ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪುತ್ರಿ ವೀಣಾ ಥೈಕಂಡಿಯಿಲ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರ ವಿರುದ್ಧದ ಲಂಚ, ಅಧಿಕಾರ ದುರುಪಯೋಗ ಆರೋಪಗಳ ಕುರಿತಾದ ಅರ್ಜಿಯನ್ನು ವಿಚಕ್ಷಣಾ ನ್ಯಾಯಾಲಯ ತಿರಸ್ಕರಿಸಿರುವುದನ್ನು ಪ್ರಶ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಹಾಯ ಮಾಡಲು ಕೇರಳ ಹೈಕೋರ್ಟ್ ಬುಧವಾರ ಅಮಿಕಸ್ ಕ್ಯೂರಿಯನ್ನು ನೇಮಿಸಿದೆ [ಗಿರೀಶ್ ಬಾಬು ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಕೊಚ್ಚಿ ಮಿನರಲ್ ಅಂಡ್ ರುಟೈಲ್ ಲಿಮಿಟೆಡ್‌ನೊಂದಿಗೆ (ಸಿಎಂಆರ್‌ಎಲ್) ಗಣಿಗಾರಿಕೆ ಮತ್ತಿತರ ವ್ಯಾಪಾರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್, ಅವರ ಪುತ್ರಿ ಹಾಗೂ ರಾಜ್ಯದ ಉನ್ನತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲಾಗಿತು. ಪ್ರಕರಣದ ಅರ್ಜಿದಾರರು ನಿಧನರಾಗಿದ್ದಾರೆ ಎಂದು ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಇಂದು ವಿಚಾರಣೆ ಆರಂಭವಾದಾಗ ನ್ಯಾಯಮೂರ್ತಿ ಕೆ ಬಾಬು ಅವರು ವಕೀಲ ಅಖಿಲ್ ವಿಜಯ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಲು ನಿರ್ಧರಿಸಿದರು.
ಉನ್ನತ ಸ್ಥಾನದಲ್ಲಿರುವವರ ವಿರುದ್ಧದ ಆರೋಪದಲ್ಲಿ ಮೇಲ್ನೋಟಕ್ಕೆ ಯಾವುದೇ ಹುರುಳಿಲ್ಲ ಎಂದು ಆಗಸ್ಟ್ 26 ರಂದು ತಿಳಿಸಿದ್ದ ಮುವಾಟ್ಟುಪುಳದಲ್ಲಿನ ವಿಚಕ್ಷಣಾ ವಿಶೇಷ ನ್ಯಾಯಾಲಯ ಆರೋಪ ತನಿಖೆಗಾಗಿ ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿತ್ತು.
ಪಿಣರಾಯಿ ಅವರ ಪುತ್ರಿ ವೀಣಾ ಥೈಕಂಡಿಯಿಲ್ ಒಡೆತನದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಿಎಂಆರ್‌ಎಲ್ ₹ 1.72 ಕೋಟಿಗಳಷ್ಟು ಹಣವನ್ನು ಅಕ್ರಮವಾಗಿ ಪಾವತಿ ಮಾಡಿದೆ ಎಂದು ಬಾಬು ಅವರು ವಿಚಕ್ಷಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವೀಣಾ ಅವರು ಸಿಎಂಆರ್‌ಎಲ್‌ನಿಂದ ಅನವಶ್ಯಕವಾಗಿ ಹಣ ಪಡೆದಿದ್ದಾರೆ ಎಂದು ದೂರಲಾಗಿತ್ತು.
ಪಿಣರಾಯಿ ಅವರಲ್ಲದೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ರಾಜಕಾರಣಿಗಳಾದ ಕುಂಜಾಲಿ ಕುಟ್ಟಿ, ವಿ ಕೆ ಇಬ್ರಾಹಿಂ ಕುಂಜು ಮತ್ತು ಎ ಗೋವಿಂದನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದಾರೆ ಎಂದು ಬಾಬು ಹೆಸರಿಸಿದ್ದರು. ಈ ಎಲ್ಲರನ್ನೂ ಬಾಬು ಅವರ ಅರ್ಜಿಯಲ್ಲಿ ಆರೋಪಿಗಳೆಂದು ಗುರುತಿಸಲಾಗಿತ್ತು.
ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಿಎಂಆರ್‌ಎಲ್ ₹1.72 ಕೋಟಿ ಪಾವತಿಸಿದ್ದರೂ ಅದು ಸಿಎಂಆರ್‌ಎಲ್‌ಗೆ ಸೇವೆ ಒದಗಿಸಿಲ್ಲವಾದ್ದರಿಂದ ಈ ವಹಿವಾಟು ನಕಲಿ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.
ಸಿಎಂಆರ್‌ಎಲ್ ಮತ್ತಿತರರ ವಿರುದ್ಧ ಮಾಡಲಾದ ಸಡಿಲ ಆರೋಪಗಳ ಹೊರತಾಗಿ ಲಂಚದ ಆರೋಪ ಬೆಂಬಲಿಸುವಂತಹ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬ ನೆಲೆಯಲ್ಲಿ ವಿಚಕ್ಷಣಾ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಬಾಬು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.