ಕಾರವಾರ ಶಾಸಕ ಆಸ್ನೋಟಿಕರ್‌ ಕೊಲೆ ಪ್ರಕರಣ: ಸಂಜಯ್ ಕಿಶನ್ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಆಸ್ನೋಟಿಕರ್ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆ ಮಾಡಿದ್ದರು.
High Court of Karnataka, Dharwad Bench
High Court of Karnataka, Dharwad Bench
Published on

ಕಾರವಾರ ಶಾಸಕರಾಗಿದ್ದ ವಸಂತ್ ಆಸ್ನೋಟಿಕರ್ ಶೂಟೌಟ್ ಪ್ರಕರಣದ ಆರೋಪಿ ಶಾರ್ಪ್‌ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೋಹಿತೆಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಎತ್ತಿಹಿಡಿದಿದೆ.

ಪ್ರಕರಣದ ಆರನೇ ಆರೋಪಿಯಾಗಿದ್ದ ಮುಂಬೈ ಪಶ್ಚಿಮದ ಅಂಧೇರಿಯ ಮೂಲದ ಸಂಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಘಟನೆ ಸಂಬಂಧ ಹಲವು ಪ್ರತ್ಯಕ್ಷ ಸಾಕ್ಷ್ಯಿಗಳಿದ್ದು, ಮೇಲ್ಮನವಿದಾರರ ಕೃತ್ಯವನ್ನು ಗುರುತಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯಕ್ಕೆ ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ. ಕೆಲ ಸಾಕ್ಷ್ಯಧಾರಗಳಲ್ಲಿ ವಿರೋಧಾಭಾಸವಿರಬಹುದು. ಆದರೆ, ಅದಕ್ಕೆಲ್ಲಾ ಖಚಿತ ಆಧಾರಗಳಿವೆ. ಪ್ರತ್ಯಕ್ಷ ಸಾಕ್ಷಿಗಳು ಆರೋಪಕ್ಕೆ ಪೂರಕವಾಗಿದ್ದಾಗ ಇತರೆ ಸಾಕ್ಷಿಗಳನ್ನು ನಂಬಬೇಕಾಗುತ್ತದೆ” ಎಂದು ತಿಳಿಸಿದೆ.

“ಸಾಕ್ಷಿದಾರರು ಪಾಟಿ ಸವಾಲಿನ ಸಂದರ್ಭದಲ್ಲಿ ನೀಡಿರುವ ಹೇಳಿಕೆ ನಂಬಲರ್ಹವಲ್ಲ ಎಂಬುದಕ್ಕೆ ಸಾಧ್ಯವೇ ಇಲ್ಲ. ಕಾನೂನಿನಲ್ಲಿ ಈ ಎಲ್ಲ ವಾಸ್ತವಿಕ ಅಂಶಗಳನ್ನು ಪರಿಶೀಲನೆ ನಡೆಸಿದಲ್ಲಿ ವಿಚಾರಣಾಧೀನ ನ್ಯಾಯಾಲಯದ ಆದೇಶ ಕಾನೂನುಬಾಹಿರ ಹಾಗೂ ದೋಷದಿಂದ ಕೂಡಿದೆ ಎಂದು ಸಾಬೀತುಪಡಿಸುವುದಕ್ಕೆ ಯಾವುದೇ ಆಧಾರಗಳು ಇಲ್ಲ” ಎಂದಿರುವ ನ್ಯಾಯಾಲಯ ಮೇಲ್ಮನವಿ ವಜಾ ಮಾಡಿದೆ.

ಮೇಲ್ಮನವಿಯಲ್ಲಿ ಅರ್ಜಿದಾರರು, ಘಟನೆ ನಡೆದ ದಿನದಂದು ಆರೋಪಿ ಕಾರವಾದಲ್ಲಿದ್ದರು ಎಂಬುದಾಗಿ ತನಿಖಾಧಿಕಾರಿಗಳು ತಪ್ಪಾಗಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹೊಸದಾಗಿ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿದ್ದಾರೆ. ಘಟನೆ ನಡೆದ ಎರಡು ವರ್ಷಗಳ ಬಳಿಕ ಸಾಕ್ಷ್ಯಗಳ ಪರೇಡ್ ನಡೆಸಿದ್ದಾರೆ. ಸಾಕ್ಷಿಗಳಿಗೆ ತರಬೇತಿ ನೀಡಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ವಾದಿಸಿದ್ದರು.

ಸರ್ಕಾರದ ಪರ ವಕೀಲರು, ಪುನಾ ಹೊಸದಾಗಿ ತನಿಖೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೂ, ಅದರಿಂದ ಯಾವುದೇ ದೋಷಗಳನ್ನು ಸರಿಪಡಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಆಸ್ನೋಟಿಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದರು. ಘಟನೆಯಲ್ಲಿ ಗಣಪತಿ ಉಲ್ವೇಕರ್ ಎಂಬುವರು ಗಾಯಗೊಂಡಿದ್ದರು.

ಪ್ರಕರಣದ ಮೊದಲ ಆರೋಪಿ ದಿಲೀಪ್ ಅರ್ಜಿನ್ ನಾಯ್ಕ್, ಇತರೆ ಆರೋಪಿಗಳಾದ ಆಂಟೋನಿ ಅಲಿಯಾಸ್ ಟೋನಿ ರೊಜಾರಿಯೋ ಮತ್ತು ಓಂ ಪ್ರಕಾಶ್ ಗಿರಿ ಅಲಿಯಾಸ್ ಪಕ್ಯಾ ಅಲಿಯಾಸ್ ಬಾಬು ಎಂಬುವರು ವಿಚಾರಣೆ ಹಂತದಲ್ಲಿಯೇ ಉತ್ತರ ಪ್ರದೇಶ ಹಾಗೂ ಮುಂಬೈನಲ್ಲಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು.  ಹೀಗಾಗಿ ಈ ಆರೋಪಿಗಳ ವಿರುದ್ಧದ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಯ ವಿರುದ್ಧ ಕೊಲೆ, ಕೊಲೆ ಯತ್ನ, ಪಿತೂರಿ, ಸಾಕ್ಷ್ಯ ನಾಶ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಸಂಜಯ್ ಮೋಹಿತೆಗೆ ಜೀವಾವಧಿ ಶಿಕ್ಷೆ ಮತ್ತು 68 ಸಾವಿರ ರೂಪಾಯಿ ದಂಡ ವಿಧಿಸಿತ್ತು.

Attachment
PDF
Sanjay Mohite Vs State of Karnataka.pdf
Preview
Kannada Bar & Bench
kannada.barandbench.com