ಕೇರಳದ ಸಾಲ ಪಡೆಯುವ ಸಾಮರ್ಥ್ಯಕ್ಕೆ ಕೇಂದ್ರದ ಕಡಿವಾಣ: ಸಾಂವಿಧಾನಿಕ ಪೀಠಕ್ಕೆ ಪ್ರಕರಣ; ಇಲ್ಲ ಮಧ್ಯಂತರ ಪರಿಹಾರ

ಅನುಕೂಲತೆಯ ಸಮತೋಲನವು ಕೇಂದ್ರ ಸರ್ಕಾರದ ಪರವಾಗಿದೆ ಎಂದ ನ್ಯಾಯಾಲಯ ಕೇರಳಕ್ಕೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.
ಸುಪ್ರೀಂ ಕೋರ್ಟ್ ಮತ್ತು ಕೇರಳ  ಭೂಪಟ
ಸುಪ್ರೀಂ ಕೋರ್ಟ್ ಮತ್ತು ಕೇರಳ ಭೂಪಟ

ತನ್ನ ಸಾಲ ಪಡೆಯುವ ಮತ್ತು ನಿಯಂತ್ರಿಸುವ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಈ ಸಂಬಂಧ ಸಾಂವಿಧಾನಿಕ ಪೀಠ ಪರಿಗಣಿಸಬೇಕಿರುವ ಆರು ಕಾನೂನು ಪ್ರಶ್ನೆಗಳನ್ನು ತಾನು ರೂಪಿಸಿರುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.

ಸಾಂವಿಧಾನಿಕ ವ್ಯಾಖ್ಯಾನವನ್ನು ಹೊರತುಪಡಿಸಿ ಆರು ಪ್ರಶ್ನೆಗಳನ್ನು ರೂಪಿಸಿದ್ದೇವೆ. ಈ ಪ್ರಶ್ನೆಗಳು ಸಂವಿಧಾನದ 145ನೇ ವಿಧಿಯಡಿ ಬರುತ್ತವೆಯಾದ್ದರಿಂದ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಎದುರು ಇಡುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಆದರೆ ಅನುಕೂಲತೆಯ ಸಮತೋಲನವು ಕೇಂದ್ರ ಸರ್ಕಾರದ ಪರವಾಗಿದೆ ಎಂದ ನ್ಯಾಯಾಲಯ ಕೇರಳಕ್ಕೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.

"ಮಧ್ಯಂತರ ಪರಿಹಾರದ ವಿಚಾರವಾಗಿ, ಅತಿಯಾದ ಸಾಲವಿದ್ದಾಗ ಮುಂದಿನ ವರ್ಷಗಳಲ್ಲಿ ಕಡಿತವಾಗಬಹುದು ಎಂಬ ಕೇಂದ್ರದ ವಾದವನ್ನು ಒಪ್ಪಲು ಒಲವು ತೋರುತ್ತೇವೆ. ಈ ಸಂದರ್ಭದಲ್ಲಿ ಅನುಕೂಲದ ಸಮತೋಲನ ಎಂಬುದು ಒಕ್ಕೂಟದ ಪರವಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕೇಂದ್ರ ಸರ್ಕಾರ ಕೇರಳಕ್ಕೆ ಈಗಾಗಲೇ 13,068 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

 ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್

ಸಾಲ ಪಡೆಯುವ ಮತ್ತು ತನ್ನ ಹಣಕಾಸು ನಿಯಂತ್ರಿಸುವ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯ ಮೇರೆಗೆ ಈ ತೀರ್ಪು ಬಂದಿದೆ.

ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಮೊಕದ್ದಮೆಯಲ್ಲಿ, ತನ್ನ ಸಾಲಕ್ಕೆ ಸಂಬಂಧಿಸಿದಂತೆ ಕೆಲ ಮಿತಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರ ವೇತನ ಸೇರಿದಂತೆ ಬಾಕಿ ಮೊತ್ತ ಪಾವತಿಸಲು ವಿಳಂಬ ಉಂಟು ಮಾಡುತ್ತಿದೆ ಎಂದು ಕೇರಳ ಸರ್ಕಾರ ಆರೋಪಿಸಿತ್ತು.

ಪ್ರತಿಯಾಗಿ ಕೇಂದ್ರ ಸರ್ಕಾರ, ʼಬಜೆಟ್ ಹೊರತಾದ ಸಾಲ ಮತ್ತು ರಾಜಿ ಮಾಡಿಕೊಂಡ ಹಣಕಾಸಿನ ವ್ಯವಸ್ಥೆಯಿಂದಾಗಿ ಕೇರಳದ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ ಎಂದು ವಾದಿಸಿತ್ತು.

ಕೇರಳವನ್ನು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಕಠಿಣ ಷರತ್ತುಗಳಿಗೆ ಒಳಪಡಿಸಿ ಒಂದು ಬಾರಿಯ ಪ್ಯಾಕೇಜ್ ನೀಡುವಂತೆ ನ್ಯಾಯಪೀಠ ಮಾರ್ಚ್ 12ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ವಿಚಾರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಅದು ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿಗೆ ಸೂಚಿಸಿತ್ತು.

ಹೆಚ್ಚುವರಿ ಸಾಲವಾಗಿ 5,000 ಕೋಟಿ ರೂಪಾಯಿ ನೀಡಲು ಕೇಂದ್ರವು ಒಪ್ಪಿಕೊಂಡಿತ್ತು ಆದರೆ ಈ ಮೊತ್ತ ಸಾಕಾಗುವುದಿಲ್ಲ ಕನಿಷ್ಠ ರೂ 10,000 ಕೋಟಿ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು,

ಆದ್ದರಿಂದ, ನ್ಯಾಯಾಲಯ ಮಧ್ಯಂತರ ಪರಿಹಾರಕ್ಕಾಗಿ ತನ್ನ ಮನವಿ ಆಲಿಸಿ ಆ ಬಗ್ಗೆ ಆದೇಶ ಹೊರಡಿಸಬೇಕು ಎಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com