[ಬಿಕ್ಲು ಶಿವ ಕೊಲೆ] ಸಂಘಟಿತ ಅಪರಾಧ ಪ್ರಕರಣಗಳು ಬಾಕಿ ಇಲ್ಲದಿದ್ದರೂ ಕೋಕಾ ಅನ್ವಯ: ಬೈರತಿ ಪರ ಹೈಕೋರ್ಟ್‌ನಲ್ಲಿ ವಾದ

ಕೋಕಾ ಕಾಯಿದೆ ಸೆಕ್ಷನ್‌ 22(3)ರ ಅಡಿ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಲು ನಿರ್ಬಂಧವಿದೆ. ಹೀಗಾಗಿ, ಹೈಕೋರ್ಟ್‌ಗೆ ಬರಲಾಗಿದೆ ಎಂದು ಸಮರ್ಥಿಸಿದ ಹಿರಿಯ ವಕೀಲ ಸಂದೇಶ್‌ ಚೌಟ.
Minister Byrati Basavaraj and Karnataka HC
Minister Byrati Basavaraj and Karnataka HCFB
Published on

ಸಂಘಟಿತ ಅಪರಾದದ ಅಡಿ ಕೋಕಾ ಕಾಯಿದೆ ಅನ್ವಯಿಸಲು ಅಗತ್ಯವಾದ ಬಾಕಿ ಪ್ರಕರಣಗಳು ಇಲ್ಲದೆ ಹೋದರೂ ತಮ್ಮ ವಿರುದ್ಧ ಕೋಕಾ ಕಾಯಿದೆ ಅನ್ವಯಿಸಿರುವ ಆದೇಶವನ್ನು ವಜಾಗೊಳಿಸಬೇಕು ಎಂದು ಬೈರತಿ ಬಸವರಾಜು ಪರ ಹಿರಿಯ ವಕೀಲ ಸಂದೇಶ್‌ ಚೌಟ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಮುಂದೆ ವಾದಿಸಿದರು.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೋಕಾ ಕಾಯಿದೆ ಅನ್ವಯಿಸಿರುವುದನ್ನು ಪ್ರಶ್ನಿಸಿ ಮತ್ತು ಕೊಲೆ ಆರೋಪದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಹಾಗೂ ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕೆ ಆರ್‌ ಪುರಂ ಶಾಸಕ ಬೈರತಿ ಬಸವರಾಜು ಸೇರಿ ಇತರೆ ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅನ್ವಯಿಸಿರುವುದರಿಂದ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಲಾಗದು ಎಂದು ಹಿರಿಯ ವಕೀಲ ಸಂದೇಶ್‌ ಚೌಟ ಇದೇ ವೇಳೆ ನ್ಯಾಯಾಲಯಕ್ಕೆ ವಿವರಿಸಿದರು.

Justice S Sunil Dutt Yadav
Justice S Sunil Dutt Yadav

ಬೈರತಿ ಬಸವರಾಜು ಪ್ರತಿನಿಧಿಸಿದ್ದ ಚೌಟ ಅವರು “ಕೋಕಾ ಕಾಯಿದೆ ಸೆಕ್ಷನ್‌ 22(3)ರ ಅಡಿ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಲು ನಿರ್ಬಂಧವಿದೆ. ಹೀಗಾಗಿ, ಹೈಕೋರ್ಟ್‌ಗೆ ಬರಲಾಗಿದೆ. ಕೋಕಾ ಕಾಯಿದೆ ಅನ್ವಯಿಸಿರುವುದು ಸರಿಯೋ, ತಪ್ಪೋ ಎನ್ನುವ ಪ್ರಶ್ನೆಯೂ ಇದೆ. ರಿಟ್‌ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದರೂ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ರಕ್ಷಣೆ ಒದಗಿಸಬಹುದು. ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಅದು ಜಾರಿಯಲ್ಲಿರಲಿದೆ” ಎಂದರು.

“ತನಿಖೆಗೆ ಸಹಕರಿಸುತ್ತಿಲ್ಲ ಅಥವಾ ಪ್ರಾಸಿಕ್ಯೂಷನ್‌ಗೆ ಪೂರಕವಾಗಿ ಹೇಳಿಕೆ ನೀಡುತ್ತಿಲ್ಲ ಎಂದು ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಲಾಗದು. ಕೋಕಾ ಕಾಯಿದೆ ಅನ್ವಯಿಸಿರುವ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದರೆ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಬಹುದು” ಎಂದರು.

“ಕೋಕಾ ಅನ್ವಯಿಸಿರುವುದಕ್ಕೆ ಬಾಕಿ ಆರು ಎಫ್‌ಐಆರ್‌ಗಳಿವೆ ಎಂದು ಪ್ರಾಸಿಕ್ಯೂಷನ್‌ ಹೇಳಿದೆ. ಈ ಪೈಕಿ ಮೂರು ಆಸ್ತಿ ವಿವಾದಕ್ಕೆ ಸಂಬಂಧಿಸಿವೆ ಎಂದು ಪ್ರಾಸಿಕ್ಯೂಷನ್‌ ಹೇಳಿದೆ. ಆದರೆ, ಯಾವುದೇ ಎಫ್‌ಐಆರ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿಲ್ಲ. ಸಂಘಟಿತ ಅಪರಾಧ ಸಿಂಡಿಕೇಟ್‌ ಆರೋಪದ ಅಡಿ ಮೂರು ವರ್ಷ ಶಿಕ್ಷೆ ವಿಧಿಸಬಹುದಾದ ಎರಡು ಪ್ರಕರಣಗಳು ಬಾಕಿ ಇದ್ದಾಗ ಕೋಕಾ ಅನ್ವಯಿಸಬಹುದು. ಈ ಪ್ರಕರಣದಲ್ಲಿ ಒಂದೇ ಒಂದು ಪ್ರಕರಣ ಇರುವುದರಿಂದ ಕೋಕಾ ಅನ್ವಯಿಸಿರುವ ಆದೇಶ ವಜಾಗೊಳ್ಳಬೇಕು” ಎಂದರು.

ಇದಕ್ಕೂ ಮುನ್ನ, ಸಿಐಡಿ ಪ್ರತಿನಿಧಿಸಿದ್ದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಬೈರತಿ ಬಸವರಾಜು ಅವರು ಮ್ಯಾಜಿಸ್ಟ್ರೇಟ್‌ ಮುಂದೆ 9.9.2025ರ ಮಧ್ಯಾಹ್ನ 1 ಗಂಟೆಗೆ ಬಿಎನ್ಎಸ್‌ಎಸ್‌ 164 ಅಡಿ ದಾಖಲಿಸಿರುವ ಹೇಳಿಕೆಯನ್ನು ಪರಿಶೀಲಿಸಬಹುದು. ಬೈರತಿ ಬಸವರಾಜು ಅವರ ಉದ್ಯಮ ಪಾಲುದಾರರ ಹೇಳಿಕೆಯನ್ನು ದಾಖಲಿಸಲಾಗಿದೆ. ಇದೆಲ್ಲವನ್ನೂ ನ್ಯಾಯಾಲಯ ನೋಡಬಹುದು” ಎಂದರು.

“ಬೈರತಿ ಬಸವರಾಜು ಅವರು ಉತ್ತರ ಪ್ರದೇಶದಲ್ಲಿ ನಡೆದಿದ್ದ ಕುಂಭಮೇಳಕ್ಕೆ ತೆರಳಿದ್ದರು. ಅವರ ಜೊತೆ ಇತರೆ ಆರೋಪಿಗಳೂ ಹೋಗಿದ್ದರು. ಇದಕ್ಕೆ ಪೂರಕವಾದ ವಿಮಾನದ ಟಿಕೆಟ್‌ ಇವೆ. ಒಟ್ಟಿಗೆ ಜನ್ಮ ದಿನ ಆಚರಿಸಿರುವ ಚಿತ್ರಗಳಿವೆ. ಆದರೆ, ಬಸವರಾಜು ಅವರಾರೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಬಿಕ್ಲು ಶಿವ ಕೊಲೆ ಪ್ರಕರಣದ ಮೊದಲನೇ ಆರೋಪಿ ವಿದೇಶಕ್ಕೆ ಹೋಗಿದ್ದು, ಮೊಬೈಲ್‌ ನಾಶಪಡಿಸಿದ್ದಾರೆ. ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿ, ಆತನನ್ನು ಶ್ರೀಲಂಕಾದಲ್ಲಿ ಬಂಧಿಸಲಾಗಿದೆ. ಆತನ ಜೊತೆ ಹೋಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ” ಎಂದರು.

“ಬೈರತಿ ಬಸವರಾಜು ಅವರು ಇಡೀ ತನಿಖೆಯನ್ನು ಹಾದಿ ತಪ್ಪಿಸಿದ್ದಾರೆ. ಅವರನ್ನು ಕಸ್ಟಡಿಗೆ ಪಡೆಯದೇ ತನಿಖೆ ಮುಂದುವರಿಸಲಾಗದು. ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ಅಥವಾ ಹೈಕೋರ್ಟ್ ಪರಿಗಣಿಸಲು ಅವಕಾಶವಿಲ್ಲ. ಬೈರತಿ ಬಸವರಾಜು ಅವರು ತನಿಖೆಗೆ ಹಿಂದೆಯೂ ಸಹಕರಿಸಿಲ್ಲ. ಹೀಗಾಗಿ, ಬೈರತಿ ಬಸವರಾಜು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಎಫ್‌ಐಆರ್‌ ಪ್ರಶ್ನಿಸಿರುವ ಅರ್ಜಿಗಳನ್ನು ವಜಾಗೊಳಿಸಬೇಕು” ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

Kannada Bar & Bench
kannada.barandbench.com