ಕೇರಳದಲ್ಲಿ ಇನ್ನು ನ. 26 ವರದಕ್ಷಿಣೆ ನಿಷೇಧ ದಿನ: ವರದಕ್ಷಿಣೆ ಪಡೆಯುವುದಿಲ್ಲ ಎಂದು ಘೋಷಿಸಲಿರುವ ಸರ್ಕಾರಿ ನೌಕರರು

ವರದಕ್ಷಿಣೆ ಪ್ರಕರಣಗಳು ಕೇರಳದಲ್ಲಿ ಹೆಚ್ಚುತ್ತಿದ್ದು, ಅದರಲ್ಲಿಯೂ ವರದಕ್ಷಿಣೆ ಕಿರುಕುಳದ ಕಾರಣಕ್ಕೆ ವಿಸ್ಮಯ ಎನ್ನುವ ಮಹಿಳೆಯು ಇತ್ತೀಚೆಗೆ ಸಾವನ್ನಪ್ಪಿದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.
marriage
marriage

ಕೇರಳ ಸರ್ಕಾರವು ನವೆಂಬರ್ 26 ರಂದು ರಾಜ್ಯದಲ್ಲಿ ವರದಕ್ಷಿಣೆ ನಿಷೇಧ ದಿನ ಆಚರಿಸುವುದಾಗಿ ಘೋಷಿಸಿದೆ.

ಈ ಸಂಬಂಧ ಇತ್ತೀಚೆಗೆ ಹೊರಡಿಸಲಾದ ಸುತ್ತೋಲೆಯಲ್ಲಿ, ಎಲ್ಲಾ ಪುರುಷ ನೌಕರರಿಂದ ಮದುವೆಗೆ ಸಂಬಂಧಿಸಿದಂತೆ ಯಾವುದೇ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ವಿವಾಹವಾದ ಒಂದು ತಿಂಗಳ ಒಳಗೆ ಘೋಷಣಾಪತ್ರ ಪಡೆಯಲು ಸರ್ಕಾರದ ಸಾರ್ವಜನಿಕ ವಲಯದ ಮುಖ್ಯಸ್ಥರು (ಪಿಎಸ್‌ಯು), ಸ್ವಾಯತ್ತ ಸಂಸ್ಥೆಗಳು, ಸಾಂಸ್ಕೃತಿಕ ಮತ್ತು ಇತರ ಸಂಸ್ಥೆಗಳ ಮುಖ್ಯಸ್ಥರಿಗೆ ಆದೇಶಿಸಲಾಗಿದೆ.

ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಕೇರಳ ವರದಕ್ಷಿಣೆ ನಿಷೇಧ (ತಿದ್ದುಪಡಿ) ನಿಯಮಗಳು 2021ರ ಸೆಕ್ಷನ್ 10ರ ಅಡಿಯಲ್ಲಿರುವ ಅಧಿಕಾರ ಚಲಾಯಿಸುವ ಮೂಲಕ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯ ಇತರೆ ಪ್ರಮುಖ ಅಂಶಗಳು

  • ವರದಕ್ಷಿಣೆ ನಿಷೇಧ ದಿನದಂದು ರಾಜ್ಯದ ಪ್ರೌಢಶಾಲೆಗಳಿಗಿಂತ ಮೇಲಿನ ಮಟ್ಟದ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು “ವರದಕ್ಷಿಣೆ ನೀಡಬಾರದು ಅಥವಾ ತೆಗೆದುಕೊಳ್ಳಬಾರದು” ಎಂಬ ಪ್ರತಿಜ್ಞೆ ಸ್ವೀಕರಿಸಬೇಕು.

  • ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಈ ಘೋಷಣೆಯ ಕುರಿತು ಪ್ರತಿವರ್ಷ ಏಪ್ರಿಲ್ 10 ಮತ್ತು ಅಕ್ಟೋಬರ್ 10ರ ಮೊದಲು ಆಯಾ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗೆ ವರದಿ ಸಲ್ಲಿಸಬೇಕಾಗುತ್ತದೆ.

  • ನಿಗದಿತ ಸಮಯದೊಳಗೆ ಅಂತಹ ಘೋಷಣೆ ನೀಡದಿದ್ದರೆ, ಏಪ್ರಿಲ್ ಮತ್ತು ಅಕ್ಟೋಬರ್ 15 ರ ಮೊದಲು ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ವರದಕ್ಷಿಣೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

Also Read
ದೇಶದ್ರೋಹ ಪ್ರಕರಣ: ಲಕ್ಷದ್ವೀಪದ ನಟಿ ಆಯಿಷಾಗೆ ಬಂಧನದಿಂದ ಒಂದು ವಾರ ಕಾಲ ಮಧ್ಯಂತರ ರಕ್ಷಣೆ ನೀಡಿದ ಕೇರಳ ಹೈಕೋರ್ಟ್

ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವರದಕ್ಷಿಣೆ ನಿಷೇಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 2004ರಿಂದ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ಕೋರಿತ್ತು.

ಇತ್ತೀಚೆಗೆ ಕೇರಳದ ಕೊಲ್ಲಂನಲ್ಲಿ ನಡೆದ ವಿಸ್ಮಯ ಎನ್ನುವ ಮಹಿಳೆಯ ಸಾವಿನ ಪ್ರಕರಣದಲ್ಲಿ ವರದಕ್ಷಿಣೆಯ ಗಂಭೀರ ಆರೋಪ ಕೇಳಿ ಬಂದಿತ್ತು. ಪ್ರಕರಣ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ವಿಸ್ಮಯ ತಾನು ಗಂಡನಿಂದ ಹಲ್ಲೆಗೊಳಗಾಗಿರುವ ಚಿತ್ರಗಳನ್ನು ಸಂಬಂಧಿಕರಿಗೆ ಕಳಿಸಿದ ಕೆಲ ದಿನಗಳಲ್ಲೇ ಆಕೆಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ ಮನೆಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ ಜಾಮೀನು ನಿರಾಕರಿಸಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಕೇರಳ ಮಹಿಳಾ ಆಯೋಗ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ವರದಿ ಕೇಳಿತ್ತು.

ನ್ಯಾಯಮೂರ್ತಿ ಶಿರ್ಸಿ ವಿ ಅವರಿದ್ದ ಏಕಸದಸ್ಯ ಪೀಠವು ವರದಕ್ಷಿಣೆ ದುರುಪಯೋಗ ಕುರಿತು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ “ಗಂಡಂದಿರು ಮತ್ತು ಅವರ ಸಂಬಂಧಿಕರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗುತ್ತಿದ್ದರೂ ಮಹಿಳೆ ಮತ್ತು ಕುಟುಂಬ ಸದಸ್ಯರ ಕುರಿತು ಸಮಾಜದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ" ಎಂದು ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com