ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಬೈಕ್‌ ಟ್ಯಾಕ್ಸಿ ಮೇಲಿನ ನಿಷೇಧವು ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಮೂರು ತಿಂಗಳ ಬಳಿಕ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಸರ್ಕಾರ.
Bike Taxi
Bike Taxi
Published on

ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಬೈಕ್‌ ಟ್ಯಾಕ್ಸಿ ಮೇಲಿನ ನಿಷೇಧವು ಅಸಾಂವಿಧಾನಿಕ ಮತ್ತು ಮೋಟಾರು ವಾಹನಗಳ ಕಾಯಿದೆಗೆ ವಿರುದ್ಧ ಎಂದು ತೀರ್ಪು ನೀಡಿತ್ತು. ಇದಾದ ಮೂರು ತಿಂಗಳ ಬಳಿಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಮೋಟಾರು ವಾಹನ ಎಂದು ರಾಜ್ಯ ಸರ್ಕಾರವು ಬೈಕ್‌ ಟ್ಯಾಕ್ಸಿಗೆ ಅನುಮತಿ ನಿರಾಕರಿಸಲಾಗದು ಎಂದು ಹೈಕೋರ್ಟ್‌ ಹೇಳಿತ್ತು.

ಇದಕ್ಕೂ ಮುನ್ನ, ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ ಎಂಬ ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್‌, ರ‍್ಯಾಪಿಡೊ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಭಾಗೀಯ ಪೀಠ ಪುರಸ್ಕರಿಸಿತ್ತು.

“ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಇಂತಹ ಅರ್ಜಿಗಳನ್ನು ಪರಿಗಣಿಸಿ, ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಸ್ತುತ ನಿಯಮಾವಳಿಗಳನ್ನು ಪರಿಶೀಲಿಸಬಹುದಾದರೂ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವಂತಿಲ್ಲ” ಎಂದು ವಿಭಾಗೀಯ ಪೀಠ ಹೇಳಿತ್ತು.

“ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 74(2)ರ ಪ್ರಕಾರ ಅಗತ್ಯ ಷರತ್ತುಗಳನ್ನು ವಿಧಿಸಬಹುದು. ಅಗ್ರಿಗೇಟರ್‌ಗಳು ಸಹ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿದ್ದು, ಅಂತಹ ಅರ್ಜಿಗಳನ್ನು ಈ ಆದೇಶದಲ್ಲಿನ ನ್ಯಾಯಾಲಯದ ಅವಲೋಕನಗಳು ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಪರಿಗಣಿಸಬೇಕು” ಎಂದು ತಿಳಿಸಿರುವ ಹೈಕೋರ್ಟ್, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿ, ಮೇಲ್ಮನವಿಗಳನ್ನು ಮಾನ್ಯ ಮಾಡಿತ್ತು.

ಮೋಟಾರು ವಾಹನಗಳನ್ನು ಕಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ರೀತಿಯಲ್ಲಿ ಬಳಸುವುದಕ್ಕೆ ನಿಷೇಧ ಹೇರುವುದು ಅತಾರ್ಕಿಕ ನಿಯಂತ್ರಣವಾಗಿದ್ದು, ಇದು ಸಂವಿಧಾನದ 19(1)(g)ನೇ ವಿಧಿಯಡಿ ವಹಿವಾಟು ನಡೆಸುವ ಹಕ್ಕಿಗೆ ವಿರುದ್ಧ ಎಂದು ವಿಭಾಗೀಯ ಪೀಠ ಹೇಳಿತ್ತು.

ಮೋಟಾರು ವಾಹನಗಳ ಕಾಯಿದೆಯ ಅಡಿ ಸಾರಿಗೆ ವಾಹನಗಳ ವ್ಯಾಖ್ಯಾನದಡಿ ಮೋಟಾರು ವಾಹನಗಳು ಬರುತ್ತವೆ. ಹೀಗಾಗಿ, ಟ್ಯಾಕ್ಸಿ ಸೇವೆ ನೀಡಲು ಅನುಮತಿ ನಿರಾಕರಿಸಲಾಗದು. ಕಾಯಿದೆ ಸೆಕ್ಷನ್‌ 74(2)ರ ಅಡಿ ರಾಜ್ಯ ಸರ್ಕಾರವು ಬೈಕ್‌ ಟ್ಯಾಕ್ಸಿ ಸೇವೆ ನಿಯಂತ್ರಿಸಲು ಮತ್ತು ಷರತ್ತು ವಿಧಿಸಬಹುದು. ಮೋಟಾರು ವಾಹನ ಎಂಬ ಏಕೈಕ ಆಧಾರದಲ್ಲಿ ಅರ್ಜಿ ತಿರಸ್ಕರಿಸಲಾಗದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು.  

Kannada Bar & Bench
kannada.barandbench.com