ಬಿಲ್ಡರ್‌ಗಳಿಂದ ಅಂತರ ಕಾಯ್ದುಕೊಳ್ಳಿ: ಬಿಎಂಸಿಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ

ಬಿಲ್ಡರ್‌ಗೆ ಮಾತ್ರ ಲಾಭದಾಯಕವೆಂದು ತೋರುತ್ತಿರುವುದರಿಂದ ಬಿಎಂಸಿ ಸಲ್ಲಿಸಿದ ಅರ್ಜಿ ವಿಚರಣೆಗೆ ಅರ್ಹವಲ್ಲ ಎಂದ ನ್ಯಾಯಾಲಯ.
Brihanmumbai Municipal Corporation (BMC)
Brihanmumbai Municipal Corporation (BMC)
Published on

ಬಿಲ್ಡರ್‌ಗಳಿಗೆ ಅನುಕೂಲಕರವಾಗುವಂತೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅರ್ಜಿಯೊಂದನ್ನು ಸಲ್ಲಿಸಿರುವುದನ್ನು ಗಮನಿಸಿದ ಬಾಂಬೆ ಹೈಕೋರ್ಟ್ ಬಿಲ್ಡರ್‌ಗಳ ಅಣತಿಯಂತೆ ಪಾಲಿಕೆ ವರ್ತಿಸುತ್ತಿರುವ ಬಗ್ಗೆ ಇತ್ತೀಚೆಗೆ ಎಚ್ಚರಿಕೆ ನೀಡಿದೆ.  

ಬಿಲ್ಡರ್‌ಗಳಿಂದ ದೂರ ಇರುವಂತೆ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಗೌರಿ ಗೋಡ್ಸೆ ಅವರಿದ್ದ ಪೀಠ ಪಾಲಿಕೆಗೆ ಕಿವಿಮಾತು ಹೇಳಿತು.

ಶಿಥಿಲಗೊಂಡಿರುವ ಕಟ್ಟಡದಿಂದ ಬಾಡಿಗೆದಾರರನ್ನು ಹೊರಹಾಕದಂತೆ ತಡೆದಿದ್ದ ಆದೇಶವೊಂದನ್ನು ರದ್ದುಗೊಳಿಸಲು ಬಿಎಂಸಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ಬಿಲ್ಡರ್‌ಗೆ ಮಾತ್ರ ಲಾಭದಾಯಕವೆಂದು ತೋರುತ್ತಿರುವುದರಿಂದ ಪಾಲಿಕೆ ಸಲ್ಲಿಸಿದ ಅರ್ಜಿ ವಿಚರಣೆಗೆ ಅರ್ಹವಲ್ಲ ಎಂದು ನ್ಯಾಯಾಲಯ ತಿಳಿಸಿತು.

ಕಟ್ಟಡದಲ್ಲಿ ವಾಸ ಇರುವವರಿಗೆ ಶಾಶ್ವತ ಪರ್ಯಾಯ ವಸತಿ ಕಲ್ಪಿಸದೆ ಇನ್ನೊಬ್ಬರು ಆ ಆಸ್ತಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದರಿಂದ ಬಿಎಂಸಿಯ ಈ ಅರ್ಜಿ ಡೆವಲಪರ್‌ನ ಅಣತಿಯಂತೆ ಇದೆ ಎಂಬ ಭಾವನೆಯಿಂದ ತಪ್ಪಿಸಿಕೊಳ್ಳಲಾಗದು. ಅರ್ಜಿಯನ್ನು ಪುರಸ್ಕರಿಸಿದರೆ ಬಾಡಿಗೆದಾರರನ್ನು ಬೀದಿಗೆ ತಳ್ಳಿ ತಾತ್ಕಾಲಿಕ ವಸತಿಯನ್ನು ನೆಲಸಮಗೊಳಿಸಿ ಡೆವಲಪರ್‌/ಮಾಲೀಕರು ಖಾಲಿ ನಿವೇಶನವನ್ನು ತಮ್ಮದಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

"ಬಿಎಂಸಿಯ ಅರ್ಜಿಗೆ ಯಾವುದೇ ರೀತಿಯ ಅರ್ಹತೆ ಇಲ್ಲ, ಹೇಳಬೇಕೆಂದರೆ ಅದು ಇನ್ನೂ ಕಳಪೆಯಾದದ್ದಾಗಿದೆ ಎನ್ನುವುದು ನಮ್ಮ ದೃಢ ಅಭಿಪ್ರಾಯ.  ಡೆವಲಪರ್/ಬಿಲ್ಡರ್‌ ಹಾಗೂ ತನ್ನ ನಡುವೆ ಬಿಎಂಸಿ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂಬುದನ್ನು ನಾವು ಗಮನಕ್ಕೆ ತಂದಿದ್ದೇವೆ”ಎಂಬುದಾಗಿ ನ್ಯಾಯಾಲಯವು ತನ್ನ 8 ಪುಟಗಳ ಆದೇಶದಲ್ಲಿ ದಾಖಲಿಸಿದೆ.

Kannada Bar & Bench
kannada.barandbench.com