

ಎರಡು ವರ್ಷಗಳೊಳಗೆ ಅಖಿಲ ಭಾರತ ವಕೀಲರ ಪರೀಕ್ಷೆ ಉತ್ತೀರ್ಣರಾಗದ ವಕೀಲರು ನ್ಯಾಯಾಲಯ, ನ್ಯಾಯಮಂಡಳಿ ಹಾಗೂ ಇತರ ಪ್ರಾಧಿಕಾರಗಳ ಮುಂದೆ ವಕೀಲ ವೃತ್ತಿ ನಡೆಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸೂಚಿಸಿದೆ.
ಅಕ್ಟೋಬರ್ 17ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಎಐಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಕೀಲರನ್ನು ಗುರುತಿಸಲು ವ್ಯವಸ್ಥೆ ರೂಪಿಸುವಂತೆ ಪರಿಷತ್ಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಕೆಎಸ್ಬಿಸಿ ಅಧ್ಯಕ್ಷ ಆರ್ ರಾಜಣ್ಣ ಅವರು ಸುತ್ತೋಲೆ ಹೊರಡಿಸಿದ್ದಾರೆ.
2010-2011ನೇ ಶೈಕ್ಷಣಿಕ ವರ್ಷಕ್ಕಿಂತ ಮೊದಲು, ಅಂದರೆ 2010ರ ಜೂನ್ 12 ಅಥವಾ ಅದಕ್ಕೂ ಮೊದಲು ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರಿಗೆ ಎಐಬಿಇಯಿಂದ ವಿನಾಯಿತಿ ನೀಡಲಾಗಿದೆ.
ಆದರೆ, 2009-2010ನೇ ಶೈಕ್ಷಣಿಕ ವರ್ಷದ ನಂತರ ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರು ನೋಂದಣಿ ದಿನಾಂಕದಿಂದ ಎರಡು ವರ್ಷಗಳೊಳಗೆ ಎಐಬಿಇಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ನಿಗದಿತ ಅವಧಿಯಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದವರು ಪರೀಕ್ಷೆ ಪಾಸಾಗುವವರೆಗೆ ಯಾವುದೇ ಕಾನೂನು ವೇದಿಕೆಯಲ್ಲಿ ವಕೀಲ ವೃತ್ತಿ ನಡೆಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಅಂತಹವರು ವಕಾಲತ್ತು ಸಲ್ಲಿಸುವಂತಿಲ್ಲ ಅಥವಾ ತಾವು ವೃತ್ತಿಪರ ವಕೀಲರು ಎಂದು ಪ್ರತಿಪಾದಿಸುವಂತಿಲ್ಲ ಎಂದು ಪರಿಷತ್ ಸ್ಪಷ್ಟಪಡಿಸಿದೆ.
“ಅರ್ಹತೆ ಹೊಂದಿರದ ಇಂತಹ ಎಲ್ಲ ವ್ಯಕ್ತಿಗಳು ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ವಕೀಲರಾಗಿ ಹಾಜರಾಗುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ವಕಾಲತ್ತು ಸಲ್ಲಿಸಬಾರದು ಅಥವಾ ತಾವು ವಕೀಲ ವೃತ್ತಿ ನಡೆಸುತ್ತಿರುವುದಾಗಿ ಹೇಳಿಕೊಳ್ಳಬಾರದು” ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ನಿರ್ದೇಶನಗಳನ್ನು ಉಲ್ಲಂಘಿಸಿದರೆ ವಕೀಲರ ಕಾಯಿದೆ, 1961ರ ಸೆಕ್ಷನ್ 45 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 318, 319 ಮತ್ತು 61ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ಜರುಗಿಸಬಹುದು ಎಂದು ಪರಿಷತ್ ಎಚ್ಚರಿಸಿದೆ.
ಇದಲ್ಲದೆ, ವಕೀಲರ ಪರಿಷತ್ ಕೈಗೊಳ್ಳುವ ಶಿಸ್ತು ಕ್ರಮಗಳ ಹೊರತಾಗಿಯೂ ಯಾವುದೇ ವ್ಯಕ್ತಿ ಸ್ವತಂತ್ರವಾಗಿ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಬಹುದು ಎಂದು ಸುತ್ತೋಲೆ ತಿಳಿಸಿದೆ.
ರಾಜ್ಯದ ಎಲ್ಲ ವಕೀಲರ ಸಂಘಗಳು ಹೊಸ ಸದಸ್ಯರ ಸೇರ್ಪಡೆ ಅಥವಾ ಹಾಲಿ ಸದಸ್ಯತ್ವ ನವೀಕರಣದ ವೇಳೆ ಎಐಬಿಇ ಉತ್ತೀರ್ಣ ಪ್ರಮಾಣಪತ್ರ ಹಾಗೂ ವೃತ್ತಿ ಪ್ರಮಾಣಪತ್ರ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ಸುತ್ತೋಲೆಯನ್ನು ಸಂಘಗಳ ಸೂಚನಾ ಫಲಕಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು ಮತ್ತು ಎಐಬಿಇ ಅರ್ಹತೆ ಹೊಂದಿರದ ವಕೀಲರ ಪಟ್ಟಿಯನ್ನು 30 ದಿನಗಳೊಳಗೆ ರಾಜ್ಯ ವಕೀಲರ ಪರಿಷತ್ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.
ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವೃತ್ತಿ ನಡೆಸುವ ಹಕ್ಕನ್ನು ಮರುಸ್ಥಾಪಿಸಿಕೊಳ್ಳಲು ಸಂಬಂಧಪಟ್ಟ ವಕೀಲರು ಅರ್ಜಿ ಸಲ್ಲಿಸಬಹುದು.
ಭಾರತೀಯ ವಕೀಲರ ಪರಿಷತ್ನ ನಿರ್ಣಯ, ಎಐಬಿಇ ನಿಯಮಗಳು-2010, ವೃತ್ತಿ ಪ್ರಮಾಣಪತ್ರ ಪರಿಶೀಲನಾ ನಿಯಮಗಳು-2015 ಹಾಗೂ ಅಕ್ಟೋಬರ್ 31, 2026ರ ಹಿಂದಿನ ಸುತ್ತೋಲೆಯನ್ನು ಉಲ್ಲೇಖಿಸಿ ಈ ನಿರ್ದೇಶನಗಳನ್ನು ಹೊರಡಿಸಲಾಗಿದೆ.
ಅಕ್ಟೋಬರ್ 17ರಂದು ನೀಡಿದ್ದ ತೀರ್ಪಿನ 9ರಿಂದ 11ನೇ ನಿರ್ದೇಶನಗಳ ಅನುಸರಣೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ಬಿಸಿ ತಿಳಿಸಿದೆ. ಈ ಸಂಬಂಧ ನವೆಂಬರ್ 30, 2026ರಂದು ಹೈಕೋರ್ಟ್ಗೆ ಅನುಪಾಲನಾ ವರದಿ ಸಲ್ಲಿಸಬೇಕಿದೆ ಎಂದೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.