ಗಂಭೀರ ಅನಾರೋಗ್ಯ ಪೀಡಿತ ತಂದೆಗೆ ತನ್ನ ಯಕೃತ್ತಿನ (ಪಿತ್ತಜನಕಾಂಗ) ಒಂದು ಭಾಗವನ್ನು ದಾನ ಮಾಡಲು 17 ವರ್ಷದ ಬಾಲಕಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ [ದೇವಾನಂದ ಪಿ ಪಿ ಮತ್ತು ಕೇರಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನಿತರರ ನಡುವಣ ಪ್ರಕರಣ].
ಸಕ್ಷಮ ಪ್ರಾಧಿಕಾರ ರಚಿಸಿದ್ದ ತಜ್ಞರ ಸಮಿತಿ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಾವಳಿ - 2014ರಡಿ ತಂದೆಗೆ ಅಂಗಾಂಗ ದಾನ ಮಾಡಲು ಅನುಮತಿ ನೀಡಿರಲಿಲ್ಲ. ಆದರೆ ಅನುಮತಿ ನೀಡಬಹುದು ಎಂದು ಮತ್ತೊಂದು ತಜ್ಞರ ತಂಡ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠ ಅದನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.
ಬಳಿಕ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಾಧಿಕಾರ ಹಾಗೂ ತಂದೆಯ ಜೀವ ಉಳಿಸಲು ಹೋರಾಡಿದ ಅಪ್ರಾಪ್ತ ಬಾಲಕಿ ದೇವಾನಂದಾ ಅವರ ದೃಢತೆಗೆ ನ್ಯಾ. ಅರುಣ್ ಮೆಚ್ಚುಗೆ ಸೂಚಿಸಿ ಅದನ್ನು ಆದೇಶದಲ್ಲಿ ದಾಖಲಿಸಿದ್ದಾರೆ.
“ದೇವಾನಂದಾ ಅವರು ನಡೆಸಿದ ಅವಿರತ ಹೋರಾಟ ಕಡೆಗೂ ಯಶಸ್ವಿಯಾಗಿದೆ ಎನ್ನುವುದನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ತನ್ನ ತಂದೆಯ ಜೀವ ಉಳಿಸಲು ಅರ್ಜಿದಾರರು ನಡೆಸಿದ ಹೋರಾಟವನ್ನು ಶ್ಲಾಘಿಸುವೆ. ದೇವಾನಂದಾರಂತಹ ಮಕ್ಕಳನ್ನು ಪಡೆದ ತಂದೆ ತಾಯಿಗಳು ಧನ್ಯರು. ಈ ನ್ಯಾಯಾಲಯ ನೀಡಿದ ನಿರ್ದೇಶನಗಳಿಗೆ ತ್ವರಿತವಾಗಿ ಸ್ಪಂದಿಸಿದ ಸಕ್ಷಮ ಪ್ರಾಧಿಕಾರದ ಬಗೆಗೂ ಮೆಚ್ಚುಗೆ ದಾಖಲಿಸುತ್ತೇನೆ. ತಮ್ಮ ವೃತ್ತಿಪರ ಕರ್ತವ್ಯದ ಕರೆಯಾಚೆಗೂ ನ್ಯಾಯಾಲಯ ಸೂಕ್ತ ತೀರ್ಮಾನ ಕೈಗೊಳ್ಳಲು ಶ್ರಮಿಸಿದ ವಕೀಲರಾದ ಪಿ ಆರ್ ಶಾಜಿ ಮತ್ತು ಪಿ ಎಸ್ ಅಪ್ಪು ಅವರಿಗೂ ಪ್ರಶಂಸೆ ಸಲ್ಲುತ್ತದೆ. ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ಕಾಯಿದೆ ಮತ್ತು ನಿಯಮಾವಳಿಯ ಇತರ ಅವಶ್ಯಕತೆಗಳಿಗೆ ಒಳಪಟ್ಟು ತನ್ನ ತಂದೆಯ ಶಸ್ತ್ರಚಿಕಿತ್ಸೆಗಾಗಿ ತನ್ನ ಯಕೃತ್ತಿನ ಒಂದು ಭಾಗ ದಾನ ಮಾಡಲು ಅರ್ಜಿದಾರರಿಗೆ ಅನುಮತಿ ನೀಡಲಾಗುತ್ತಿದೆ” ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]