ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2024ವನ್ನು ಸಹಕಾರ ಸಚಿವ ಕೆ ರಾಜಣ್ಣ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 20ರ ಉಪಪ್ರಕರಣ (2)ರ (ಎ-iv)) ಮತ್ತು (ಎ-v) ಖಂಡದ ಉಪಬಂಧಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅಸಂಖ್ಯಾತ ಅರ್ಜಿಗಳು ದಾಖಲಾಗಿವೆ. ಹೈಕೋರ್ಟ್ ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸಿರುತ್ತದೆ. ಆದ್ದರಿಂದ, ಎಲ್ಲಾ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತರಿಪಡಿಸಲು ತಿದ್ದುಪಡಿ ಪ್ರಸ್ತಾವಿಸಲಾಗಿದೆ.
ಎರಡನೇ ಆಡಳಿತ ಸುಧಾರಣೆ ಆಯೋಗದ ವರದಿಯ ಶಿಫಾರಸ್ಸುಗಳಿಗೆ ಅನುಸಾರ ಮತ್ತು ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಹಕಾರ ಚುನಾವಣಾ ಪ್ರಾಧಿಕಾರ ರದ್ದು ಮಾಡಿ, ರಿಜಿಸ್ಟ್ರಾರ್ ನಿಯಂತ್ರಣದ ಅಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಪ್ರಕರಣ 39ಎಎ ಅನ್ನು ತಿದ್ದುಪಡಿ ಮಾಡಲು ಪ್ರಸ್ತಾವಿಸಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 28-ಎ-(3)ರಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಮಂಡಳಿಯಲ್ಲಿ ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ. ಅದಕ್ಕೆ ಅನುಸಾರವಾಗಿ ಮಾಧ್ಯಮಿಕ, ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ತಿದ್ದುಪಡಿ ಪ್ರಸ್ತಾವಿಸಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28-ಎ ರ (೪ಬಿ) ಉಪಪ್ರಕರಣವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಡಳಿಯನ್ನು ಹೊರತುಪಡಿಸಿ ಪ್ರತಿಯೊಂದು ನೆರವು ಪಡೆದ ಸಂಘದ ಮಂಡಳಿಯಲ್ಲಿನ ಪ್ರಾತಿನಿಧ್ಯಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡುವುದಕ್ಕಾಗಿ ಈಗಾಗಲೇ ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸರ್ಕಾರದ ನಾಮನಿರ್ದೇಶನವನ್ನು ವಿಸ್ತರಿಸಲು ಮತ್ತು ಸಹಕಾರ ಚಳವಳಿಯಲ್ಲಿ ಸಮಾಜದ ವಂಚಿತ ಹಾಗೂ ಪ್ರಾತಿನಿಧ್ಯ ಇರದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ನಾಮನಿರ್ದೇಶನ ಸ್ಥಾನಗಳ ಸಂಖ್ಯೆ ಮೂರಕ್ಕೆ (ಒಂದು ಸ್ಥಾನ ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟುಗಳ ಸದಸ್ಯರಿಗೆ, ಒಂದು ಸ್ಥಾನ ಮಹಿಳೆ ಹಾಗೂ ಇನ್ನೊಂದು ಸ್ಥಾನ ಇತರೆ ಪ್ರವರ್ಗಕ್ಕೆ ಮೀಸಲು) ಹೆಚ್ಚಿಸಲು ತಿದ್ದುಪಡಿ ಪ್ರಸ್ತಾವಿಸಲಾಗಿದೆ.
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ 20ಬಿ ಪ್ರಕರಣದ ಉಪಪ್ರಕರಣ (1)ರ (ಸಿ)) ಖಂಡದ ಉಪಪ್ರಕರಣ (i) ಮತ್ತು (ii)ರ ಉಪಬಂಧಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅಸಂಖ್ಯಾತ ಅರ್ಜಿಗಳು ದಾಖಲಾಗಿವೆ. ಹೈಕೋರ್ಟ್ ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸಿರುತ್ತದೆ. ಆದ್ದರಿಂದ, ಎಲ್ಲಾ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತರಿಪಡಿಸಲು ತಿದ್ದುಪಡಿ ಪ್ರಸ್ತಾವಿಸಲಾಗಿದೆ.
ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸ್ಸಿಗೆ ಅನುಸಾರವಾಗಿ ಮತ್ತು ಸಹಕಾರಿ ಚುನಾವಣಾ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದುಪಡಿಸಿ, ರಿಜಿಸ್ಟ್ರಾರ್ ನಿಯಂತ್ರಣದಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 39ಎಎ-ಗೆ ತಿದ್ದುಪಡಿ ತರುವ ತತ್ಪರಿಣಾಮವಾಗಿ 26ರ ಪ್ರಕರಣಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾವಿಸಲಾಗಿದೆ.
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1977ರ ಪ್ರಕರಣ 24(1)(ಇ)ರಲ್ಲಿ ಪ್ರಾಥಮಿಕ ಸಹಕಾರಿಗಳ ಮಂಡಳಿಯಲ್ಲಿ ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು, ಹಿಂದುಳಿದ ವರ್ಗ, ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ. ಅದಕ್ಕೆ ಅನುಸಾರವಾಗಿ ಪೂರಕ ಸಹಕಾರಿ, ಸಂಯುಕ್ತ ಸಹಕಾರಿ ಮತ್ತು ಅಪೆಕ್ಸ್ ಸಹಕಾರಿಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ತಿದ್ದುಪಡಿ ಪ್ರಸ್ತಾವಿಸಲಾಗಿದೆ.