ಮದುವೆ ಊಟದಿಂದ ಅತಿಸಾರ: ಗ್ರಾಹಕರಿಗೆ ₹ 40,000 ಪಾವತಿಸಲು ಕೇಟರಿಂಗ್ ಸಂಸ್ಥೆಗೆ ಕೇರಳ ಗ್ರಾಹಕ ನ್ಯಾಯಾಲಯದ ಆದೇಶ

ಮದುವೆಯ ಆರತಕ್ಷತೆ ಸಂದರ್ಭದಲ್ಲಿ ಕಲುಷಿತ ಅಡುಗೆ ಸೇವಿಸಿ ತೊಂದರೆ ಅನುಭವಿಸಿದ್ದಾಗಿ ಸಿವಿಲ್ ಅಬಕಾರಿ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದರು.
ಗ್ರಾಹಕ ರಕ್ಷಣೆ
ಗ್ರಾಹಕ ರಕ್ಷಣೆ
Published on

ಆರತಕ್ಷತೆ ಸಮಾರಂಭವೊಂದರಲ್ಲಿ ಆಹಾರ ಸೇವಿಸಿದ ಪರಿಣಾಮ ಅತಿಸಾರ ಮತ್ತು ಉದರ ಸಮಸ್ಯೆಗೆ ತುತ್ತಾದ ಗ್ರಾಹಕರಿಗೆ ₹ 40,000 ಪಾವತಿಸುವಂತೆ ಕೇಟರಿಂಗ್‌ ಘಟಕವೊಂದಕ್ಕೆ ಕೇರಳದ ಎರ್ನಾಕುಲಂನ ಜಿಲ್ಲಾ ಗ್ರಾಹಕ ನ್ಯಾಯಾಲಯ ಈಚೆಗೆ ನಿರ್ದೇಶನ ನೀಡಿದೆ.

ಕೇಟರಿಂಗ್‌ ಘಟಕದಲ್ಲಿ ಗಣನೀಯ ಸೇವಾ ನ್ಯೂನತೆ ಕಂಡುಬಂದಿದ್ದು ಅದು ಅನ್ಯಾಯದ ವ್ಯಾಪಾರಾಭ್ಯಾಸಗಳಲ್ಲಿ ತೊಡಗಿದೆ ಎಂದು ತೀರ್ಮಾನಿಸಿದ ಎರ್ನಾಕುಲಂನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಡಿ ಬಿ ಬಿನು, ಸದಸ್ಯರಾದ ವಿ ರಾಮಚಂದ್ರನ್, ಶ್ರೀವಿದ್ಯಾ ಟಿ ಎನ್ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿತು.

ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಸೇಂಟ್ ಮೇರಿಸ್ ಕೇಟರಿಂಗ್‌ ಒದಗಿಸಿದ ಕಲುಷಿತ ಆಹಾರ ಸೇವಿಸಿ ತಾವು ತೊಂದರೆ ಅನುಭವಿಸಿದ್ದಾಗಿ ಸಿವಿಲ್‌ ಅಬಕಾರಿ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದರು. ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೆ ಆಸ್ಪತ್ರೆಗೆ ದಾಖಲಾದ ತಮ್ಮ ವೈದ್ಯಕೀಯ ಖರ್ಚು ₹11,845 ಆಗಿದ್ದು ಆಹಾರ ಸಿದ್ಧಪಡಿಸುವ ಹೊಣೆ ಹೊತ್ತಿದ್ದ ಕೇಟರಿಂಗ್‌ ಸಂಸ್ಥೆ ತಮಗೆ ₹ 50,000 ಪರಿಹಾರ ನೀಡಬೇಕೆಂದು ಅವರು ಕೋರಿದ್ದರು.

ಬಾಣಸಿಗರು ವಿಚಾರಣೆಗೆ ಹಾಜರಾಗದಿರುವುದನ್ನು ಗಮನಿಸಿದ ಪೀಠ ಇದು ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಂತೆ ಎಂದು ತೀರ್ಮಾನಿಸಿ ದೂರುದಾರರ ಪರವಾಗಿ ತೀರ್ಪು ನೀಡಿತು.

ಕ್ಯಾಟರಿಂಗ್ ಘಟಕದ ನಿರ್ಲಕ್ಷ್ಯದಿಂದಾಗಿ, ದೂರುದಾರರು ಗಂಬೀರ ಅನನುಕೂಲತೆ, ಮಾನಸಿಕ ತೊಂದರೆ, ಕಷ್ಟ ಹಾಗೂ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಆಯೋಗ ತೀರ್ಪಿನಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ದೂರುದಾರರಿಗೆ 30,000 ರೂ.ಗಳ ಪರಿಹಾರ ಮತ್ತು ದಾವೆ ವೆಚ್ಚದ ರೂಪದಲ್ಲಿ10,000 ರೂ. ನೀಡುವಂತೆ ಬಾಣಸಿಗರಿಗೆ ಪೀಠ ಆದೇಶಿಸಿತು,

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
[Umesh V v. Vijayan George & Anr.].pdf
Preview
Kannada Bar & Bench
kannada.barandbench.com