ಪೋಕ್ಸೋ ಪ್ರಕರಣ: ಸ್ವತಃ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನಟಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ನ್ಯಾಯಾಲಯ

ನಟಿ ವಿರುದ್ಧ ಆಕೆಯ ಅಪ್ರಾಪ್ತ ವಯಸ್ಕ ಸೋದರಸಂಬಂಧಿ ದೂರು ದಾಖಲಿಸಿದ್ದರು. ಆದರೆ ಪ್ರಮುಖ ನಟರು ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಇದೇ ನಟಿ ಕೆಲ ದಿನಗಳ ಹಿಂದೆ ಆರೋಪಿಸಿದ್ದರು.
POCSO Act
POCSO Act
Published on

ತನ್ನ ಅಪ್ರಾಪ್ತ ವಯಸ್ಕ ಸೋದರಸಂಬಂಧಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ  ಪೋಕ್ಸೊ ಕಾಯಿದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ನಟಿಯೊಬ್ಬರಿಗೆ ಕೇರಳ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ಎಕ್ಸ್‌ಎಕ್ಸ್‌ಎಕ್ಸ್‌ ಮತ್ತು  ಸಾರ್ವಜನಿಕ ಮಾಹಿತಿ ಅಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ ನಡುವಣ ಪ್ರಕರಣ].

ಪ್ರಮುಖ ನಟರು ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಇದೇ ನಟಿ ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ನಿಂದನೆ ಮತ್ತು ಕಿರುಕುಳ ಕುರಿತಂತೆ ನ್ಯಾ. ಕೆ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ , ನಟ ಮುಕೇಶ್ , ಮಣಿಯನ್ಪಿಳ್ಳ ರಾಜು , ಇಡವೇಲ ಬಾಬು ಹಾಗೂ ಜಯಸೂರ್ಯ ಸೇರಿದಂತೆ ನಟರು ಮತ್ತು ರಾಜಕಾರಣಿಗಳ ವಿರುದ್ಧ ಈ ನಟಿ  ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

Also Read
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಮಾನತೆ: ಇಲ್ಲಿವೆ ನ್ಯಾ. ಹೇಮಾ ಸಮಿತಿ ವರದಿಯ ಪ್ರಮುಖ ಅಂಶಗಳು

ನಂತರ ಅಪ್ರಾಪ್ತ ವಯಸ್ಕ ಸೋದರ ಸಂಬಂಧಿ ನಟಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಟಿ ನಿರೀಕ್ಷಣಾ ಜಾಮೀನು ಕೋರಿ ಕಾಸರಗೋಡು ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅರ್ಜಿಯಲ್ಲಿ ತಾಂತ್ರಿಕ ನ್ಯೂನತೆಗಳು ಇರುವ ಹಿನ್ನೆಲೆಯಲ್ಲಿ ಸೆಷನ್ಸ್‌ ನ್ಯಾಯಾಲಯ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ.

ಪ್ರತಿವಾದಿಯನ್ನು ಕಾಸರಗೋಡಿನ ಅಜ್ಞಾತ ಪೊಲೀಸ್ ಠಾಣಾಧಿಕಾರಿ ಎಂದು ಹೆಸರಿಸಿ ನಟಿ ಸೆಪ್ಟೆಂಬರ್ 25 ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ   ಮೊದಲು ಸೆಪ್ಟೆಂಬರ್ 30 ರಂದು ವಿಷಯವನ್ನು ಕೈಗೆತ್ತಿಕೊಂಡಿತು ಮತ್ತು ಅರ್ಜಿಯಲ್ಲಿ ಅಗತ್ಯ ವಿವರಗಳ ಕೊರತೆಯನ್ನು ಗಮನಿಸಿತು.

Also Read
ನ್ಯಾ. ಹೇಮಾ ಸಮಿತಿ ವರದಿ ಕುರಿತು ರಾಜ್ಯ ಸರ್ಕಾರದ ನಿಷ್ಕ್ರಿಯತೆ ದಿಗ್ಭ್ರಮೆ ಮೂಡಿಸಿದೆ: ಕೇರಳ ಹೈಕೋರ್ಟ್ ಕಿಡಿ

ಈ ಸಮಸ್ಯೆಗಳನ್ನು ಪರಿಹರಿಸಲು ಆಕೆಗೆ ಸಮಯಾವಕಾಶ ನೀಡಿದ್ದರೂ, ಅದು ಪರಿಹಾರವಾಗದೆ ಉಳಿದಿದ್ದರಿಂದ ಆಕೆಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಈ ಅರ್ಜಿ ನಟಿಯ ಭಾರೀ ಕಾನೂನು ಹೋರಾಟದ ಭಾಗವಾಗಿದೆ.  ವರದಿಗಳ ಪ್ರಕಾರ ಕೇರಳದಾದ್ಯಂತ 14 ಸೆಷನ್ಸ್‌ ನ್ಯಾಯಾಲಯಗಳಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಆಕೆ ಸಲ್ಲಿಸಿದ್ದು ಪರಿಹಾರ ಕೋರಿ  ಕೇರಳ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಕೇರಳ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಲಯಾಳಂ ಚಿತ್ರರಂಗದ ಪ್ರಮುಖರ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ತನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ದೂರಿದ್ದರು.

Kannada Bar & Bench
kannada.barandbench.com