

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತ್ತಿಲ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ನ್ಯಾಯಾಲಯ ಗುರುವಾರ ನಿರಾಕರಿಸಿದೆ [ರಾಹುಲ್ ಬಿಆರ್ @ರಾಹುಲ್ ಮಮ್‌ಕೂಟತಿಲ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತಿರುವನಂತಪುರಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ನಜೀರಾ ಎಸ್ ಅವರು ಇಂದು ಮಮ್‌ಕೂಟತ್ತಿಲ್ ಅವರ ಜಾಮೀನು ಅರ್ಜಿ ವಜಾಗೊಳಿಸಿದರು. ನೆಮೊಮ್ ಪೊಲೀಸರು ಮಮ್‌ಕೂಟತ್ತಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಶಾಸಕರು ಮತ್ತು ದೂರುದಾರರು ಇಬ್ಬರೂ ಪ್ರಕರಣವನ್ನು ಗೌಪ್ಯವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಗೌಪ್ಯ ವಿಚಾರಣೆ ನಡೆಸಿತು.
ವಿವಿಧ ಮಹಿಳೆಯರು ಶಾಸಕ ಮಮ್‌ಕೂಟತ್ತಿಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಶಾಸಕರಾಗಿರುವ ಅವರನ್ನು ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದರು.
ನವೆಂಬರ್ 27 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ಮಮ್‌ಕೂಟತ್ತಿಲ್ ಅವರ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಮೂಲಕ ಗರ್ಭಧಾರಣೆಗೆ ಕಾರಣವಾದ ಮತ್ತು ಬಲವಂತದ ಗರ್ಭಪಾತಕ್ಕೆ ಕಾರಣವಾದ ಆರೋಪ ಹೊರಿಸಲಾಗಿತ್ತು,
ತಮ್ಮ ಅತ್ಯಂತ ಸಲುಗೆಯ ಕ್ಷಣಗಳನ್ನು ಚಿತ್ರೀಕರಿಸಿ ಮಮ್‌ಕೂಟತ್ತಿಲ್ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಹೇಳಿದ್ದರು. ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಗೌಪ್ಯತೆಯ ಉಲ್ಲಂಘನೆಗಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಇ ಅಡಿಯಲ್ಲಿಯೂ ಅವರ ವಿರುದ್ಧ ಆರೋಪ ಮಾಡಲಾಗಿದೆ.
ನಿರೀಕ್ಷಣಾ ಜಾಮೀನು ಕೋರಿದ್ದ ಮಮ್‌ಕೂಟತ್ತಿಲ್ ತಮ್ಮ ವಿರುದ್ಧದ ಆರೋಪ ಸುಳ್ಳು, ರಾಜಕೀಯ ಪ್ರೇರಿತ ಹಾಗೂ ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ಎಂದಿದ್ದರು. ವಿರೋಧ ಪಕ್ಷದ ಶಾಸಕರಾಗುವ ಮುನ್ನ ತಮ್ಮ ವಿರುದ್ಧ ಯಾವುದೇ ದೂರು ಕೇಳಿ ಬಂದಿರಲಿಲ್ಲ. ದೂರುದಾರೆ ಬಿಜೆಪಿ ಕಾರ್ಯಕರ್ತನ ಪತ್ನಿ ಎಂದಿದ್ದರು.
ಈ ಮಧ್ಯೆ, ಮತ್ತೊಬ್ಬ ಅನಿವಾಸಿ ಭಾರತೀಯ ಮಹಿಳೆ ಕೂಡ ಮಮ್‌ಕೂಟತ್ತಿಲ್ ವಿರುದ್ಧ ಆರೋಪ ಮಾಡಿದ್ದು ಮದುವೆಯ ವಿಷಯ ಮಾತನಾಡುವುದಾಗಿ ತಿಳಿಸಿ ರೆಸಾರ್ಟ್‌ನಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ದೂರು ನೀಡಿದ್ದರು.