ಸಿಪಿಎಂ ನಾಯಕನ ಪತ್ನಿಯ ಅವಹೇಳನ: ₹10 ಲಕ್ಷ ಪರಿಹಾರ ನೀಡುವಂತೆ ʼಮಲಯಾಳ ಮನೋರಮಾʼಗೆ ಕೇರಳ ಹೈಕೋರ್ಟ್ ಆದೇಶ

ಜಯರಾಜನ್‌ ಅವರ ಪತ್ನಿ ಕೋವಿಡ್‌ ಕ್ವಾರಂಟೈನ್‌ ಉಲ್ಲಂಘಿಸಿ ಬ್ಯಾಂಕ್‌ ಲಾಕರ್‌ ತೆರೆದಿದ್ದರು. ತಮ್ಮ ಮಗ ಹಾಗೂ ಸ್ವಪ್ನಾ ಸುರೇಶ್‌ ನಡುವೆ ಇದ್ದ ಸಂಬಂಧದ ಹಿನ್ನೆಲೆಯಲ್ಲಿ ಅವರು ಹೀಗೆ ಮಾಡಿದ್ದರು ಎಂದು ಪತ್ರಿಕಾ ವರದಿ ಆರೋಪಿಸಿತ್ತು.
ಇ ಪಿ ಜಯರಾಜನ್, ಮಲಯಾಳ ಮನೋರಮಾ ಸುದ್ದಿ ಪತ್ರಿಕೆ
ಇ ಪಿ ಜಯರಾಜನ್, ಮಲಯಾಳ ಮನೋರಮಾ ಸುದ್ದಿ ಪತ್ರಿಕೆಇ ಪಿ ಜಯರಾಜನ್ (ಫೇಸ್‌ಬುಕ್‌)

ಸಿಪಿಎಂ ನಾಯಕ ಇ ಪಿ ಜಯರಾಜನ್ ಅವರ ಪತ್ನಿ ಪಿ ಕೆ ಇಂದಿರಾ ಅವರು ʼಮಲಯಾಳ ಮನೋರಮಾʼ ಪತ್ರಿಕೆಯ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪತ್ರಿಕೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಕೇರಳದ ನ್ಯಾಯಾಲಯವೊಂದು ಇತ್ತೀಚೆಗೆ ಆದೇಶಿಸಿದೆ.

ಜಯರಾಜನ್‌ ಅವರ ಪತ್ನಿ ಕೋವಿಡ್‌ ಕ್ವಾರಂಟೈನ್‌ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಿ ಬ್ಯಾಂಕ್‌ ಲಾಕರ್‌ ತೆರೆದಿದ್ದರು. ತಮ್ಮ ಮಗ ಹಾಗೂ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಪ್ನಾ ಸುರೇಶ್‌ ನಡುವೆ ಇದ್ದ ಒಡನಾಟದ ಹಿನ್ನೆಲೆಯಲ್ಲಿ ಆಕೆ ಹೀಗೆ ಮಾಡಿದ್ದರು ಎಂದು ಪತ್ರಿಕಾ ವರದಿ ಆರೋಪಿದ್ದನ್ನು ಪ್ರಶ್ನಿಸಿ ಇಂದಿರಾ ಮಾನಷ್ಟ ಮೊಕದ್ದಮೆ ಹೂಡಿದ್ದರು.

ಮಾನಹಾನಿಗೆ ಪರಿಹಾರ ನೀಡುವ ಹೊಣೆ ಪತ್ರಿಕೆಯದ್ದು ಎಂದು ಕಣ್ಣೂರಿನ ನ್ಯಾಯಾಧೀಶ ಕರುಣಾಕರನ್ ಬಿ ತೀರ್ಪು ನೀಡಿದ್ದಾರೆ.

ವರದಿಯಿಂದ ಅರ್ಜಿದಾರರಿಗೆ ಮಾನಹಾನಿಯಾಗಿದೆ. ತಮ್ಮ ವರದಿ ಸತ್ಯ ಮತ್ತು ಸದ್ಭಾವನೆಯಿಂದ ಕೂಡಿತ್ತು ಎಂದು ಸಾಬೀತುಪಡಿಸಲು ಮಲಯಾಳ ಮನೋರಮಾದ ಉದ್ಯೋಗಿಗಳು ದಯನೀಯವಾಗಿ ವಿಫಲರಾಗಿದ್ದಾರೆ. ಒಬ್ಬರ ವರ್ಚಸ್ಸನ್ನು ಅದರಲ್ಲಿಯೂ ಭ್ರಷ್ಟಾಚಾರ, ಚಿನ್ನದ ಹಗರಣ ಇತ್ಯಾದಿಗಳ ಕುರಿತು ಆಪಾದನೆ ಮಾಡುವಾಗ ವ್ಯಕ್ತಿತ್ವ ಹಾಳುಗೆಡವುವುದು ಗಂಭೀರ ವಿಚಾರವಾಗಿದೆ. ಪ್ರಕಟಣೆಗೆ ಮುನ್ನ ಸೂಕ್ತ ಕಾಳಜಿ ಮತ್ತು ಎಚ್ಚರ ವಹಿಸದಿರುವುದರಿಂದ ಜನರೆದುರು ಅರ್ಜಿದಾರರ ವ್ಯಕ್ತಿತ್ವಕ್ಕೆ ಕುಂದುಂಟಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮನೋರಮಾ ಪತ್ರಿಕೆಯ ಪ್ರಕಾಶಕರು, ಸಂಪಾದಕೀಯ ನಿರ್ದೇಶಕರು, ಮುಖ್ಯ ಸಂಪಾದಕರು, ಸಂಪಾದಕರು ಹಾಗೂ ವರದಿಗಾರರು ಇಂದಿರಾ ಅವರಿಗೆ ಜಂಟಿಯಾಗಿ ಮತ್ತು ವಿವಿಧ ಹಂತದಲ್ಲಿ ವಾರ್ಷಿಕ ಶೇ 6ರ ಬಡ್ಡಿಯೊಂದಿಗೆ ₹10 ಲಕ್ಷ ಪಾವತಿಸುವಂತೆ ನಿರ್ದೇಶಿಸಲಾಯಿತು.

ಆಕ್ಷೇಪಿತ ಸುದ್ದಿಯನ್ನು ಮಲಯಾಳಂ ಮನೋರಮಾದ ಮುಖಪುಟದಲ್ಲಿ ಸೆಪ್ಟೆಂಬರ್ 14, 2020ರಂದು ಪ್ರಕಟಿಸಲಾಗಿತ್ತು. ಇಂದಿರಾ ಅವರು ಕ್ವಾರಂಟೈನ್‌ ನಿಯಮ ಉಲ್ಲಂಘಿಸಿರುವುದಷ್ಟೇ ಅಲ್ಲದೆ ಬ್ಯಾಂಕ್‌ಗೆ ತೆರಳಿ ಲಾಕರ್‌ ತೆರೆದ ಕುರಿತು ಕೇಂದ್ರ ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ ಎಂದು ಲೇಖನದಲ್ಲಿ ವಿವರಿಸಲಾಗಿತ್ತು. ಇಂದಿರಾ ಮತ್ತು ಜಯರಾಜನ್‌ ಅವರ ಪುತ್ರ ಸ್ವಪ್ನಾ ಅವರೊಂದಿಗೆ ಇದ್ದ ಕೆಲ ಛಾಯಾಚಿತ್ರಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ ತನಿಖೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಲಾಕರ್‌ ಬಳಸಲಾಗಿತ್ತು ಎಂದು ವರದಿ ಪ್ರಕಟಿಸಲಾಗಿತ್ತು.

ಪತ್ರಿಕೆ ತಾನು ಮಾಡಿದ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸಿಲ್ಲ ಎಂದ ನ್ಯಾಯಾಲಯ ಲೇಖನ ಮಾನನಷ್ಟ ಉಂಟುಮಾಡುವಂತಿದೆ ಎಂಬ ಇಂದಿರಾ ಅವರ ವಾದಕ್ಕೆ ತಲೆದೂಗಿತು. ಕ್ವಾರಂಟೈನ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದರೂ, ಅದು ಪ್ರಮುಖ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುವ ವಿಷಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ಇಂದಿರಾ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ ಮನೋರಮಾ ಅವರಿಗೆ ಪರಿಹಾರ ರೂಪವಾಗಿ ₹10 ಲಕ್ಷ ಪಾವತಿಸುವಂತೆ ಸೂಚಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
PK Indira v. Jacob Mathew.pdf
Preview

Related Stories

No stories found.
Kannada Bar & Bench
kannada.barandbench.com