ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೇಲೆ ಪೊಟ್ಟುಕುತಲ್ ( ವಿಭೂತಿ, ಸಿಂಧೂರ, ಅಥವಾ ಚಂದನ ಲೇಪಿಸುವುದು) ವಿಧಿವಿಧಾನ ಆಚರಣೆಗೆ ಶುಲ್ಕ ವಿಧಿಸುವ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಇಂದು ರಾಜ್ಯದ ತಿರುವಾಂಕೂರು ದೇವಸ್ವಂ ಮಂಡಳಿಗೆ ಆದೇಶಿಸಿದೆ [ಮನೋಜ್ ಎಸ್ ನಾಯರ್ ಮತ್ತಿತರರು ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ನಡುವಣ ಪ್ರಕರಣ].
ಶಬರಿಮಲೆ ಯಾತ್ರಿಕರನ್ನು ಶೋಷಣೆಗೆ ಒಳಪಡಿಸುವ ಯಾವುದೇ ಘಟನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ ಯಾವುದೇ ದೇವಸ್ಥಾನಗಳಲ್ಲಿ ಇಂತಹ ಶೋಷಣೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಶಬರಿಮಲೆಯ ವಿಶೇಷ ಆಯುಕ್ತರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಎಡತಾವಲಂಗಳ (ದೇವಾಲಯಗಳು) ಮೇಲೆ ನಿಗಾ ಇರಿಸಿರುವುದಾಗಿ ಅದು ತಿಳಿಸಿದೆ.
ಯಾತ್ರಾರ್ಥಿಗಳ ಮುಖ್ಯ ಮೂಲ ಶಿಬಿರವಾದ ಏರುಮೇಲಿಯಲ್ಲಿ ಪೊಟ್ಟುಕುತಲ್‌ಗಾಗಿ ಪ್ರತಿ ವ್ಯಕ್ತಿಗೆ ₹ 10 ಸಂಗ್ರಹಿಸಲು ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿ ದೇವಸ್ವಂ ಮಂಡಳಿ ಈ ಹಿಂದೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಹೀಗೆ ಶುಲ್ಕ ವಿಧಿಸುವುದು ಧಾರ್ಮಿಕ ಸ್ವಾತಂತ್ರ್ಯದ ತಮ್ಮ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ. ಸಾಂಪ್ರದಾಯಿಕವಾಗಿ ಯಾವುದೇ ಶುಲ್ಕ ನೀಡದೆ ಆಚರಣೆ ನಡೆಸಿಕೊಂಡು ಬರಲಾಗುತ್ತಿತ್ತು, ಭಕ್ತರಿಗೆ ಹುಂಡಿಗಳನ್ನು ಇರಿಸಿ ಅವರ ಇಚ್ಛಾನುಸಾರ ದೇಣಿಗೆ ನೀಡುವ ಆಯ್ಕೆ ಇತ್ತು ಎಂದು ಅಯ್ಯಪ್ಪನ ಭಕ್ತರಾದ ಇಬ್ಬರು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ತಾನು ಟೆಂಡರ್ ಕರೆದಿರುವುದನ್ನು ಸಮರ್ಥಿಸಿಕೊಂಡಿದ್ದ ದೇವಸ್ವಂ ಮಂಡಳಿ ಅನಧಿಕೃತ ವ್ಯಕ್ತಿಗಳು ಪೊಟ್ಟುಕುತಲ್‌ಗಾಗಿ ಯಾತ್ರಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುವುದನ್ನು ತಡೆಯಲೆಂದು ಈ ಕ್ರಮಕೈಗೊಂಡಿರುವುದಾಗಿ ಹೇಳಿತ್ತು.
ಪ್ರಮುಖವಾಗಿ, ಮಂಡಳಿಯು ಈಗ ತನ್ನ ಟೆಂಡರ್ ಅನ್ನು ಹಿಂದಕ್ಕೆ ತೆಗೆದುಕೊಂಡಿದ್ದು ಪೊಟ್ಟುಕುತಲ್ ಅನ್ನು ಮಂಡಳಿಯಿಂದ ಉಚಿತವಾಗಿ ನೀಡಲಾಗುವುದು. ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಯಾರಾದರೂ ಶುಲ್ಕ ಕೇಳಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಘೋಷಿಸಿದೆ. ಪೊಟ್ಟುಕುತಲ್ ಅಗತ್ಯ ಧಾರ್ಮಿಕ ಆಚರಣೆಯಲ್ಲ ಬದಲಿಗೆ ಸಾಂಪ್ರದಾಯಿಕ ಪದ್ದತಿ ಎಂದು ಅದು ಇದೇ ವೇಳೆ ತಿಳಿಸಿತು. ಅಕ್ಟೋಬರ್ 15 ರಂದು ಮುಂದಿನ ವಿಚಾರಣೆ ನಡೆಯಲಿದೆ.