ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ: ಉಪಲೋಕಾಯುಕ್ತ ನ್ಯಾ. ವೀರಪ್ಪ ಕಳವಳ

“ಇಂದು ಮಹಿಳೆಯರು ಅತ್ಯಂತ ಶಕ್ತಿಶಾಲಿ ಎನ್ನುತ್ತಿದ್ದೇವೆ. ಆದರೆ, ಭ್ರಷ್ಟಾಚಾರದಲ್ಲೂ ಅವರು ಶಕ್ತಿಶಾಲಿ ಆಗಿದ್ದಾರೆ” ಎಂದು ಬೇಸರಿಸಿದ ನ್ಯಾ. ವೀರಪ್ಪ.
ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ: ಉಪಲೋಕಾಯುಕ್ತ ನ್ಯಾ. ವೀರಪ್ಪ ಕಳವಳ
Published on

“ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಕರ್ನಾಟಕ ಭ್ರಷ್ಟಾಚಾರದ ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ. ಈ ಪಿಡುಗನ್ನು ತಡೆಯದೇ ಹೋದಲ್ಲಿ ಭವಿಷ್ಯದಲ್ಲಿ ಭೀಕರ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಎಚ್ಚರಿಸಿದರು.

ವಕೀಲ ತುಳವನೂರು ಶಂಕರಪ್ಪ ಅವರು ಬರೆದಿರುವ ‘ಓವರ್‌ಸೀಸ್‌ ಟ್ರಾವೆಲಾಗ್‌’ ಪ್ರವಾಸ ಕಥನವನ್ನು ಹೈಕೋರ್ಟ್‌ ವಕೀಲರ ಸಭಾಂಗಣದಲ್ಲಿ ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಇಂದು ಮಹಿಳೆಯರು ಅತ್ಯಂತ ಶಕ್ತಿಶಾಲಿ ಎನ್ನುತ್ತಿದ್ದೇವೆ. ಆದರೆ, ಭ್ರಷ್ಟಾಚಾರದಲ್ಲೂ ಅವರು ಶಕ್ತಿಶಾಲಿ ಆಗಿದ್ದಾರೆ. ಹೀಗಾಗಿ, ಭ್ರಷ್ಟಾಚಾರವನ್ನು ಹೇಗೆ ಮತ್ತು ಎಲ್ಲಿಂದ ತಡೆಯಬಹುದು ಎಂಬುದನ್ನು ವಕೀಲ ಸಮೂಹವೊಂದೇ ಸಮರ್ಥವಾಗಿ ನಿರ್ಧರಿಸಬಲ್ಲದು” ಎಂದು ಅಭಿಪ್ರಾಯಪಟ್ಟರು.

“ಇಂದು ಕೇರಳದಲ್ಲಿ ಶೇ 10ರಷ್ಟು ಮಾತ್ರವೇ ಭ್ರಷ್ಟಾಚಾರ ಇದ್ದರೆ ಕರ್ನಾಟಕದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ. ನಾನು ಉಪ ಲೋಕಾಯುಕ್ತ ಆದ ಮೇಲೆ ಇದನ್ನೆಲ್ಲಾ ನೋಡುವ ಅವಕಾಶ ಸಿಕ್ಕಿದೆ. ಹೀಗಾಗಿ, ನಾನು ಹೋದ ಕಡೆಯಲ್ಲೆಲ್ಲಾ ಆಸ್ಪತ್ರೆ, ಶಾಲೆ ಹಾಸ್ಟೆಲ್‌ಗಳಲ್ಲಿ ಭ್ರಷ್ಟಾಚಾರ ನಿರ್ಮೂನಲಗೆ ಶಪಥ ಕೈಗೊಳ್ಳುವಂತೆ ಅಲ್ಲಿನ ಸಿಬ್ಬಂದಿಗೆ ಪ್ರೇರೇಪಿಸುತ್ತಿದ್ದೇನೆ. ಈ ಯಜ್ಞದಲ್ಲಿ ವಕೀಲರೂ ಪಾಲ್ಗೊಂಡು ಸಮಾಜ ಸುಧಾರಣೆಗೆ ಪ್ರಯತ್ನಿಸಬೇಕು ಮತ್ತು ದುಷ್ಟರ ಸಂಹಾರಕ್ಕೆ ಪ್ರಯತ್ನಿಸಬೇಕು” ಎಂದರು.

ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಅವರು “ವಕೀಲರು ತಮ್ಮೊಳಗಿನ ಪ್ರತಿಭೆಯನ್ನು ಹೊರಚೆಲ್ಲಲು ಉದ್ಯುಕ್ತರಾಗಬೇಕು” ಎಂದರು. 

ಹಿರಿಯ ವಕೀಲ ಎಂ ಟಿ ನಾಣಯ್ಯ ಅವರು “ಇಂದು ಎಲ್ಲ ಇಲಾಖೆಗಳಲ್ಲೂ ಭ್ರಷ್ರಾಚಾರ ಇದ್ದು ಪ್ರತಿಯೊಂದು ಇಲಾಖೆಗೂ ಪ್ರತ್ಯೇಕವಾದ ಲೋಕಾಯುಕ್ತ ಕಚೇರಿ ತೆರೆಯುವಂತಹ ದುಃಸ್ಥಿತಿ ಇದೆ. ಚಿಕ್ಕವಯಸ್ಸಿನಲ್ಲೇ ಹೆಚ್ಚಿನ ಹಣ ಸಂಪಾದನೆ ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹೀಗಾಗಿ, ಪೋಷಕರು ಸುಧಾರಣೆಯಾದರೆ ಮಕ್ಕಳೂ ಸುಧಾರಿಸುತ್ತಾರೆ. ಇಲ್ಲವಾದಲ್ಲಿ ದೇಶ ಮತ್ತು ಸಂವಿಧಾನ ವಿಫಲವಾಗುತ್ತದೆ. ಸಮಾಜದ ಮನಃಶಾಂತಿ ಕದಡುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ವಕೀಲ ಮತ್ತು ಲೇಖಕ ಶಂಕರಪ್ಪ, ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಹೈಕೋರ್ಟ್‌ ಘಟಕದ ಪದಾಧಿಕಾರಿಗಳಾದ ಕೆ ಚಂದ್ರಕಾಂತ ಪಾಟೀಲ್, ಬಿ ಆರ್ ಹರಿಣಿ, ಸಂಧ್ಯಾ ಯು. ಪ್ರಭು, ಆತ್ಮ ವಿ.ಹಿರೇಮಠ, ಎಚ್‌ ಎನ್‌ ತಮ್ಮಯ್ಯ ಮತ್ತು ವಕೀಲರು ಇದ್ದರು.

Kannada Bar & Bench
kannada.barandbench.com