ಸಿಇಟಿ ಗೊಂದಲ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌; 75:25 ಅನುಪಾತ ತಿರಸ್ಕರಿಸಿದ ಕೆಇಎ

ಕೆಇಎ ನೀತಿ ತಾರತಮ್ಯದಿಂದ ಕೂಡಿದ್ದು ಕಾನೂನನುಬಾಹಿರವಾಗಿದೆ. ಇದು ಅರ್ಜಿದಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಾದ.
Karnataka HC and Karnataka Examinations Authority
Karnataka HC and Karnataka Examinations Authority

ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆಯದೆ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಬರೆದಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕಗಳನ್ನು ಪರಿಗಣಿಸಿ ರ‍್ಯಾಂಕ್ ಲಿಸ್ಟ್ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ತನ್ನ ಅಸಮ್ಮತಿ ಸೂಚಿಸಿದೆ.

2020-21ನೇ ಶೈಕ್ಷಣಿಕ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌ ಈಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್‌ ಹೊಸತಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಹಿಂದಿನ ವರ್ಷದ ವಿದ್ಯಾರ್ಥಿಗಳು, ಈ ಎರಡೂ ಕಡೆಯವರ ವಾದವನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅರ್ಜಿದಾರ ವಿದ್ಯಾರ್ಥಿಗಳ ಸಿಇಟಿಯಲ್ಲಿ ಪಡೆದಿರುವ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕ ಪರಿಗಣಿಸಿ ಪ್ರವೇಶ ಪಟ್ಟಿ ಪ್ರಕಟಿಸಲು ಸಾಧ್ಯವೇ ಎಂಬ ಬಗ್ಗೆ ತನ್ನ ನಿಲುವು ತಿಳಿಸುವಂತೆ ಕೆಇಎಗೆ ತಿಳಿಸಿತ್ತು. ಇಂದು ಅರ್ಜಿ ವಿಚಾರಣೆಗೆ ಬಂದಾಗ ಕೆಇಎ ಪರ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಇದು ಸಾಧ್ಯವಿಲ್ಲ ಎನ್ನುವ ಮಾಹಿತಿ ನೀಡಿದರು.

ಇತ್ತ ಅರ್ಜಿದಾರರ ವಕೀಲರು ವಾದ ಮಂಡಿಸಿ, ಕೆಇಎ ನೀತಿ ತಾರತಮ್ಯದಿಂದ ಕೂಡಿದ್ದು ಕಾನೂನನುಬಾಹಿರವಾಗಿದೆ. ಇದು ಅರ್ಜಿದಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ವಾದ-ಪ್ರತಿವಾದ ಆಲಿಸಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

Related Stories

No stories found.
Kannada Bar & Bench
kannada.barandbench.com