ಪಾವತಿ ಮಾಡಿ ಪಡೆಯುವ ಎರಡನೇ ಡೋಸ್‌ ಕೋವಿಶೀಲ್ಡ್ ಲಸಿಕೆಯನ್ನು 84 ದಿನಗಳಿಗೂ ಮೊದಲು ಪಡೆಯಲು‌ ಕೇರಳ ಹೈಕೋರ್ಟ್‌ ಅನುಮತಿ

ಪಾವತಿ ಮಾಡಿ ಕೋವಿಶೀಲ್ಡ್‌ ಲಸಿಕೆಯನ್ನು ಪಡೆಯುವ ವ್ಯಕ್ತಿಗಳು ಮೊದಲ ಡೋಸ್‌ ಪಡೆದ ನಾಲ್ಕು ವಾರಗಳ ನಂತರ ಹಾಗೂ 84 ದಿನಗಳ ಒಳಗೆ ಯಾವಾಗ ಬೇಕಾದರೂ ಎರಡನೇ ಡೋಸ್ ಕೋವಿಶೀಲ್ಡ್‌ ಲಸಿಕೆ ಪಡೆಯುವ ಆಯ್ಕೆಯ ಹಕ್ಕನ್ನು ಹೊಂದಿದ್ದಾರೆ ಎಂದ ನ್ಯಾಯಾಲಯ.
vaccine, Kerala high court
vaccine, Kerala high court

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಬಹುಮುಖ್ಯ ಬೆಳವಣಿಗೆಯಲ್ಲಿ, ಪಾವತಿ ಮಾಡಿ ಕೋವಿಶೀಲ್ಡ್‌ ಲಸಿಕೆಯನ್ನು ಪಡೆಯುವ ವ್ಯಕ್ತಿಗಳು ಮೊದಲ ಡೋಸ್‌ ಪಡೆದ ನಾಲ್ಕು ವಾರಗಳ ನಂತರ ಹಾಗೂ 84 ದಿನಗಳ ಒಳಗೆ ಯಾವಾಗ ಬೇಕಾದರೂ ಕೋವಿಶೀಲ್ಡ್‌ ಲಸಿಕೆಯನ್ನು ಪಡೆಯುವ ಆಯ್ಕೆಯ ಹಕ್ಕನ್ನು ಹೊಂದಿದ್ದಾರೆ ಎಂದು ಕೇರಳ ಹೈಕೋರ್ಟ್‌ ಸೋಮವಾರ ಹೇಳಿದೆ (ಕೈಟೆಕ್ಸ್‌ ಗಾರ್ಮೆಂಟ್ಸ್‌ ವರ್ಸಸ್‌ ಕೇರಳ ಸರ್ಕಾರ).

ಲಸಿಕೆಯ ಪಡೆಯುವುದು ಸ್ವಯಂ ಪ್ರೇರಿತವಾದ ಸಂಗತಿ ಎಂದು ಕೇಂದ್ರ ಸರ್ಕಾರವು ಹೇಳಿರುವುದರಿಂದ ಸರ್ಕಾರವು ಸೂಚಿಸಿರುವ 84 ದಿನಗಳ ಅವಧಿಯು ಕೇವಲ ಸಲಹಾತ್ಮಕವಾದುದು ಎನ್ನುವುದನ್ನು ಸೂಚಿಸುತ್ತದೆ ಎಂದು ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾ. ಪಿ ಬಿ ಸುರೇಶ್‌ ಕುಮಾರ್ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

“ಭಾರತ ಸರ್ಕಾರವು ತನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ತಾಣದಲ್ಲಿ ಲಸಿಕೆಯನ್ನು ಪಡೆಯುವುದು ಸ್ವಯಂ ಪ್ರೇರಿತವಾದುದಾಗಿದ್ದು, ಅದನ್ನು ಪಡೆಯುವಂತೆ ಯಾರ ಮೇಲೂ ಯಾವುದೇ ತೆರನಾದ ಹೇರಿಕೆಯಿಲ್ಲ ಎಂದು ಹೇಳಿದೆ. ಹೀಗಿರುವಾಗ, ಎರಡು ಡೋಸ್‌ ಲಸಿಕೆಯನ್ನು ಪಡೆಯುವ ಅವಶ್ಯಕತೆ ಹಾಗೂ ಉತ್ತಮ ರಕ್ಷಣೆಗಾಗಿ ಸೂಚಿಸಲಾಗಿರುವ ಎರಡು ಡೋಸ್‌ ಲಸಿಕೆಗಳ ನಡುವಿನ ಕಾಲಾವಧಿಯ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳು ಕೇವಲ ಸಲಹಾತ್ಮಕ ಎಂದಷ್ಟೇ ಪರಿಗಣಿಸಬೇಕಾಗುತ್ತದೆ,” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಹೀಗಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆಯನ್ನು ಬೇಗನೇ ಪಡೆಯುವ ಆಯ್ಕೆಯ ವಿಚಾರದಲ್ಲಿ ಸರ್ಕಾರದ ನೀತಿಯನುಸಾರವೇ ಪ್ರಭುತ್ವದ ಮಧ್ಯಪ್ರವೇಶಕ್ಕೆ ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ ಕೋವಿನ್‌ ಪೋರ್ಟಲ್‌ನಲ್ಲಿ ಎರಡನೇ ಡೋಸ್‌ ಲಸಿಕೆಯನ್ನು ನಾಲ್ಕು ವಾರಗಳ ನಂತರ 84 ದಿನಗಳ ಅವಧಿಗೂ ಮುನ್ನ ಪಡೆಯಲು ಅನುವು ಮಾಡಿ ತಕ್ಷಣವೇ ಸೂಕ್ತ ಮಾರ್ಪಾಟು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿತು. ಆ ಮೂಲಕ ಎರಡನೇ ಡೋಸ್ ಲಸಿಕೆ ಪಡೆಯುವವರು ನಾಲ್ಕು ವಾರಗಳ ನಂತರ ಸಮಯ ನಿಗದಿಪಡಿಸಿಕೊಳ್ಳಲು ಅನುವು ಮಾಡಿಕೊಡಲು ಸೂಚಿಸಿತು.

ಹೊರದೇಶಗಳಲ್ಲಿ ಕರ್ತವ್ಯಬಾಧ್ಯತೆ ಹೊಂದಿರುವ ಭಾರತ ಸರ್ಕಾರದ ಅಧಿಕಾರಿಗಳು, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೊರದೇಶಗಳಿಗೆ ತೆರಳಬೇಕಿರುವವರು ಮತ್ತು ಒಲಿಂಪಿಕ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಲಸಿಕೆ ಪಡೆಯುವ ಅವಧಿಯಲ್ಲಿ ವಿನಾಯತಿಯನ್ನು ನೀಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಹ ನ್ಯಾಯಾಲಯವು ಆದೇಶ ನೀಡುವ ವೇಳೆ ಗಮನದಲ್ಲಿರಿಸಿಕೊಂಡಿತು.

ಕೈರ್ಟ್‌ ಗಾರ್ಮೆಂಟ್ಸ್‌ ಲಿಮಿಟೆಡ್‌ ಎನ್ನುವ ಖಾಸಗಿ ಸಂಸ್ಥೆಯು ತನ್ನ ಸಿಬ್ಬಂದಿಗೆ 84 ದಿನಗಳ ಅವಧಿಗೂ ಮೊದಲೇ ಎರಡನೇ ಡೋಸ್‌ ಲಸಿಕೆಯನ್ನು ನೀಡಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯದ ಕಟಕಟೆ ಏರಿತ್ತು. ಲಸಿಕೆಯನ್ನು ನೀಡಲು ಅಗತ್ಯವಿರುವಷ್ಟು ಲಸಿಕಾ ದಾಸ್ತಾನನ್ನು ತಾನು ಖರೀದಿಸಿರುವುದಾಗಿ ಅದು ಮಾಹಿತಿ ನೀಡಿತ್ತು.

Related Stories

No stories found.
Kannada Bar & Bench
kannada.barandbench.com