ಧಾತ್ರಿ ಆಯುರ್ವೇದದ ಉತ್ಪನ್ನವಾದ ಧಾತ್ರಿ ತಲೆ ಕೇಶ ಕ್ರೀಮ್ ಬಳಸಿದರೆ ಆರು ತಿಂಗಳಲ್ಲಿ ತಲೆಯಲ್ಲಿ ಕೇಶ ಸೊಂಪಾಗಿ ಬೆಳೆಯಲಿದೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದ ಧಾತ್ರಿ ಆಯುರ್ವೇದ ಮತ್ತು ಆ ಉತ್ಪನ್ನದ ತಾರಾ ಪ್ರಚಾರಕ ಮಲಯಾಳಂ ನಟ ಅನೂಪ್ ಮೆನನ್ ಅವರಿಗೆ ಕೇರಳದ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ವೇದಿಕೆ ದಂಡ ವಿಧಿಸಿದೆ.
ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಒಕ್ಕೂಟದ ಅಧ್ಯಕ್ಷ ಸಿ ಟಿ ಸಾಹು ಮತ್ತು ಸದಸ್ಯರಾದ ಶ್ರೀಜಾ ಎಸ್ ಮತ್ತು ಡಾ. ಕೆ ರಾಧಾಕೃಷ್ಣನ್ ನಾಯರ್ ಅವರು ಆದೇಶ ಹೊರಡಿಸಿದ್ದು, ಕಳೆದ ವಾರ ವಿಸ್ತೃತವಾದ ಆದೇಶ ಬಿಡುಗಡೆ ಮಾಡಲಾಗಿದೆ.
“ತಿಳಿವಳಿಕೆಯುಳ್ಳ ಗ್ರಾಹಕ ಸಂಸ್ಕೃತಿಯ ಬೆಳವಣಿಗೆಯನ್ನು ಜಾಹೀರಾತುಗಳು ಉತ್ತೇಜಿಸಬೇಕು. ಇದರಿಂದ ಗ್ರಾಹಕರಿಗೆ ಬುದ್ಧಿವಂತಿಕೆಯಿಂದ ಉತ್ಪನ್ನಗಳನ್ನು ಆಯ್ಕೆ ಮಾಡಲು ಮತ್ತು ವಂಚಿಸುವ ಅಥವಾ ಮೋಸಗೊಳಿಸುವ ಉತ್ಪನ್ನಗಳನ್ನು ತಿರಸ್ಕರಿಸಲು ಸಾಧ್ಯವಾಗುತ್ತದೆ” ಎಂದು ಒಕ್ಕೂಟವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ʼಧಾತ್ರಿ ಕೇರ್ ಪ್ರೊಟೆಕ್ಟರ್ʼ ತಲೆ ಕೇಶ ಕ್ರೀಮ್ ಅನ್ನು ಬಳಸಿದ ಆರು ವಾರಗಳಲ್ಲಿ ಕೇಶ ಬೆಳವಣಿಗೆಯಾಗುತ್ತದೆ ಎಂಬ ಜಾಹೀರಾತಿನಲ್ಲಿ ಮೆನನ್ ಕಾಣಿಸಿಕೊಂಡಿದ್ದರು. ಜಾಹೀರಾತಿನ ಸೆಳೆತಕ್ಕೆ ಒಳಗಾದ ಫ್ರಾನ್ಸಿಸ್ ವಡಕ್ಕನ್ ಎಂಬವರು 2012ರಲ್ಲಿ ತನ್ನ ತಲೆ ಕೂದಲು ಬೆಳೆಯಬಹುದು ಎಂದು ಉತ್ಪನ್ನ ಖರೀದಿಸಿದ್ದರು. ಆದರೆ, ಆ ಉತ್ಪನ್ನವು ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿತ್ತು.
ಆ ಬಳಿಕ, ವಡಕ್ಕನ್ ಅವರನ್ನು ಅವರ ಪರಿಚಯಸ್ಥರು ಮತ್ತು ಕುಟುಂಬದವರು ಅಪಹಾಸ್ಯ ಮಾಡಿದ್ದರಿಂದ ನೊಂದು ಅವರು ವಕೀಲ ಬೆನ್ನಿ ಎ ಡಿ ಅವರ ಮೂಲಕ ಧಾತ್ರಿ, ನಟ ಮೆನನ್ ಹಾಗೂ ಕ್ರೀಮ್ ಖರೀದಿಸಿದ ಮೆಡಿಕಲ್ ಸ್ಟೋರ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಲ್ಲದೇ ತಾನು ಅನುಭವಿಸಿದ ಮಾನಸಿಕ ವೇದನೆಗೆ 5 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು.
ಒಕ್ಕೂಟದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ತಾನು ಅನುಮೋದಿಸುತ್ತಿರುವ ಉತ್ಪನ್ನದ ನಿಖರ ಸ್ವರೂಪದ ಬಗ್ಗೆ ತಿಳಿದಿರಲಿಲ್ಲ ಎಂದು ನಟ ಅನೂಪ್ ಮೆನನ್ ವಾದಿಸಿದ್ದರು. ಅಲ್ಲದೇ ತನ್ನ ತಲೆಯ ಕೇಶ ಬೆಳವಣಿಗೆಗೆ ಅಮ್ಮ ಮನೆಯಲ್ಲಿ ತಯಾರಿಸಿದ ಮದ್ದು ಬಳಸುತ್ತಿರುವುದಾಗಿ ವಿವರಿಸಿದ್ದರು.
ಕೇಶದ ಆರೈಕೆಗೆ ಉತ್ಪನ್ನ ಬಳಸಲಾಗುತ್ತದೆಯೇ ವಿನಾ ಕೇಶದ ಬೆಳವಣಿಗೆಗೆ ಅಲ್ಲ ಎಂದು ಭಾವಿಸಿದ್ದಾಗಿ ನಟ ಮೆನನ್ ಹೇಳಿದ್ದು, ಕಂಪೆನಿ ಕತೆ ಹೆಣೆಯುವುದರ ಜೊತೆಗೆ ಜಾಹೀರಾತಿನಲ್ಲಿ ಆಕರ್ಷಕ ಪದಪುಂಜಗಳನ್ನು ಸೇರಿಸಿತು ಎಂದಿದ್ದರು.
ವೈಯಕ್ತಿಕವಾಗಿ ತಾನು ಬಳಸದ ಉತ್ಪನ್ನದ ಪ್ರಚಾರ ಅಥವಾ ಅದರ ಬಗ್ಗೆ ತಿಳಿದುಕೊಳ್ಳದೇ ಮುಂದುವರಿಯದಂತೆ ಮೆನನ್ ಅವರಿಗೆ ಎಚ್ಚರಿಕೆ ನೀಡಿರುವ ಗ್ರಾಹಕರ ವೇದಿಕೆಯು ಧಾತ್ರಿ ಮತ್ತು ಮೆನನ್ ಅವರಿಗೆ ತಲಾ 10 ಸಾವಿರ ರೂಪಾಯಿ ದಂಡದ ಮೊತ್ತವನ್ನು ದೂರುದಾರರಿಗೆ ಪರಿಹಾರವಾಗಿ ಪಾವತಿಸುವಂತೆ ಆದೇಶಿಸಿದೆ. ವಡಕ್ಕನ್ ಅವರು ಕೇಶ ಕ್ರೀಮ್ ಖರೀದಿಸಿದ ಮೆಡಿಕಲ್ ಸ್ಟೋರ್‌ಗೆ 3 ಸಾವಿರ ರೂಪಾಯಿ ದಂಡ ಪಾವತಿಸುವಂತೆ ನಿರ್ದೇಶಿಸಲಾಗಿದೆ.
ಉತ್ಪನ್ನದಲ್ಲಿ ಉಲ್ಲೇಖಿಸಲಾಗಿರುವ ಹಕ್ಕು ನಿರಾಕರಣೆಗಳನ್ನು (ಡಿಸ್‌ಕ್ಲೈಮರ್) ಗುರುತಿಸಲಾಗದಷ್ಟು ಚಿಕ್ಕದಾಗಿ ಪ್ರಕಟಿಸಲಾಗಿದೆ. ಭೂತಗನ್ನಡಿ ಹಾಕಿಕೊಂಡೂ ಅದನ್ನು ಓದಲಾಗುವುದಿಲ್ಲ ಎಂದು ವೇದಿಕೆಯು ಹೇಳಿದೆ.
ಗುಣಮಟ್ಟ ಹೊಂದಿರದ ಉತ್ಪನ್ನಗಳನ್ನು ಖರೀದಿಸುವಂತೆ ಮಾಡಲು ಗ್ರಾಹಕರನ್ನು ಸಮ್ಮೋಹನಗೊಳಿಸುವುದಕ್ಕಾಗಿ ತರಹೇವಾರಿ ಮಾರುಕಟ್ಟೆ ತಂತ್ರ ಬಳಸುವುದಕ್ಕೂ ವೇದಿಕೆ ಅಸಮ್ಮತಿ ಸೂಚಿಸಿದೆ. “ತಾವು ಪತ್ರಕರ್ತರು ಎಂಬುದನ್ನು ಮರೆತು ಪತ್ರಿಕೆಗಳು ಮತ್ತು ಮಾಧ್ಯಮಗಳು ಬ್ರ್ಯಾಂಡ್‌ಗಳ ಪ್ರಚಾರದ ಚಾನೆಲ್‌ಗಳಿಗೆ ಸೀಮಿತವಾಗಿವೆ… ಜಾಹೀರಾತುಗಳು ಜನರಲ್ಲಿ ಗ್ರಾಹಕ ಬಯಕೆಯನ್ನು ಹುಟ್ಟುಹಾಕುತ್ತಿವೆ… ನಿಷ್ಪ್ರಯೋಜಕ ಉತ್ಪನ್ನಗಳನ್ನು ಖರೀದಿಸಲು ಜನರನ್ನು ಪ್ರೇರೇಪಿಸುತ್ತಿವೆ” ಎಂದು ವೇದಿಕೆ ಬೇಸರಿಸಿದೆ.
ವಿಶ್ವಾಸಾರ್ಹತೆ ದೃಢೀಕರಿಸಲು ಸಾಧ್ಯವಾಗದ ಉತ್ಪನ್ನಗಳನ್ನು ಅನುಮೋದಿಸದಂತೆ ಅನೂಪ್ ಮೆನನ್‌ಗೆ ವೇದಿಕೆ ಎಚ್ಚರಿಸಿದೆ. ಈ ಹಿಂದೆ ಜಾರಿಯಲ್ಲಿದ್ದ ಗ್ರಾಹಕರ ಸಂರಕ್ಷಣಾ ಕಾಯಿದೆಯ ನಿಬಂಧನೆಗಳನ್ನು ಆಧರಿಸಿ ದೂರುದಾರರ ಸಮಸ್ಯೆ ಬಗೆಹರಿಸಿದೆ. 2019ರ ಗ್ರಾಹಕ ಸಂರಕ್ಷಣಾ ಕಾಯಿದೆಯು ಸೆಲೆಬ್ರಿಟಿಗಳು ತಮಗೆ ಜ್ಞಾನವಿಲ್ಲದ ಉತ್ಪನ್ನಗಳನ್ನು ಅನುಮೋದಿಸುವುದರ ಕುರಿತಾದ ನಿಬಂಧನೆಗಳನ್ನು ಒಳಗೊಂಡಿದೆ.