ಕೇರಳದಲ್ಲೊಂದು ಉಪನಾಮ ಸಮಸ್ಯೆ: ವಿದ್ಯಾರ್ಥಿಗಳು, ಪೋಷಕರ ಕಷ್ಟ ನೀಗಿಸಲು ಸಿಬಿಎಸ್‌ಸಿಗೆ ಸೂಚಿಸಿದ ರಾಜ್ಯ ಹೈಕೋರ್ಟ್‌

ಅರ್ಜಿದಾರರು ಎದುರಿಸುತ್ತಿರುವ ತೊಂದರೆಯನ್ನು ರಾಜ್ಯದ ಅನೇಕ ಪೋಷಕರು / ವಿದ್ಯಾರ್ಥಿಗಳು ಎದುರಿಸುತ್ತಿರುವ ಕಾರಣ, ಈ ಪೋಷಕರ ಅಹವಾಲನ್ನೇ ರಾಜ್ಯದ ಎಲ್ಲರ ಅನುಕೂಲಕ್ಕಾಗಿ ಪರಿಗಣಿಸುವಂತೆ ಸಿಬಿಎಸ್‌ಇಗೆ ನ್ಯಾಯಾಲಯ ಸೂಚಿಸಿದೆ.
ಕೇರಳದಲ್ಲೊಂದು ಉಪನಾಮ ಸಮಸ್ಯೆ: ವಿದ್ಯಾರ್ಥಿಗಳು, ಪೋಷಕರ ಕಷ್ಟ ನೀಗಿಸಲು ಸಿಬಿಎಸ್‌ಸಿಗೆ ಸೂಚಿಸಿದ ರಾಜ್ಯ ಹೈಕೋರ್ಟ್‌
Published on

ಬಹುತೇಕ ಕೇರಳಿಗರು ನಿರ್ದಿಷ್ಟ ಉಪನಾಮ ಅಥವಾ ಕೊನೆಯ ಹೆಸರುಗಳನ್ನು ಹೊಂದಿಲ್ಲ ಎಂಬುದನ್ನು ಗಮನಿಸಿರುವ ಕೇರಳ ಹೈಕೋರ್ಟ್‌ ಮಂಡಳಿ ಪರೀಕ್ಷೆಗಾಗಿ ಸಿಬಿಎಸ್‌ಇಯ ಹೊಸ ಅರ್ಜಿ ನಮೂನೆಯನ್ನು ಪರಿಗಣಿಸದಿರುವಂತೆ ಸೂಚಿಸಿದೆ.

ಸಿಬಿಎಸ್‌ಇಯ ಹೊಸ ನಮೂನೆಯ ಅರ್ಜಿಯಿಂದ ವಿನಾಯ್ತಿ ನೀಡುವಂತೆ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ ನಗರೇಶ್‌ ಅವರಿದ್ದ ಏಕಸದಸ್ಯ ಪೀಠ ಸಲಹೆ ನೀಡಿದೆ.

ಕೇರಳದಲ್ಲಿ ಉಪನಾಮಗಳೊಂದಿಗೆ ಗುರುತಿಸಿಕೊಳ್ಳದಿರುವುದು ಅಥವಾ ಆದ್ಯಕ್ಷರಗಳನ್ನು (Initials) ವಿಸ್ತರಿಸಿಕೊಳ್ಳದಿರುವುದು ಸಾಮಾನ್ಯವಾಗಿದ್ದು ಅನೇಕರು ಜಾತಿ ಸೂಚಕ ಎಂಬ ಕಾರಣಕ್ಕಾಗಿ ಪ್ರಜ್ಞಾಪೂರ್ವಕವಾಗಿ ತಮ್ಮ ಕೊನೆಯ ಹೆಸರುಗಳನ್ನು ಅಥವಾ ಕುಲನಾಮಗಳನ್ನು ಬಳಸುವುದಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

Also Read
ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಕೇರಳ ಸರ್ಕಾರ

ಬದಲಿಗೆ ಅನೇಕರು ಆದ್ಯಕ್ಷರಗಳನ್ನು, ಪೋಷಕರ ಹೆಸರನ್ನು ಅಥವಾ ಸಂಬಂಧ ಸೂಚಕವಲ್ಲದ ಹೆಸರನ್ನು ತಮ್ಮ ಮೊದಲ ಹೆಸರಿನ ಕೊನೆಗೆ ಬಳಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ. ವಿದ್ಯಾರ್ಥಿ / ತಾಯಿ / ತಂದೆ / ಪೋಷಕರ ವಿಸ್ತೃತ ಹೆಸರನ್ನು ನೀಡಬೇಕು ಮತ್ತು ಯಾವುದೇ ಸಂಕ್ಷೇಪಣಗಳನ್ನು ಬಳಸಬಾರದು ಎಂದು ಸಿಬಿಎಸ್‌ಇ ತನ್ನ ಸುತ್ತೋಲೆಯಲ್ಲಿ ಸೂಚಿಸಿತ್ತು. ಅಲ್ಲದೆ ಹುಟ್ಟಿದ ದಿನಾಂಕದ ಪ್ರಮಾಣಪತ್ರ, ಶಾಲಾ ದಾಖಲೆಗಳು, ಆಧಾರ್, ಪಾಸ್‌ಪೋರ್ಟ್ ಮುಂತಾದ ಎಲ್ಲಾ ದಾಖಲೆಗಳಲ್ಲಿ ಒದಗಿಸಲಾದ ಹೆಸರಿನ ವಿವರ ಒಂದೇ ರೀತಿ ಇರಬೇಕೆಂದು ಸೂಚಿಸಿತ್ತು.

ಜನನ ಪ್ರಮಾಣಪತ್ರದ ಪ್ರಕಾರ ಅರ್ಜಿದಾರರ ಮಗನ ಹೆಸರು ತರುಣ್ ಎ. ಎಂಬುದಾಗಿದೆ. ಸಿಬಿಎಸ್‌ಇ ನಿರ್ದೇಶನ ಪಾಲಿಸಿದರೆ ಹೆಸರನ್ನು ಜನನ ನೋಂದಣಿ ದಾಖಲೆಗಳಲ್ಲಿ ಸರಿಪಡಿಸಬೇಕಾಗುತ್ತದೆ. ಇದು ತೊಡಕಿನ ಮತ್ತು ಸಮಯ ಹಿಡಿಯುವ ಪ್ರಕ್ರಿಯೆಯಾಗಿದೆ. ಅರ್ಜಿದಾರರು ಈ ಸಮಸ್ಯೆಯನ್ನೇ ಮುಂದಿಟ್ಟು ನ್ಯಾಯಾಲಯದ ಮೊರೆ ಹೋಗಿದ್ದರು. ಇಂತಹ ಸಂದರ್ಭಗಳಲ್ಲಿ ಅರ್ಜಿ ನಮೂನೆಯಲ್ಲಿ ಮತ್ತೊಂದು ಅಂಕಣವನ್ನು ಸೃಜಿಸಿ ಅದರಲ್ಲಿ ವಿದ್ಯಾರ್ಥಿ / ತಂದೆ / ತಾಯಿ / ಪೋಷಕರ ಮೊದಲಕ್ಷರಗಳ ವಿಸ್ತರಣೆಗೆ ಅವಕಾಶ ನೀಡಬೇಕೆಂದು ಕೋರಿದ್ದರು.

ಆದರೆ ಸಿಬಿಎಸ್‌ಇ ಪರ ವಕೀಲರು ಅರ್ಜಿ ನಮೂನೆಯಲ್ಲಿರುವ ಅಂಶ ಕೇವಲ ಸಲಹೆ ಮಾತ್ರ ಎಂದು ವಿವರಿಸಿದ ಬಳಿಕ ಹೈಕೋರ್ಟ್‌ ಯಾವುದೇ ಆದೇಶ ಹೊರಡಿಸಲು ಮುಂದಾಗಲಿಲ್ಲ. ವಿದೇಶಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಗೆ ನಂತರ ತೊಂದರೆಯಾಗಬಾರದೆಂಬ ಕಾರಣಕ್ಕೆ ಹೊಸ ಅರ್ಜಿ ನಮೂನೆ ಈ ರೀತಿ ಸೂಚನೆ ನೀಡಿದೆ ಎಂಬುದನ್ನು ಗಮನಿಸಿತು. ಅರ್ಜಿದಾರರು ಎದುರಿಸುತ್ತಿರುವ ತೊಂದರೆಯನ್ನು ರಾಜ್ಯದ ಅನೇಕ ಪೋಷಕರು / ವಿದ್ಯಾರ್ಥಿಗಳು ಎದುರಿಸುತ್ತಿರುವ ಕಾರಣ, ಈ ಪೋಷಕರ ಅಹವಾಲನ್ನೇ ರಾಜ್ಯದ ಎಲ್ಲರ ಅನುಕೂಲಕ್ಕಾಗಿ ಪರಿಗಣಿಸಬೇಕು. ಮುಂದಿನ ಬಾರಿ ಅರ್ಜಿ ನಮೂನೆಗಳನ್ನು ಪರಿಗಣಿಸುವಾಗ ಇಂತಹ ಸಮಸ್ಯೆಗಳನ್ನು ಗಮನಿಸಬೇಕು” ಎಂದು ನ್ಯಾಯಾಲಯ ಸೂಚಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಟಿ ಸೇತುಮಾಧವನ್, ವಕೀಲರಾದ ಪಿ ವಿ ಪ್ರೀತಿಮತ್ತು ಎಂ ವಿ ಬಾಲಗೋಪಾಲ್ ವಾದ ಮಂಡಿಸಿದರು. ಸಿಬಿಎಸ್‌ಇ ಪರವಾಗಿ ಸಿಬಿಎಸ್‌ಇ ಸ್ಥಾಯಿ ನ್ಯಾಯವಾದಿ ನಿರ್ಮಲ್ ಎಸ್ ಹಾಜರಿದ್ದರು.

Kannada Bar & Bench
kannada.barandbench.com