡಿಸಿ ಸಿವಿಲ್, ಕ್ರಿಮಿನಲ್, ಕ್ರಿಮಿನಲ್ ಮರುಪರಿಶೀಲನೆ, ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಮನವಿ, ಮೇಲ್ಮನವಿ ಅಥವಾ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲಾಗುವುದಿಲ್ಲ. ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ವಕಲಾತ್ತು, ಶುಲ್ಕ, ಮೆಮೊ, ಆಕ್ಷೇಪಣೆಯನ್ನು ಕಚೇರಿಯಲ್ಲಿ ಸಲ್ಲಿಸಲು ಅನುಮತಿಸಲಾಗಿದೆ.
ರಜಾಕಾಲದ ಮೊದಲ ವಾರದಲ್ಲಿ ಏಪ್ರಿಲ್ 26 ಮತ್ತು 28ರಂದು ಹಿರಿಯ ನ್ಯಾಯಮೂರ್ತಿ ಆರ್ ದೇವದಾಸ್ ಮತ್ತು ನ್ಯಾ. ಕೆ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ಸೂರಜ್ ಗೋವಿಂದರಾಜ್ ಮತ್ತು ಸಚಿನ್ ಶಂಕರ್ ಮಗದುಮ್ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠಗಳಲ್ಲಿ ಮನವಿಗಳ ವಿಚಾರಣೆ ನಡೆಸಲಿದ್ದಾರೆ.
ಎರಡನೇ ವಾರದಲ್ಲಿ ಮೇ 5ರಂದು ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ನ್ಯಾ. ಎಸ್ ರಾಚಯ್ಯ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್, ಇ ಎಸ್ ಇಂದ್ರೇಶ್ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠಗಳಲ್ಲಿ ಮನವಿಗಳ ವಿಚಾರಣೆ ನಡೆಸಲಿದ್ದಾರೆ.
ಮೂರನೇ ವಾರದಲ್ಲಿ ಮೇ 10 ಮತ್ತು 12ರಂದು ಹಿರಿಯ ನ್ಯಾ. ಬಿ ಎಂ ಶ್ಯಾಮ್ ಪ್ರಸಾದ್ ಅವರ ನೇತೃತ್ವದಲ್ಲಿ ನ್ಯಾ. ಎಂ ಜಿ ಎಸ್ ಕಮಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎಸ್ ಸುನಿಲ್ ದತ್ ಯಾದವ್, ಪ್ರದೀಪ್ ಸಿಂಗ್ ಯೆರೂರ್ ಮತ್ತು ಎಂ ನಾಗಪ್ರಸನ್ನ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠಗಳಲ್ಲಿ ಮನವಿಗಳ ವಿಚಾರಣೆ ನಡೆಸಲಿದ್ದಾರೆ.
ನಾಲ್ಕನೇ ಹಾಗೂ ಕೊನೆಯ ವಾರದಲ್ಲಿ ಮೇ 17 ಮತ್ತು 19ರಂದು ಹಿರಿಯ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ನೇತೃತ್ವದ ನ್ಯಾ. ಎಂ ಜಿ ಉಮಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಮನವಿಗಳನ್ನು ಆಲಿಸಲಿದೆ. ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್, ಎನ್ ಎಸ್ ಸಂಜಯ್ ಗೌಡ, ಆರ್ ನಟರಾಜ್, ಎಂ ಐ ಅರುಣ್, ರವಿ ವಿ. ಹೊಸಮನಿ ಮತ್ತು ಜೆ ಎಂ ಖಾಜಿ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠಗಳಲ್ಲಿ ಮನವಿಗಳ ವಿಚಾರಣೆ ನಡೆಸಲು ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಕರ್ನಾಟಕ ಹೈಕೋರ್ಟ್ ಕಾಯಿದೆ 1961ರ ಸೆಕ್ಷನ್ 12ರ ಅಡಿ ಮೇಲಿನ ನ್ಯಾಯಮೂರ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ.
ರಜಾಕಾಲದಲ್ಲಿ ನಿರ್ದಿಷ್ಟ ವಾರಗಳಲ್ಲಿ ಪ್ರಕರಣಗಳನ್ನು ಆಲಿಸುವ ಹಿರಿಯ ನ್ಯಾಯಮೂರ್ತಿಗಳು ನ್ಯಾಯಾಲಯದ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಬೆಂಗಳೂರು ಪೀಠದಲ್ಲಿ ವಿಚಾರಣೆಯ ದಿನಗಳನ್ನು ಹೊರತುಪಡಿಸಿದ ದಿನದಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಮನವಿ, ಮೇಲ್ಮನವಿ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ವಿಚಾರಣೆಯ ದಿನದಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರ ವರೆಗೆ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕವಾಗಿ ಮನವಿ ಸಲ್ಲಿಸಲು ಕಲಬುರ್ಗಿ ಮತ್ತು ಧಾರವಾಡ ಪೀಠಗಳಲ್ಲಿ ಅನುಮತಿಸಲಾಗಿದೆ. ಇ-ಫೈಲಿಂಗ್ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.