ಚಾಮರಾಜನಗರ ದುರಂತ: ಘಟನೆಯ ಸತ್ಯಶೋಧನೆಗೆ ನ್ಯಾ. ಎ ಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ರಚಿಸಿದ ಹೈಕೋರ್ಟ್‌

ನ್ಯಾ. ಎ ಎನ್‌ ವೇಣುಗೋಪಾಲ ಗೌಡ ಸಮಿತಿಯು ಮುಂದಿನ ಸೋಮವಾರದಂದು ವರದಿಯನ್ನು ಸಲ್ಲಿಸುವುದನ್ನು ನೀರೀಕ್ಷಿಸುವುದಾಗಿ ಹೈಕೋರ್ಟ್‌ ಹೇಳಿದೆ.
High Court of Karnataka
High Court of Karnataka

ಆಮ್ಲಜನಕದ ಕೊರತೆಯಿಂದ ಚಾಮರಾಜನಗರ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 24 ಕೋವಿಡ್‌ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಭವಿಸಿದಂತೆ ಸತ್ಯಶೋಧನೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯನ್ನು ಬುಧವಾರ ಹೈಕೋರ್ಟ್ ರಚಿಸಿದೆ.

“ಸಮಿತಿಯ ಅಂತಿಮ ಉದ್ದೇಶವು ಸತ್ಯಶೋಧನಾ ತನಿಖೆ ಕೈಗೊಳ್ಳುವುದಾಗಿದೆ. ಚಾಮರಾಜನಗರದಲ್ಲಿ ಸಂಭವಿಸಿದಂತಹ ಘಟನೆಗಳು ಮರುಕಳಿಸದಿರಲು ಇದರಿಂದ ರಾಜ್ಯ ಸರ್ಕಾರಕ್ಕೆ ಉಪಯೋಗವಾಗಲಿದೆ,” ಎಂದು ಸಮಿತಿಯ ಉದ್ದೇಶವನ್ನು ಹೈಕೋರ್ಟ್‌ ಸ್ಪಷ್ಟಪಡಿಸಿತು.

ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನ್ಯಾ. ಎ ಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿಗೆ ತಮ್ಮ ಸುಪರ್ದಿನಲ್ಲಿರುವ ಘಟನೆಗೆ ಸಂಭವಿಸಿದ ದಾಖಲೆಗಳನ್ನು ಲಭ್ಯವಾಗಿಸಬೇಕು. ಸಮಿತಿಯು ಮುಂದಿನ ಸೋಮವಾರದಂದು ವರದಿ ಸಲ್ಲಿಸಬೇಕೆಂದು ನಿರೀಕ್ಷಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಪೀಠವು ಹೇಳಿತು.

ರಾಜ್ಯದಲ್ಲಿನ ಕೋವಿಡ್‌ ನಿರ್ವಹಣೆಯಲ್ಲಿನ ಲೋಪಗಳ ಕುರಿತು ನ್ಯಾಯಾಲಯಕ್ಕೆ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ಅರ್ಜಿ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ಕೈಗೊಂಡಿದೆ. ಕೋವಿಡ್‌ನಿಂದಾಗಿ ಉಂಟಾಗಿರುವ ಪ್ರಸಕ್ತ ಗಂಭೀರ ಸನ್ನಿವೇಶವನ್ನು ಪೀಠವು ಪರಿಗಣಿಸಿದೆ.

ಇಂದಿನ ವಿಚಾರಣೆಯ ಆರಂಭದಲ್ಲಿಯೇ ರಾಜ್ಯದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಚಾಮರಾಜನಗರ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ್‌ ಅವರನ್ನೊಳಗೊಂಡ ಏಕಸದಸ್ಯ ತನಿಖಾ ಆಯೋಗ ರಚಿಸಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು. ಈ ವೇಳೆ ಪೀಠವು ತನಿಖಾ ಆಯೋಗಕ್ಕೆ ನ್ಯಾಯಮೂರ್ತಿಗಳನ್ನು ಹೆಸರಿಸುವುದು ನ್ಯಾಯಾಲಯದ ಕೆಲಸ ಎಂದು ಆಕ್ಷೇಪಿಸಿತ್ತು.

Related Stories

No stories found.
Kannada Bar & Bench
kannada.barandbench.com