
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಮಧ್ಯಂತರ ಆದೇಶದ ವಿರುದ್ಧ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿದ್ದ ಮೇಲ್ಮನವಿಗೆ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾದ ಪ್ರಸಂಗ ಮಂಗಳವಾರ ನಡೆದಿದೆ.
ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಹೇಶ್ ಜೋಶಿ ರಿಟ್ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠವು, “ನೀವು ಸಲ್ಲಿಸಿರುವ ಮೇಲ್ಮನವಿಗೆ ದಂಡ ಹಾಕಿಲ್ಲವಲ್ಲ ಎಂದು ಸಮಾಧಾನಪಡಿ” ಎಂದು ಎಚ್ಚರಿಸಿತು.
ನಡೆದಿದ್ದೇನು?: ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು ವಿಚಾರಣಾಧಿಕಾರಿ ನೇಮಕಕ್ಕೆ ಆಕ್ಷೇಪಿಸಿದ್ದ ಕಸಾಪ ಅಧ್ಯಕ್ಷರ ಮನವಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
ಕಸಾಪ ಅಧ್ಯಕ್ಷರಿಗೆ ತೊಂದರೆ ಕೊಡಬೇಕೆಂಬ ದೂರುಗಳ ಹಿನ್ನೆಲೆಯಲ್ಲಿ ವಿಚಾರಣಾ ಅಧಿಕಾರಿ ನೇಮಕ ಮಾಡಲಾಗಿದೆ ಎಂಬ ಮೇಲ್ಮನವಿದಾರರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ವಿಚಾರಣಾಧಿಕಾರಿಯ ನೇಮಕ ಕಾನೂನುರೀತ್ಯಾ ನಡೆದಿದೆ ʼಎಂದು ಸಮರ್ಥಿಸಿಕೊಂಡರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು. ಈ ವೇಳೆ ಜೋಶಿ ಪರ ವಕೀಲರು, ‘ಏಕಸದಸ್ಯ ನ್ಯಾಯಪೀಠದಲ್ಲಿರುವ ರಿಟ್ ಅರ್ಜಿಯನ್ನು ಆದಷ್ಟು ಶೀಘ್ರ ವಿಚಾರಣೆ ನಡೆಸಿ ವಿಲೇವಾರಿ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿದ್ದು ಪೀಠವನ್ನು ಕೆರಳಿಸಿತು.
ಆಗ ಪೀಠವು, "ಇದೊಂದು ಸಹಕಾರ ಸಂಘಗಳ ಅಡಿಯ ವ್ಯಾಜ್ಯ. ಅಧ್ಯಕ್ಷರ ವಿರುದ್ಧ ದೂರುಗಳು ಬಂದಾಗ ಅವರು ಯಾಕೆ ದೂರುದಾರರಿಗೆ ಅಥವಾ ಸದಸ್ಯರಿಗೆ ದಾಖಲೆ ಪ್ರಸ್ತುಪಡಿಸಿಲ್ಲ ವಾರ್ಷಿಕ ಮಹಾಸಭೆಯಲ್ಲೇ ಎಲ್ಲವನ್ನೂ ಸ್ಪಷ್ಟಪಡಿಸುವುದಾಗಿ ಅವರು ಹೇಳಿದ್ದೇಕೆ" ಎಂದು ಕಠಿಣವಾಗಿ ಪ್ರಶ್ನಿಸಿತು.
ಅಲ್ಲದೆ, "ನಿಮ್ಮ ಈ ಮೇಲ್ಮನವಿ ವಜಾ ಮಾಡಿ ದಂಡ ಹಾಕಿಲ್ಲವಲ್ಲಾ ಎಂದು ಸಮಾಧಾನಪಡಿ" ಎಂದು ಎಚ್ಚರಿಸಿತು
ಹಿನ್ನೆಲೆ: ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳನ್ನು ಆಧರಿಸಿ ವಿಚಾರಣೆ ನಡೆಸಲು; ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2ನೇ ವಲಯ ಬೆಂಗಳೂರು ನಗರ ಜಿಲ್ಲಾ ಇವರು ಸ್ವಪ್ರೇರಣೆಯಿಂದ ಆದೇಶವೊಂದನ್ನು ಹೊರಡಿಸಿ ವಿಚಾರಣಾ ಅಧಿಕಾರಿ ನೇಮಕ ಮಾಡಿದ್ದರು. ಈ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹೈಕೋರ್ಟ್ ಮೆಟ್ಟಿಲೇರಿದ್ದರು.