ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಕಾನೂನಾತ್ಮಕ ಅಡಚಣೆ ಇದ್ದಲ್ಲಿ ಸರ್ಕಾರವು ಪರ್ಯಾಯ ಜಾಗ ಕಲ್ಪಿಸಲಿ: ಹೈಕೋರ್ಟ್‌

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸುವುದಕ್ಕೆ ಕಾನೂನಾತ್ಮಕವಾಗಿ ಅಥವಾ ಬೇರಾವುದೇ ಅಡಚಣೆ ಇದ್ದಲ್ಲಿ ಜಿಲ್ಲಾಡಳಿತವು ಪರ್ಯಾಯ ಸ್ಥಳವನ್ನು ರಾಜ್ಯೋತ್ಸವ ನಡೆಸಲು ನೀಡಬೇಕು ಎಂದು ಆದೇಶದಲ್ಲಿ ಮಾರ್ಪಾಡು ಮಾಡಿದ ಪೀಠ.
ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಕಾನೂನಾತ್ಮಕ ಅಡಚಣೆ ಇದ್ದಲ್ಲಿ ಸರ್ಕಾರವು ಪರ್ಯಾಯ ಜಾಗ ಕಲ್ಪಿಸಲಿ: ಹೈಕೋರ್ಟ್‌

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕಾನೂನಾತ್ಮಕ ಅಡಚಣೆ ಇದ್ದಲ್ಲಿ ಅರ್ಜಿದಾರರಾದ ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಪರ್ಯಾಯ ಜಾಗವನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ. ಅಲ್ಲದೇ, ನವೆಂಬರ್‌ 1ರಿಂದ 3ರವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅರ್ಜಿದಾರರಿಗೆ ನ್ಯಾಯಾಲಯ ಸಮ್ಮತಿಸಿದೆ.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ, ನಗರದೇವಿ ಅಣ್ಣಮ್ಮದೇವಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿಸಬೇಕು ಎಂದು ಕೋರಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

“ಅರ್ಜಿದಾರರಿಗೆ ರಾಜ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನವೆಂಬರ್‌ 1ರಿಂದ 3ರವರೆಗೆ ಅನುಮತಿಸಲಾಗಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸುವುದಕ್ಕೆ ಕಾನೂನಾತ್ಮಕವಾಗಿ ಅಥವಾ ಬೇರಾವುದೇ ಅಡಚಣೆ ಇದ್ದಲ್ಲಿ ಜಿಲ್ಲಾಡಳಿತವು ಪರ್ಯಾಯ ಸ್ಥಳವನ್ನು ಕರ್ನಾಟಕ ರಾಜ್ಯೋತ್ಸವ ನಡೆಸಲು ನೀಡಬೇಕು. ರಾಜ್ಯೋತ್ಸವದ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರು/ ಕಾರ್ಯಕರ್ತರು ಯಾವುದೇ ರೀತಿ ಕೋಮು ಸೌಹಾರ್ತತೆಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಶ್ರೀಧರ್‌ ಪ್ರಭು ಅವರು “ಕರ್ನಾಟಕ ರಾಜ್ಯೋತ್ಸವ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಬೆಂಗಳೂರು ಜಿಲ್ಲಾಡಳಿತಕ್ಕೆ ಅಕ್ಟೋಬರ್‌ 17ರಂದು ಮನವಿ ಸಲ್ಲಿಸಲಾಗಿದೆ. ಅಣ್ಣಮ್ಮ ದೇವಿ ಉತ್ಸವ ನಡೆಸುವ ಬೇಡಿಕೆಯನ್ನು ಕೈಬಿಡಲಾಗಿದೆ. ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಬಾವುಟ ಮಾತ್ರ ಹಾರಿಸಲಾಗುವುದು. ಬೇರೆ ಯಾವುದೇ ಬಾವುಟ ಹಾರಿಸುವುದಿಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ಎಸ್‌ ಮಹೇಂದ್ರ ಅವರು “ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಧಾರ್ಮಿಕ ವೈಶಿಷ್ಟತೆ ಇದ್ದು, ಈ ಸಂಬಂಧ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶ ಮಾಡಿವೆ. ಹೀಗಾಗಿ, ಮೈದಾನದ ಧಾರ್ಮಿಕ ವೈಶಿಷ್ಟ್ಯತೆಯನ್ನು ಕಾಪಾಡಬೇಕಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರಗಳು ನಿರ್ಧಾರ ಕೈಗೊಂಡಿವೆ” ಎಂದರು.

“ಅರ್ಜಿದಾರ ಸಂಘಟನೆಯು ನವೆಂಬರ್‌ 1ರಿಂದ 3ರವರೆಗೆ ಕರ್ನಾಟಕ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸುವುದಕ್ಕೆ ಸೀಮಿತವಾಗಿ ಅನುಮತಿ ಕೋರಿದ್ದಾರೆ. ಅರ್ಜಿದಾರರು ಕೋಮು ಸೌಹಾರ್ದಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆವಹಿಸಿಬೇಕು. ಅವರ ಹೇಳಿಕೆಯನ್ನು ಮುಚ್ಚಳಿಕೆಯನ್ನಾಗಿ ಪರಿಗಣಿಸಿ, ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಆದೇಶಿಸಿತು.

ಇದರ ಬೆನ್ನಿಗೇ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸುವುದಕ್ಕೆ ಕಾನೂನಾತ್ಮಕವಾಗಿ ಅಥವಾ ಬೇರಾವುದೇ ಅಡಚಣೆ ಇದ್ದಲ್ಲಿ ಜಿಲ್ಲಾಡಳಿತವು ಪರ್ಯಾಯ ಸ್ಥಳವನ್ನು ಕರ್ನಾಟಕ ರಾಜ್ಯೋತ್ಸವ ನಡೆಸಲು ನೀಡಬೇಕು ಎಂದು ಆದೇಶದಲ್ಲಿ ಮಾರ್ಪಾಡು ಮಾಡಿತು.

Kannada Bar & Bench
kannada.barandbench.com