ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸೋಮವಾರ ಜಾಮೀನು ಮಂಜೂರಾಗಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಒಬ್ಬರಿಗೆ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ಇಬ್ಬರಿಗೆ ಜಾಮೀನು ದೊರೆತಿದೆ. ಇದರೊಂದಿಗೆ ಒಟ್ಟು 17 ಆರೋಪಿಗಳ ಪೈಕಿ ಕೊನೆಯ ಮೂವರು ಆರೋಪಿಗಳಿಗೆ ಒಂದೇ ದಿನ ಜಾಮೀನು ದೊರೆತಂತಾಗಿದೆ.
ಪ್ರಕರಣದಲ್ಲಿ 16ನೇ ಆರೋಪಿಯಾಗಿರುವ ಬೆಂಗಳೂರಿನ ಕೇಶವಮೂರ್ತಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ಮತ್ತು 17ನೇ ಆರೋಪಿ ನಿಖಿಲ್ ನಾಯಕ್‌ಗೆ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೈಶಂಕರ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಎರಡೂ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದಂತೆ ವಿಸ್ತೃತ ಆದೇಶಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯನ್ನು ತಾವೇ ಮಾಡಿರುವುದಾಗಿ ಮೊದಲಿಗೆ ಪೊಲೀಸರ ಮುಂದೆ ಜೂನ್ 10ರ ಸಂಜೆ 7 ಗಂಟೆಗೆ ಶರಣಾಗಿದ್ದ ನಾಲ್ವರು ತಂಡದ ಸದಸ್ಯರಲ್ಲಿ ಕೇಶವಮೂರ್ತಿ ಕೂಡ ಭಾಗಿಯಾಗಿರುವ ಆರೋಪವಿದೆ. ಆ ಮೂಲಕ ಕಾಮಾಕ್ಷಿ ಪಾಳ್ಯ ಪೊಲೀಸರನ್ನು ದಾರಿತಪ್ಪಿಸುವ, ಸಾಕ್ಷ್ಯವನ್ನು ಬಚ್ಚಿಡುವ ಆರೋಪ ಮಾಡಲಾಗಿದೆ. ನಾಲ್ಕನೇ ಆರೋಪಿ ರಾಘವೇಂದ್ರ, 15ನೇ ಆರೋಪಿ ಕಾರ್ತಿಕ್ ಮತ್ತು 17ನೇ ಆರೋಪಿ ನಿಖಿಲ್ ನಾಯಕ್ ಮೊದಲಿಗೆ ಪೊಲೀಸರ ಮುಂದೆ ಸ್ವಯಂಪ್ರೇರಿತವಾಗಿ ಶರಣಾಗಿದ್ದರು.
ಈ ನಾಲ್ವರು ಆರೋಪಿಗಳು ಭಿನ್ನ ಹೇಳಿಕೆ ನೀಡಿರುವುದರಿಂದ ಸಂಶಯಗೊಂಡು ಪೊಲೀಸರು ಮತ್ತಷ್ಟು ಪ್ರಕರಣವನ್ನು ಕೆದಕಿದಾಗ ದರ್ಶನ್ ಮತ್ತು ಇತರರ ಪಾತ್ರ ಬಹಿರಂಗಗೊಂಡಿತ್ತು.
ಕಾರ್ತಿಕ್ ಮತ್ತು ಕೇಶವಮೂರ್ತಿ ಪರವಾಗಿ ವಕೀಲ ರಂಗನಾಥ ರೆಡ್ಡಿ ವಾದಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ವಾದಿಸಿದ್ದರು.
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಮತ್ತು ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಕ್ರಮವಾಗಿ ಸೆಪ್ಟೆಂಬರ್ 25 ಮತ್ತು 27ಕ್ಕೆ ಮುಂದೂಡಿದೆ. ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಸತ್ರ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ 3ನೇ ಆರೋಪಿಯಾದ ಪುಟ್ಟಸ್ವಾಮಿ ಅಲಿಯಾಸ್ ಪವನ್, 4ನೇ ಆರೋಪಿ ಎನ್ ರಾಘವೇಂದ್ರ, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 11ನೇ ಆರೋಪಿ ಆರ್ ನಾಗರಾಜು ಮತ್ತು 12ನೇ ಆರೋಪಿ ಎಂ ಲಕ್ಷ್ಮಣ್ ಜಾಮೀನು ಕೋರಿದ್ದಾರೆ. ಇವರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ವಿಚಾರಣಾಧೀನ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ಅರ್ಜಿದಾರರನ್ನು ವಕೀಲರಾದ ರಾಮ್ ಸಿಂಗ್ ಕೆ, ಸೂರ್ಯ ಮುಕುಂದರಾಜ್ ಮತ್ತು ಲಕ್ಷ್ಮಿಕಾಂತ್ ಜಿ ಪ್ರತಿನಿಧಿಸಿದ್ದಾರೆ.