ಇನ್ನು ಆರು ತಿಂಗಳೊಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಕುರಿತ ಸಾಮಾಜಿಕ ಆರ್ಥಿಕ ಅಧ್ಯಯನ ವರದಿಯನ್ನು ಅಂತಿಮಗೊಳಿಸುವಂತೆ ಕೇರಳ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ಹತ್ತು ವರ್ಷಗಳ ಅಂತರದಲ್ಲಿ ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸೆಕ್ಷನ್ 11 ರ ಪ್ರಕಾರ ಇದನ್ನು ಕಡ್ಡಾಯಗೊಳಿಸಲಾಗಿದೆ.
ಸೌಲಭ್ಯಗಳ ವಿಸ್ತರಣೆಗಾಗಿ ಯಾವ ವರ್ಗದ ವ್ಯಕ್ತಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಪರಿಗಣಿಸಲು ಇದು ಅಗತ್ಯ ಎಂದು ನ್ಯಾಯಾಲಯ ಒತ್ತಿಹೇಳಿತು.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಗುರುತಿಸಲು ಕೇರಳ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ನಿರ್ದೇಶನ ನೀಡಿದೆ.
ಕಾಲಕಾಲಕ್ಕೆ ರಾಜ್ಯ ಸರ್ಕಾರ ಸಾಮಾಜಿಕ- ಆರ್ಥಿಕ ಸಮೀಕ್ಷೆ ನಡೆಸದೇ ಇರುವುದರಿಂದ ಈ ವಿಷಯದಲ್ಲಿ ಯಾವುದೇ ಕ್ರಮಕೈಗಳ್ಳಲು ಅಸಮರ್ಥವಾಗಿರುವುದಾಗಿ ಆಯೋಗ ಕೋರ್ಟ್ ಎದುರು ಒಪ್ಪಿಕೊಂಡಿತು. ಅಧ್ಯಯನ ನಡೆಸುವಂತೆ 1995ರಿಂದಲೂ ವಿನಂತಿ ಮಾಡಲಾಗುತ್ತಿದೆ ಎಂದು ಆಯೋಗ ಈ ಸಂದರ್ಭದಲ್ಲಿ ತಿಳಿಸಿತು.
ಈ ಸಂಬಂಧ ಆಯೋಗ 2017 ರಲ್ಲಿ ಕಡೆಯದಾಗಿ ವಿನಂತಿ ಮಾಡಿತ್ತು. ಕೊನೆಯ ಸಮೀಕ್ಷೆ ನಡೆದದ್ದು 1961ರಲ್ಲಿ ಎಂಬ ಮಾಹಿತಿ ಆದೇಶದಲ್ಲಿ ಇದೆ.
ಮತ್ತೆ ಮತ್ತೆ ಮನವಿ ಮಾಡಿದ ಬಳಿಕ ಕೇಂದ್ರ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಜಾತಿ ಸಮೀಕ್ಷೆ ನಡೆಸಲು ಕೇರಳ ಸರ್ಕಾರ ಯೋಜಿಸಿತು ಎಂದು ಆಯೋಗದ ಪರ ವಕೀಲರು ವಿವರಿಸಿದರು. ಸಮೀಕ್ಷೆಯನ್ನು2011 ರಲ್ಲಿ ಪೂರ್ಣಗೊಳಿಸಲಾಯಿತಾದರೂ ಇನ್ನೂ ಅದು ಪ್ರಕಟಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಯಿತು.
ಕೇಂದ್ರದ ವರದಿ ಇನ್ನೂ ರಾಜ್ಯ ಸರ್ಕಾರಕ್ಕೆ ಲಭಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಸಮಗ್ರ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸದೆ ಇದ್ದರೆ ಮೀಸಲಾತಿ ಕಲ್ಪಿಸಲು ಅನುಕೂಲವಾಗದು ಎಂದು ಆಯೋಗ ತಿಳಿಸಿತ್ತು.
"ಇಂದಿರಾ ಸಾಹ್ನಿ ಅವರ ಪ್ರಕರಣದಲ್ಲಿ ಘನ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಒಂದು ಸಂಗತಿಯಂತೂ ಸ್ಪಷ್ಟವಾಗಿದ್ದು (ರಾಜ್ಯ ಹಿಂದುಳಿದ ವರ್ಗಗಳ) ಆಯೋಗ ರಚಿಸುವುದು ಮತ್ತು ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಹಿಂದುಳಿದಿರುವ ವರ್ಗಗಳನ್ನು ಗುರುತಿಸಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಬೇಕಿದೆ "
ಕೇರಳ ಹೈಕೋರ್ಟ್
ಸರ್ಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವಂತಹ ಅತ್ಯಗತ್ಯವಾದ ಮಹತ್ವದ ವಿಷಯದಲ್ಲಿ ರಾಜ್ಯ ಸರ್ಕಾರ ನಿದ್ರಿಸುತ್ತಿರುವುದಕ್ಕೆ ಯಾವುದೇ ಸಮಜಾಯಿಷಿ ನೀಡಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದು ಸಂವಿಧಾನದ 15 ಮತ್ತು 16 ನೇ ವಿಧಿಗಳಿಂದ ರಾಜ್ಯಕ್ಕೆ ನೀಡಲಾದ ಜವಾಬ್ದಾರಿಯಾಗಿದೆ. ಸಂವಿಧಾನದ 340 ನೇ ವಿಧಿಯಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿತು.
ಕೋರ್ಟ್ ನೀಡಿರುವ ಆರು ತಿಂಗಳ ಗಡುವಿನ ಒಳಗಾಗಿ ಆಯೋಗ ಮತ್ತು ಕೇಂದ್ರಗಳೆರಡೂ ಅಧ್ಯಯನದ ವರದಿ ಅಂತಿಮಗೊಳಿಸಿ ಅದರ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.
ವಕೀಲರಾದ ಸುನಿಲ್ ಕುಮಾರ್, ಶಾಲಿನಿ ಲಾಲ್, ಒ.ಎ. ನುರಿಯಾ, ಮತ್ತು ಹ್ಯಾರಿಸ್ ಬೀರನ್ ಅರ್ಜಿದಾರರ ಪರ ವಾದ ಮಂಡಿಸಿದರು.