“ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ. 75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ. 25ರಷ್ಟು ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲು ಸಾಧ್ಯವೇ? ಎರಡೂ ಕಡೆಯ ವಾದದಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಈ ಸೂತ್ರ ಕಾರ್ಯಸಾಧ್ಯವೇ?” ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಪ್ರಶ್ನಿಸಿತು.
ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್ ಈಶ್ವರ್ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
“ಅರ್ಜಿದಾರರು ಪಿಯುಸಿಯಲ್ಲಿ ಪಡೆದಿರುವ ಶೇ.50 ಅಂಕಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವುದರಿಂದ ಸರ್ಕಾರವು ಅವರ ಮನವಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಇದು 75:25 ಅನುಪಾತದಲ್ಲಿ ಸಾಧ್ಯವೇ?” ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು.
“ಅರ್ಜಿದಾರರು 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪಿಯುಸಿ ಪರೀಕ್ಷೆ ಬರೆದು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿನ ವರ್ಷ ಯಾವುದೇ ಪರೀಕ್ಷೆ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಸಮಾನವಾಗಿ ಇಡುವುದು ನ್ಯಾಯಸಮ್ಮತವಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ, ಉಭಯ ಪಕ್ಷಕಾರರ ನಡುವೆ ಸಮತೋಲನ ಸಾಧಿಸಲು ಶೇ. 75:25ರ ಅನುಪಾತದಲ್ಲಿ ಅಂಕಗಳನ್ನು ಪರಿಗಣಿಸಲು ಸಾಧ್ಯವೇ? ಪ್ರಸಕ್ತ ಇಬ್ಬರೂ ಜಯ ಸಾಧಿಸಲಾಗದು” ಎಂದು ಪೀಠವು ಹೇಳಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರನ್ನು ಕುರಿತು ಪೀಠವು “ಇದೊಂದು ಬಾರಿಗೆ ಶೇ.75:25 ಅನುಪಾತ ಮಾಡಿ. ಹಲವರ ದೃಷ್ಟಿಯಿಂದ ಇದು ನ್ಯಾಯಸಮ್ಮತವಲ್ಲ ಎಂಬುದು ಸತ್ಯ. ಆದರೆ, ಏನು ಮಾಡಲಾಗುತ್ತದೆ? ಯಾವುದೇ ರೀತಿಯಿಂದ ಮುಂದುವರಿದರೂ ಒಬ್ಬರು ಪಕ್ಷಕಾರರಿಗೆ ಸಮಸ್ಯೆಯಾಗುತ್ತದೆ. ನಾನು ಅರ್ಜಿ ವಜಾ ಮಾಡಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಸರ್ಕಾರವು ಶೇ.75:25 ಸೂತ್ರಕ್ಕೆ ಒಪ್ಪಿದರೆ ಇದೊಂದು ಮಾದರಿಯಾಗಲಿದ್ದು, ಸರ್ಕಾರದ ದೃಷ್ಟಿಯಿಂದ ಶೇ.90ರಷ್ಟು ದಾವೆಗಳು ಬಗೆಹರಿಯುತ್ತವೆ” ಎಂದರು.
ಈ ಸಂಬಂಧ ಸರ್ಕಾರದ ನಿರ್ಧಾರ ತಿಳಿದುಕೊಳ್ಳುವುದಾಗಿ ಎಎಜಿ ಹೇಳಿದರು. ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು ಪ್ರಕರಣ ಮುಂದೂಡಲು ಕೋರಿದ್ದರಿಂದ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಸೋಮವಾರ (ಆಗಸ್ಟ್ 22) ಮಧ್ಯಾಹ್ನಕ್ಕೆ ನ್ಯಾಯಾಲಯ ಮುಂದೂಡಿತು.