ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ರಾಮನಗರದ ಬಿಡದಿ ಸಮೀಪ ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿರುವ 77 ಎಕರೆ ಭೂಮಿಗೆ ರೂ. 12.35 ಕೋಟಿ ಪಾವತಿಸಲು ಸಿದ್ಧವಿದ್ದು, ಅದನ್ನು ಕ್ರಮಬದ್ಧಗೊಳಿಸುವಂತೆ ಕೋರಿ ಪ್ರತಿಷ್ಠಿತ ಈಗಲ್ಟನ್ ಗಾಲ್ಫ್ ರೆಸಾರ್ಟ್ ಪ್ರವರ್ತಕ ಕಂಪೆನಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ. ಲಿ ಸಲ್ಲಿಸಿದ್ದ ಮನವಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಆಕ್ಷೇಪಾರ್ಹವಾದ ಸಚಿವ ಸಂಪುಟ ಉಪ ಸಮಿತಿಯ ಪ್ರಕ್ರಿಯೆ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಈಗಲ್ಟನ್ ಗಾಲ್ಫ್ ರೆಸಾರ್ಟ್ ಮನವಿಯನ್ನು ನ್ಯಾಯಮೂರ್ತಿ ಜಿ ನರೇಂದರ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ.
“ಈಗಲ್ಟನ್ ರೆಸಾರ್ಟ್ ತಲೆ ಎತ್ತಿರುವ ಪೈಕಿ 77 ಎಕರೆ 19 ಗುಂಟೆಯನ್ನು ಕಾನೂನು ಬಾಹಿರವಾಗಿ ಕಂಪೆನಿಯು ಅತಿಕ್ರಮಿಸಿದೆ. ಇದರ ಮಾರುಕಟ್ಟೆಯ ಬೆಲೆಯು ರೂ. 928.07 ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು ದಶಕಗಳ ಸುದೀರ್ಘ ವಿವಾದದ ಬಳಿಕ ರಾಜ್ಯ ಸರ್ಕಾರಕ್ಕೆ ಸದ್ಯದ ಮಾರುಕಟ್ಟೆ ಬೆಲೆ ಪಾವತಿಸಿದರೆ ಅತಿಕ್ರಮಿಸಿದ ಭೂಮಿಯನ್ನು ಕಂಪೆನಿ ಬಳಕೆ ಮಾಡಬಹುದು” ಎಂದು 2014ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
“ಸರ್ಕಾರದ ಭೂಮಿಯನ್ನು ಈಗಲ್ಟನ್ ರೆಸಾರ್ಟ್ ಅತಿಕ್ರಿಮಿಸಿದೆ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಸದ್ಯ ಸಲ್ಲಿಸಲಾಗಿರುವ ಮನವಿಯು ಅರ್ಜಿದಾರರು ತಮ್ಮ ಸಂಕುಚಿತ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವ ಪ್ರಕ್ರಿಯೆಯ ದುರುಪಯೋಗವಾಗಿದೆ. ಅಂದರೆ ಸಾರ್ವಜನಿಕ ಆಸ್ತಿಯನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡು ವಾಣಿಜ್ಯ ಬಳಕೆಯನ್ನು ಮುಂದುವರಿಸುವುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.
“ಅಂದಾಜು ಮಾರುಕಟ್ಟೆ ಬೆಲೆ ಮತ್ತು ಈಗಲ್ಟನ್ ರೆಸಾರ್ಟ್ ಉಲ್ಲೇಖಿಸಿದ ಬೆಲೆಯು ಮನವಿಯಲ್ಲಿನ ವಿಶಿಷ್ಟ ಮತ್ತು ಗಮನಾರ್ಹವಾದ ಅಂಶವಾಗಿದೆ” ಎಂದು ನ್ಯಾ. ಜಿ ನರೇಂದರ್ ಆದೇಶದಲ್ಲಿ ವಿವರಿಸಿದ್ದಾರೆ.
“ಪ್ರಾಮಾಣಿಕ ಅರ್ಜಿದಾರರು ಎನ್ನಿಸಿಕೊಳ್ಳಲು ಮತ್ತು ಕಾನೂನುಬಾಹಿರ ಅತಿಕ್ರಮಣಕ್ಕೆ ಘನತೆ ತಂದುಕೊಳ್ಳಲು ಈಗಲ್ಟನ್ ರೆಸಾರ್ಟ್ ಮನವಿ ಸಲ್ಲಿಸಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ರಾಮನಗರ ಜಿಲ್ಲಾಧಿಕಾರಿ ಸಲ್ಲಿಸಿರುವ ಐದು ವರದಿಗಳ ಬಗ್ಗೆ ಅರ್ಜಿದಾರರು ಕೋಲಾಹಲ ಸೃಷ್ಟಿಸಿದ್ದಾರೆ. ಸಂಪುಟ ಉಪ ಸಮಿತಿಯ ಮುಂದೆ ಐದು ರೀಮ್ ಕಾಗದ ಪತ್ರಗಳು ಹಾಗೂ ಈ ನ್ಯಾಯಾಲಯದ ಮುಂದೆ ಎರಡು ಸಂಪುಟಗಳ ದಾಖಲೆಗಳನ್ನು ಸಲ್ಲಿಸಿದ್ದರು. ಈ ದಾಖಲೆಗಳಲ್ಲಿ ಒಂದೇ ಒಂದು ಕಡೆಯೂ ಅಂದಾಜು ಬೆಲೆ ಮತ್ತು ಮಾರುಕಟ್ಟೆ ಬೆಲೆ ಉಲ್ಲೇಖಿಸಿಲ್ಲ. ಕಂಪೆನಿಯ ಪ್ರಕಾರ ತಾನು ಉಲ್ಲೇಖಿಸಿರುವ ಬೆಲೆಯೇ ಮಾರುಕಟ್ಟೆ ಬೆಲೆಯಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
“ಎರಡು ದಶಕಗಳಿಂದ ಕಂಪೆನಿಯು ಸರ್ಕಾರದ ಭೂಮಿಯನ್ನು ಕಾನೂನುಬಾಹಿರವಾಗಿ ಬಳಕೆ ಮಾಡಿದೆ. ಹೀಗಾಗಿ, ದಂಡ ಇತ್ಯಾದಿ ಪಾವತಿಸಲು ಅರ್ಹವಾಗಿದೆ. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಂಪೆನಿಯು 2011ರಿಂದ ಮಾರುಕಟ್ಟೆ ಬೆಲೆ ಅಂದಾಜಿಸಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
“ಕಂಪೆನಿಯು ಸ್ವಯಂಪ್ರೇರಿತವಾಗಿ ರೂ. 12.3 ಕೋಟಿ ಠೇವಣಿ ಇಟ್ಟಿದ್ದು, ಇದನ್ನು ಅತಿಕ್ರಮಿಸಿದ ಭೂಮಿಗೆ ನಿಗದಿಪಡಿಸಿದ ಬೆಲೆ ಎಂದು ಪರಿಗಣಿಸಲಾಗದು” ಎಂದು ನ್ಯಾಯಾಲಯವು ಹೇಳಿದೆ.
ಪ್ರಕರಣದ ಹಿನ್ನೆಲೆ: 1994ರಲ್ಲಿ ಆಂಧ್ರ ಪ್ರದೇಶ ಮೂಲದ ಉದ್ಯಮಿ ಮೇದ ಅಶೋಕ್ ಕುಮಾರ್ ಅವರು ಕಾನೂನುಬಾಹಿರವಾಗಿ ಈಗಲ್ಟನ್ ಗಾಲ್ಫ್ ರೆಸಾರ್ಟ್ ಸ್ಥಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಭೂಮಿಗೆ ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದ ರಾಮನಗರ ಜಿಲ್ಲಾಧಿಕಾರಿ ಅವರು ರೂ. 928 ಕೋಟಿ ಪಾವತಿಸುವಂತೆ ಆದೇಶ ಮಾಡಿದ್ದರು. ಇದನ್ನು ಪ್ರಶ್ನಿಸಿ ಅಶೋಕ್ ಕುಮಾರ್ ಅವರ ಪುತ್ರ ಹಾಗೂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಕಿರಣ್ ಕುಮಾರ್ ಮೇದಾ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
1994ರಲ್ಲಿ ರಾಮನಗರದಲ್ಲಿ ಪ್ರವಾಸೋದ್ಯಮದ ಭಾಗವಾಗಿ ಏಕಗವಾಕ್ಷಿ ಯೋಜನೆಯಡಿ (ಸಿಂಗಲ್ ವಿಂಡೊ ಏಜೆನ್ಸಿ) 400 ಎಕರೆ ಭೂಮಿ ಖರೀದಿಸಿದ್ದಾಗಿ ಈಗಲ್ಟನ್ ಹೇಳಿಕೊಂಡಿದೆ. ಇದರ ಜೊತೆಗೆ 16.26 ಎಕರೆ ಭೂಮಿಯನ್ನು ಈಗಲ್ಟನ್‌ಗೆ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಹಂಚಿಕೆ ಮಾಡಿದೆ. ಆದರೆ, ಈಗಲ್ಟನ್ ಭೂಮಿ ಖರೀದಿಸಿದ್ದರ ಜೊತೆಗೆ ಸರ್ಕಾರಿ ಭೂಮಿಯ ಹೆಚ್ಚಿನ ಭಾಗವನ್ನು ಕಂಪೆನಿ ಭೂಮಿ ಜೊತೆಗೆ ಸೇರಿಸಲಾಗಿದೆ.
ಎತ್ತಿನ ಚಕ್ಕಡಿ ಓಡಾಡಲು, ಹಳ್ಳ, ನಾಲೆ, ಜಲ ಮಾರ್ಗ, ರಸ್ತೆ, ಸಮುದಾಯದ ಭೂಮಿ ಇತ್ಯಾದಿಗಾಗಿ ಮೀಸಲಿಡಲಾಗಿದ್ದ 14.18 ಎಕರೆ ಭೂಮಿಯನ್ನು ಮಾರ್ಪಾಡು ಮಾಡಿ ಅತಿಕ್ರಮಿಸಲಾಗಿದ್ದು, ಅದನ್ನು ತೆರವು ಮಾಡುವಂತೆ 2008ರಲ್ಲಿ ಈಗಲ್ಟನ್‌ಗೆ ತಹಶೀಲ್ದಾರ್ ಅವರು ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ಕಂಪೆನಿಯು ಭೂ ನ್ಯಾಯಾಧಿಕರಣ ಮತ್ತು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಎರಡೂ ಕಡೆ ಈಗಲ್ಟನ್‌ಗೆ ಸೋಲಾಗಿತ್ತು. ಈ ಮಧ್ಯೆ, ಸರ್ಕಾರದ ಭೂಮಿ ಅತಿಕ್ರಮಿಸಲು ಈಗಲ್ಟನ್‌ಗೆ ನೆರವಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು.
ಗೋಮಾಳವನ್ನು ವಶಪಡಿಸಿಕೊಳ್ಳುವುದಲ್ಲದೇ ಅನಧಿಕೃತ ವ್ಯಕ್ತಿಗಳಿಂದ ಈಗಲ್ಟನ್ ಜಮೀನು ಖರೀದಿಸಿದೆ ಎಂಬುದನ್ನು ಹೈಕೋರ್ಟ್ ಅರಿತು ಕೊಂಡಿತ್ತು. ಸಿವಿಲ್ ದಾವೆಯ ವಿಚಾರಣೆಯ ವೇಳೆ ಅತಿಕ್ರಮಿಸಿರುವ ಭೂಮಿಯನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಇದಕ್ಕೂ ಮುನ್ನ ಸರ್ವೆ ನಡೆಸಿದ್ದ ಕಂದಾಯ ಇಲಾಖೆಯು ಈಗಲ್ಟನ್ ರೆಸಾರ್ಟ್ 132.26 ಎಕರೆ ಭೂಮಿ ಅತಿಕ್ರಮಿಸಿದೆ ಎಂದು ಹೇಳಿತ್ತು. 2014ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಹೊರಡಿಸುವುದಕ್ಕೂ ಮುನ್ನ 28.33 ಎಕರೆ ಭೂಮಿಯನ್ನು ವಾಪಸ್ ಮಾಡಲು ನಿರ್ಧರಿಸಿರುವುದಾಗಿ ಕಂಪೆನಿ ತಿಳಿಸಿತ್ತು. 77.19 ಎಕರೆ ಭೂಮಿಗೆ ಮಾರುಕಟ್ಟೆ ಬೆಲೆ ನಿಗದಿಪಡಿಸಲು ನ್ಯಾಯಾಲಯ ಆದೇಶಿಸಿತ್ತು. ಅಲ್ಲಿಂದಾಚೆಗೆ ಅತಿಕ್ರಮಿಸಿದ ಭೂಮಿಗೆ ಮಾರುಕಟ್ಟೆ ಬೆಲೆ ನಿಗದಿಪಡಿಸುವ ವಿವಾದ ಆರಂಭವಾಗಿತ್ತು.
ಈಗಲ್ಟನ್ ರೆಸಾರ್ಟ್ ಸಮೀಪದ ಪ್ರದೇಶಗಳಲ್ಲಿ ನಡೆಸಿರುವ ಖರೀದಿ ಪ್ರಕ್ರಿಯೆ ಆಧರಿಸಿ 2014ರಲ್ಲಿ ರೂ. 980.04 ಕೋಟಿಯನ್ನು ಕಂಪೆನಿ ಪಾವತಿಸಬೇಕು ಎಂದು ರಾಮನಗರ ಜಿಲ್ಲಾಧಿಕಾರಿ ಅಂದಾಜಿಸಿದ್ದರು. ಆದರೆ, 2011ರಲ್ಲಿ ಜಿಲ್ಲಾಧಿಕಾರಿ ಅವರು ರೂ. 7.49 ಕೋಟಿ ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದರು ಎಂದು ಕಂಪೆನಿ ವಾದಿಸಿತ್ತು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸರ್ಕಾರಿ ವಕೀಲ ಆರ್ ಶ್ರೀನಿವಾಸ್‌ಗೌಡ ವಾದಿಸಿದರು. ಈಗಲ್ಟನ್ ಗಾಲ್ಫ್ ರೆಸಾರ್ಟ್ ಅನ್ನು ಹಿರಿಯ ವಕೀಲ ಕೆ ಜಿ ರಾಘವನ್ ಮತ್ತು ವಕೀಲ ಬಿ ಆರ್ ನಿಶ್ಚಲ್ ದೇವ್ ಪ್ರತಿನಿಧಿಸಿದ್ದರು.