ಅಂಗವಿಕಲರ ಹಕ್ಕು ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕುರಿತ ಮಾಹಿತಿ ಸಲ್ಲಿಕೆಗೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

“ಅಂಗವಿಕಲರ ಹಕ್ಕುಗಳ ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗಿದೆಯೇ” ಎಂದು ಸರ್ಕಾರದ ವಕೀಲರನ್ನು ಪ್ರಶ್ನಿಸಿದ ಪೀಠ.
ಅಂಗವಿಕಲರ ಹಕ್ಕು ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕುರಿತ ಮಾಹಿತಿ ಸಲ್ಲಿಕೆಗೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ
Karnataka High Court

ಅಂಗವಿಕಲರ ಹಕ್ಕುಗಳ ಕಾಯಿದೆ 2016ರ ಅಡಿ ರಾಜ್ಯ ನಿಯಮಗಳನ್ನು 2019ರ ಸೆಪ್ಟೆಂಬರ್‌ 5ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ ಗಮನಕ್ಕೆ ತಂದಿದೆ. ಈ ವೇಳೆ ನ್ಯಾಯಾಲಯವು ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳನ್ನು ಯಾವಾಗ ಸ್ಥಾಪಿಸಲಾಗುವುದು ಎನ್ನುವ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.

ಅಂಗವಿಕಲರ ಹಕ್ಕುಗಳ ಕಾಯಿದೆಯ ನಿಯಮಗಳ ಜಾರಿಗೆ ಸಂಬಂಧಿಸಿದಂತೆ ಚಂದ್ರಶೇಖರ್‌ ಪುಟ್ಟಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಹಿಂದೆಯೇ ನಿಯಮಗಳ ಅಧಿಸೂಚನೆ ಪ್ರಕಟಿಸಲಾಗಿದೆ ಎಂದ ಮೇಲೆ ಕಳೆದ ವಿಚಾರಣೆಯಲ್ಲಿ ಏಕೆ ನಮಗೆ ತಿಳಿಸಲಿಲ್ಲ” ಎಂದು ಪೀಠವು ಸರ್ಕಾರದ ಪರ ವಕೀಲ ರಾಜಶೇಖರ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ಅವರು “ವಿಚಾರಣೆಯ ಬಳಿಕ ಈ ವಿಚಾರ ನಮಗೆ ತಿಳಿಸಲಾಯಿತು. ಅದನ್ನು ಪರಿಶೀಲಿಸಿಕೊಂಡಿದ್ದೇವೆ. ಇದಕ್ಕಾಗಿ ಪೀಠದ ಕ್ಷಮೆ ಕೋರುತ್ತೇನೆ” ಎಂದರು.

“ಅಂಗವಿಕಲರ ಹಕ್ಕುಗಳ ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗಿದೆಯೇ” ಎಂದು ಪೀಠವು ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ರಾಜಶೇಖರ್‌ ಅವರು “ಇನ್ನೂ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗಿಲ್ಲ. ಮಾಹಿತಿ ಪಡೆದು ಅನುಪಾಲನಾ ವರದಿ ಸಲ್ಲಿಸಲಾಗುವುದು” ಎಂದು ಹೇಳಿದರು.

Also Read
ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿ ಸಮಾಜದ ಏಳಿಗೆ: ಕೂಡು ವಸತಿಯಲ್ಲಿರುವ ಮಹಿಳಾ ಹಕ್ಕುಗಳ ಕುರಿತು ಸುಪ್ರೀಂ ವ್ಯಾಖ್ಯಾನ

ಅಂತಿಮವಾಗಿ ಪೀಠವು “ರಾಜಶೇಖರ್‌ ಅವರು ಅಂಗವಿಕಲರ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾತ್ರ ವಾದ ಮಂಡಿಸಲಿದ್ದಾರೆ. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾಯಿದೆ 2017ರ ಸಂಬಂಧಿತ ವಿಚಾರಗಳ ಕುರಿತು ಸರ್ಕಾರ ನೇಮಿಸಿರುವ ವಿಶೇಷ ವಕೀಲೆ ರೇವತಿ ಆದಿನಾಥ್‌ ನರ್ದೆ ಅವರು ಹಾಜರಾಗಲಿದ್ದಾರೆ. ಅಂಗವಿಕಲರ ಹಕ್ಕುಗಳ ಕಾಯಿದೆ 2016ರ ಅಡಿ ರಾಜ್ಯ ನಿಯಮಗಳನ್ನು 2019ರ ಸೆಪ್ಟೆಂಬರ್‌ 5ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಕಾಯಿದೆಯ 13ನೇ ಅಧ್ಯಾಯದ ಪ್ರಕಾರ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಬೇಕಿದೆ. ಮುಂದಿನ ವಿಚಾರಣೆಯಲ್ಲಿ ಯಾವಾಗ ವಿಶೇಷ ನ್ಯಾಯಾಲಯಗಳನ್ನು ಸೃಷ್ಟಿಸಲಾಗುತ್ತದೆ ಎಂದು ಸರ್ಕಾರ ತಿಳಿಸಬೇಕು” ಎಂದು ಆದೇಶದಲ್ಲಿ ದಾಖಲಿಸಿತು. ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಲಾಯಿತು.

Related Stories

No stories found.
Kannada Bar & Bench
kannada.barandbench.com